ADVERTISEMENT

ದೇಶ ಒಡೆಯುವುದು ಕಾಂಗ್ರೆಸ್ ಸಂಸ್ಕೃತಿ: ಸಂಸದ ಬಿ.ವೈ ರಾಘವೇಂದ್ರ ಆರೋಪ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2024, 14:12 IST
Last Updated 4 ಫೆಬ್ರುವರಿ 2024, 14:12 IST
ಕಾರ್ಯಕ್ರಮ ನಿಮಿತ್ತ ಸಾಗರಕ್ಕೆ ತೆರಳುವ ಮಾರ್ಗಮಧ್ಯೆ ಆನಂದಪುರದಲ್ಲಿ ಭಾನುವಾರ ಸಂಸದ ಬಿ.ವೈ. ರಾಘವೇಂದ್ರ ಕಾರ್ಯಕರ್ತರನ್ನು ಭೇಟಿ ಮಾಡಿದರು
ಕಾರ್ಯಕ್ರಮ ನಿಮಿತ್ತ ಸಾಗರಕ್ಕೆ ತೆರಳುವ ಮಾರ್ಗಮಧ್ಯೆ ಆನಂದಪುರದಲ್ಲಿ ಭಾನುವಾರ ಸಂಸದ ಬಿ.ವೈ. ರಾಘವೇಂದ್ರ ಕಾರ್ಯಕರ್ತರನ್ನು ಭೇಟಿ ಮಾಡಿದರು   

ಆನಂದಪುರ: ‘ದೇಶ ಒಡೆಯುವುದು ಕಾಂಗ್ರೆಸ್ ಸಂಸ್ಕೃತಿ. ಮೊದಲಿನಿಂದಲೂ ಆ ಪಕ್ಷ ಇದೇ ಕೆಲಸವನ್ನು ಮಾಡಿಕೊಂಡು ಬಂದಿದೆ’ ಎಂದು ಸಂಸದ ಬಿ.ವೈ. ರಾಘವೇಂದ್ರ ಆರೋಪಿಸಿದರು.

ಆನಂದಪುರದಲ್ಲಿ ಭಾನುವಾರ ಕಾರ್ಯಕರ್ತರನ್ನು ಭೇಟಿ ಮಾಡಿ ನಂತರ ಮಾತನಾಡಿದರು.

‘ಈಚೆಗೆ ಮಂಡನೆಯಾಗಿರುವುದು 3 ತಿಂಗಳ ಕಾಲಾವಧಿಯ ಬಜೆಟ್. ಹಿಂದೆ ಕೇಂದ್ರದಲ್ಲಿ ಮನಮೋಹನ್ ಸಿಂಗ್ ಸರ್ಕಾರವಿದ್ದಾಗಲೂ ರಾಜ್ಯಕ್ಕೆ ಏನೇನು ಅನ್ಯಾಯವಾಗಿದೆ ಎಂಬುದನ್ನು ತಿಳಿಸುವುದರ ಜೊತೆಗೆ ನಮ್ಮ ಸರ್ಕಾರದಿಂದ ರಾಜ್ಯಕ್ಕೆ ಏನು ಕೊಡುಗೆ ನೀಡಲಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೂ ಕೆಲವರು ರಾಜಕೀಯ ಉದ್ದೇಶಕ್ಕಾಗಿ ದೇಶ ಒಡೆಯುವ ಮಾತನ್ನು ಆಡುವುದು ಸರಿಯಲ್ಲ’ ಎಂದರು.

ADVERTISEMENT

‘ಶಿವಮೊಗ್ಗದ ತ್ಯಾವರೆಕೊಪ್ಪದ ಹುಲಿ–ಸಿಂಹಧಾಮದಿಂದ ಆನಂದಪುರದವರೆಗೆ ರಾಷ್ಟ್ರೀಯ ಹೆದ್ದಾರಿ 69‌ರ ನಿರ್ಮಾಣಕ್ಕಾಗಿ ₹ 600 ಕೋಟಿ ಮಂಜೂರಾತಿ ಸಿಕ್ಕಿದೆ. ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ₹ 15 ಸಾವಿರ ಕೋಟಿ ಅನುದಾನ ತರಲಾಗಿದೆ’ ಎಂದು ಹೇಳಿದರು.

ಎಲ್.ಕೆ. ಆಡ್ವಾಣಿಯವರಂತ ಹಿರಿಯ ರಾಜಕೀಯ ಮುತ್ಸದ್ದಿಗೆ ಭಾರತ ರತ್ನ ಸಿಕ್ಕಿರುವುದು ಸಂತಸದ ವಿಷಯ ಎಂದರು.

‘ಶಾಮನೂರು ಶಿವಶಂಕರಪ್ಪ ನನ್ನನ್ನು ಹೊಗಳಿ ಮಾತನಾಡಿರುವುದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಹಿಂದೆ ಕಾಗೋಡು ತಿಮ್ಮಪ್ಪ ಅವರೂ ರಾಘವೇಂದ್ರ ಒಳ್ಳೆಯ ಕೆಲಸ ಮಾಡುತ್ತಿದ್ದಾನೆ ಎಂದು ಹೊಗಳಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಬೇಕು ಎಂದು ಸ್ಪಿಕರ್ ಆಗಿದ್ದ ಸಂದರ್ಭದಲ್ಲಿ ಹೇಳಿದ್ದರು. ಆ ಹೇಳಿಕೆಗಳು ಹಿರಿಯರು ಯುವಕರಿಗೆ ನೀಡಿದ ಪ್ರೋತ್ಸಾಹದ ಮಾತುಗಳು ಅಷ್ಟೇ’ ಎಂದು ಹೇಳಿದರು.

‘ದೇಶದಲ್ಲಿ ಮೋದಿ ಸರ್ಕಾರದ ಪರ ಉತ್ತಮ ವಾತಾವಾರಣವಿದೆ. ಸಂಘಟನೆಯೊಂದಿಗೆ ಅತಿ ಹೆಚ್ಚು ಸ್ಥಾನಗಳನ್ನು ಬಿಜೆಪಿ ಪಡೆಯಲಿದೆ. ಶಿವಮೊಗ್ಗದಲ್ಲೂ ನಾನು ಮಾಡಿದ ಅಭಿವೃ‌ದ್ಧಿ ಪರ ಕೆಲಸಗಳನ್ನು ಜನರು ಗುರುತಿಸುತ್ತಾರೆ ಎಂಬ ವಿಶ್ವಾಸವಿದೆ’ ಎಂದರು.

ಆನಂದಪುರ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಶಾಂತಪ್ಪಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರತ್ನಾಕರ ಹೊನಗೋಡು, ರೇವಪ್ಪ, ಧನರಾಜ್, ಪ್ರದೀಪ್, ರಮೇಶ್, ಮಹೇಶ್, ದೇವರಾಜ್, ಹೇಮರಾಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.