ADVERTISEMENT

3 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅರಾಫತ್: ಮಂಗಳೂರು ಕುಕ್ಕರ್‌ ಸ್ಫೋಟಕ್ಕೆ ಸಹಕಾರ?

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2023, 23:30 IST
Last Updated 14 ಸೆಪ್ಟೆಂಬರ್ 2023, 23:30 IST
ಅರಾಫತ್ ಅಲಿ
ಅರಾಫತ್ ಅಲಿ   

ಶಿವಮೊಗ್ಗ: ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕ ಸಂಘಟನೆಯೊಂದಿಗೆ ನಂಟು ಹೊಂದಿರುವ ಆರೋಪದ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಗುರುವಾರ ಬಂಧಿಸಿರುವ ಶಂಕಿತ ಉಗ್ರ ಅರಾಫತ್ ಅಲಿ ಮಂಗಳೂರಿನಲ್ಲಿ ಕುಕ್ಕರ್‌ ಬಾಂಬ್ ಸ್ಫೋಟಕ್ಕೆ ಸಹಕಾರ ನೀಡಿರುವ ಕುರಿತು ಪೊಲಿಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟದ ಆರೋಪಿ ಶಾರಿಕ್‌, ನಿಷೇಧಿತ ‘ಅಲ್‌ ಹಿಂದ್‌ ಐಎಸ್‌’ ಸಂಘಟನೆಯೊಂದಿಗೆ ಸಂಪರ್ಕಕ್ಕೆ ಸಂಬಂಧಿಸಿದಂತೆ ಎನ್‌ಐಎ ಹುಡುಕುತ್ತಿರುವ ಅಬ್ದುಲ್ ಮತೀನ್ ಅಹಮದ್ ತಾಹಾ ಹಾಗೂ ಅರಾಫತ್ ಅಲಿ ಮೂವರು ತೀರ್ಥಹಳ್ಳಿಯವರು.

ಅರಾಫತ್‌ ಅಲಿ ತೀರ್ಥಹಳ್ಳಿಯ ಬಾಳೆಬೈಲು ಸಮೀಪದ ಜಟ್‌ಪಟ್‌ ನಿವಾಸಿ. ಆತನ ತಂದೆ ಮೋನು ತೀರ್ಥಹಳ್ಳಿಯ ಬಾಳೆಬೈಲಿನಲ್ಲಿ ಬೀಡಾ ಅಂಗಡಿ ಇಟ್ಟುಕೊಂಡಿದ್ದಾರೆ. ಅಬ್ದುಲ್ ಮತೀನ್ ತೀರ್ಥಹಳ್ಳಿಯ ಮೀನು ಮಾರುಕಟ್ಟೆ ರಸ್ತೆಯ ನಿವಾಸಿ. ಶಾರಿಕ್ ಅಲ್ಲಿನ ಸೊಪ್ಪುಗುಡ್ಡೆಯವನು.

ADVERTISEMENT

ಬಾಂಬ್‌ ತಯಾರಿಕೆ ಸೇರಿದಂತೆ ರಾಜ್ಯದ ಮಲೆನಾಡು, ಕರಾವಳಿ ಭಾಗದಲ್ಲಿನ ಐಎಸ್‌ ಸಂಘಟನೆಯ ಉಗ್ರ ಚಟುವಟಿಕೆಗೆ ಅರಾಫತ್ ಅಲಿ ಹಾಗೂ ಅಬ್ದುಲ್ ಮತೀನ್ ವಿದೇಶದಿಂದಲೇ ಕ್ರಿಪ್ಕೊ ಕರೆನ್ಸಿ ಮೂಲಕ ಹಣ ಕಳುಹಿಸುತ್ತಿದ್ದರು. ಇಬ್ಬರ ಸೂಚನೆಯಂತೆ ಶಾರಿಕ್ ಇಲ್ಲಿ ಕೆಲಸ ಮಾಡುತ್ತಿದ್ದ. ಆರೋಪಿಗಳು ಪರಸ್ಪರ ಸಂಪರ್ಕಕ್ಕೆ ಟೆಲಿಗ್ರಾಂ, ಇನ್‌ಸ್ಟಾಗ್ರಾಂ, ವೈರ್, ಎಲಿಮೆಂಟ್, ವಿಕ್ಕರ್ ಮಾಧ್ಯಮಗಳ ಬಳಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಅಬ್ದುಲ್ ಮತೀನ್ ಸುಳಿವು ನೀಡಿದವರಿಗೆ ₹ 3 ಲಕ್ಷ ಬಹುಮಾನ ನೀಡುವುದಾಗಿ ಎನ್‌ಐಎ ಈಗಾಗಲೇ ಘೋಷಿಸಿದೆ.

ಶಿವಮೊಗ್ಗ ಬಳಿ ಸ್ಪೋಟಕ್ಕೂ ನಂಟು?:

ಐಎಸ್‌ ಜೊತೆ ನಂಟು ಹೊಂದಿದ್ದ ಆರೋಪದ ಮೇಲೆ 2022ರ ಸೆಪ್ಟೆಂಬರ್ 20ರಂದು ಶಿವಮೊಗ್ಗ ಗ್ರಾಮೀಣ ಠಾಣೆ ಪೊಲೀಸರು ಇಲ್ಲಿನ ಸಿದ್ದೇಶ್ವರ ನಗರ ನಿವಾಸಿ ಸಯ್ಯದ್ ಯಾಸೀನ್ ಅಲಿಯಾಸ್ ಬೈಲು ಹಾಗೂ ಮಂಗಳೂರಿನ ಮಾಝ್ ಮುನೀರ್ ಅಹಮದ್‌ನನ್ನು ಬಂಧಿಸಿದ್ದರು. ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಶಾರಿಕ್ ನೇತೃತ್ವದಲ್ಲಿ ಬಾಂಬ್ ಸಿದ್ಧಪಡಿಸಿ ಶಿವಮೊಗ್ಗ ಸಮೀಪದ ಗುರುಪುರದ ಬಳಿಯ ತುಂಗಾ ನದಿ ತೀರದಲ್ಲಿ ಅದನ್ನು ಪರೀಕ್ಷಾರ್ಥ ಸ್ಫೋಟಿಸಿದ್ದು ಗೊತ್ತಾಗಿತ್ತು. ಇದಕ್ಕೂ ಅರಾಫತ್ ಅಲಿ, ಅಬ್ದುಲ್ ಮತೀನ್ ಕ್ರಿಪ್ಟೋ ಕರೆನ್ಸಿ ಮೂಲಕ ಹಣಕಾಸಿನ ನೆರವು ನೀಡಿದ್ದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.

ಮಂಗಳೂರಿನಲ್ಲಿ ಆಟೊದಲ್ಲಿ ಕುಕ್ಕರ್‌ ಬಾಂಬ್ ಸಾಗಿಸುವಾಗ ಅದು ಸ್ಫೋಟಗೊಂಡಿದ್ದರಿಂದ ಶಾರಿಕ್ ಗಾಯಗೊಂಡು ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಈಗ ಅರಾಫತ್ ಅಲಿ ಎನ್‌ಐಎ ಬಲೆಗೆ ಬಿದ್ದಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.