
ಶಿಕಾರಿಪುರ: ‘ಈ ನಾಡಿನ ಮಹಿಳೆಯರ ಸ್ವಾಭಿಮಾನ, ಶೌರ್ಯ, ಕರ್ತವ್ಯ ಪ್ರಜ್ಞೆಯ ಪ್ರತೀಕ ಒನಕೆ ಓಬವ್ವ. ಆಕೆಯ ಜೀವನ ಚರಿತ್ರೆಯನ್ನು ಎಲ್ಲರಿಗೂ ತಿಳಿಸುವ ಕೆಲಸ ಆಗಬೇಕಿದೆ’ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ತಾಲ್ಲೂಕು ಆಡಳಿತ ಆಯೋಜಿಸಿದ್ದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ದೇಶದ ಪ್ರಥಮ ಪ್ರಜೆ ದ್ರೌಪದಿ ಮುರ್ಮು ಬುಡಕಟ್ಟು ಜನಾಂಗಕ್ಕೆ ಸೇರಿದವರು ಎನ್ನುವುದು ನಾವೆಲ್ಲರೂ ಹೆಮ್ಮೆ ಪಡುವಂತಹದ್ದು. ಹಾಗೆಯೇ ಒನಕೆ ಓಬವ್ವ ದೇಶದ ಎಲ್ಲ ಜಾತಿ ಜನಾಂಗಕ್ಕೆ ಮಾದರಿಯಾಗುವಂತಹ ವ್ಯಕ್ತಿತ್ವ. ಅದನ್ನು ಒಂದು ಜಾತಿಗೆ ಸೀಮಿತಗೊಳಿಸುವ ಕೆಲಸ ಆಗಬಾರದು. ಛಲವಾದಿ ಸಮಾಜ ಮಾತ್ರವಲ್ಲ ಎಲ್ಲ ಸಮಾಜದವರೂ ಒಟ್ಟಾಗಿ ಜಯಂತಿ ಆಚರಣೆ ಮಾಡಬೇಕಿದೆ’ ಎಂದು ಹೇಳಿದರು.
ಛಲವಾದಿ ಸಮಾಜದ ಅಧ್ಯಕ್ಷ ಮಾಲತೇಶ ಸರ್ಕಾರ್ ಮಾತನಾಡಿ, ‘ಛಲವಾದಿ ಸಮಾಜ ತಾಲ್ಲೂಕಿನಲ್ಲಿ ಸಣ್ಣ ಸಮಾಜವಾಗಿದ್ದು ಸಂಘಟಿತರಾಗಿ ಹೋಗುವುದಕ್ಕೆ ಒನಕೆ ಓಬವ್ವ ಜಯಂತಿ ಕಾರಣವಾಗಿದೆ. ಜಯಂತಿ ಆಚರಣೆಗೆ ಅವಕಾಶ ಮಾಡಿದ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಮಾಜದ ಪರವಾಗಿ ಧನ್ಯವಾದಗಳು. ನಮ್ಮ ಸಮಾಜಕ್ಕೆ ನಿವೇಶನ, ಸಮುದಾಯ ಭವನ ನೀಡಬೇಕು’ ಎಂದು ಮನವಿ ಮಾಡಿದರು.
ಮಾಜಿ ಶಾಸಕ ಡಿ.ಎಸ್.ವೀರಯ್ಯ ಉಪನ್ಯಾಸ ನೀಡಿದರು. ಪುರಸಭೆ ಅಧ್ಯಕ್ಷೆ ಸುನಂದಾ ಮಂಜುನಾಥ್, ಕಾರ್ಯಕ್ರಮ ಸಮಿತಿ ಅಧ್ಯಕ್ಷ ಕೆ.ಆರ್.ರಾಜ್‌ಕುಮಾರ್, ತಹಶೀಲ್ದಾರ್ ಮಂಜುಳಾ ಭಜಂತ್ರಿ, ತಾಲ್ಲೂಕು ಪಂಚಾಯಿತಿ ಇಒ ಎನ್.ಜಿ.ನಾಗರಾಜ್, ಸಮಾಜದ ಮುಖಂಡರು, ಮಹಿಳೆಯರು ಇತರರಿದ್ದರು.
ಸೊರಬ: ‘ಚಿತ್ರದುರ್ಗದ ಕೋಟೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಒನಕೆ ಓಬವ್ವಳ ಸಮಾಧಿ ಸ್ಥಳವನ್ನು ಸರ್ಕಾರ ಅಭಿವೃದ್ಧಿಪಡಿಸಬೇಕು’ ಎಂದು ಸಾಮಾಜಿಕ ಚಿಂತಕ ರಾಜಪ್ಪ ಮಾಸ್ತರ್ ಒತ್ತಾಯಿಸಿದರು.
ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ ತಾಲ್ಲೂಕು ಛಲವಾದಿ ಸಮಾಜ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ರಾಜ್ಯದ 40 ಉಪ ಪಂಗಡಗಳಲ್ಲಿ ಛಲವಾದಿ ಸಮಾಜವೂ ಒಂದು. ಸಮಾಜದ ಕೆ.ಶಿವರಾಂ ಅವರು ಕನ್ನಡದಲ್ಲಿ ಪರೀಕ್ಷೆ ಬರೆದು ಮೊದಲ ಐಎಎಸ್ ಅಧಿಕಾರಿಯಾಗಿ ನೇಮಕಗೊಂಡು ಜನಸೇವೆ ಮಾಡಿರುವುದು ಹೆಮ್ಮೆಯ ಸಂಗತಿ’ ಎಂದು ಹೇಳಿದರು.
‘ಮಹಿಳೆಯನ್ನು ಅಡುಗೆ ಮನೆಗೆ ಸೀಮಿತಗೊಳಿಸದೇ, ಕ್ರೀಡೆ, ಕಲೆ, ಸಾಹಿತ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಬೇಕು. ಆಗ ಕುಟುಂಬಕ್ಕೆ, ಸಮಾಜಕ್ಕೆ ಒಂದು ದೊಡ್ಡ ಶಕ್ತಿಯಾಗಿ ಬೆಳೆಯಲು ಸಾಧ್ಯವಾಗಲಿದೆ. ಇಂತಹ ವೀರ ಮಹಿಳೆಯರನ್ನು ಮಾದರಿಯಾಗಿಟ್ಟುಕೊಂಡು ಪೋಷಕರು ತಮ್ಮ ಹೆಣ್ಣು ಮಕ್ಕಳನ್ನು ಬೆಳೆಸಬೇಕು’ ಎಂದು ತಿಳಿಸಿದರು.
ತಹಶೀಲ್ದಾರ್ ಮಂಜುಳಾ ಹೆಗಡಾಳ್ ಅಧ್ಯಕ್ಷತೆ ವಹಿಸಿದ್ದರು. ಛಲವಾದಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಮಂಜಪ್ಪ ಹಸ್ವಿ, ಉಪಾಧ್ಯಕ್ಷ ಬಸವಂತಪ್ಪ ಕೋಡಿಕೊಪ್ಪ, ಕಾರ್ಯದರ್ಶಿ ಬಲೀಂದ್ರಪ್ಪ, ಸಮಾಜ ಕಲ್ಯಾಣಾಧಿಕಾರಿ ಜಾತಿಗೇರ್, ತಾಲ್ಲೂಕು ವೈದ್ಯಾಧಿಕಾರಿ ನೂತನ್, ಪಶು ಆಡಳಿತಾಧಿಕಾರಿ ಪ್ರದೀಪಕುಮಾರ್, ಪುರಸಭೆ ಮುಖ್ಯಾಧಿಕಾರಿ ಚಂದನ್, ಸಿಡಿಪಿಒ ಸೋಮಪ್ಪ, ಎಪಿಎಂಸಿ ಕಾರ್ಯದರ್ಶಿ ಆಶಾ, ನಾಗರತ್ನ, ಶಿಲ್ಪಾ, ಶ್ಯಾಮಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.