
ಹೊಳೆಹೊನ್ನೂರು: ‘ಸಮಾಜದ ಉದ್ಧಾರ ಹಾಗೂ ಲೋಕ ಕಲ್ಯಾಣಾರ್ಥವಾಗಿ ಚನ್ನಗಿರಿಯಿಂದ ಬಾಳೆಹೊನ್ನೂರಿನ ರಂಭಾಪುರಿ ಪೀಠದವರೆಗೆ ಪಾದಯಾತ್ರೆ ಸಾಗುತ್ತಿದೆ’ ಎಂದು ಚನ್ನಗಿರಿಯ ಕೇದಾರ ಶಾಖಾ ಮಠದ ಕೇದಾರಲಿಂಗ ಶಿವಶಾಂತವೀರ ಸ್ವಾಮೀಜಿ ಹೇಳಿದರು.
ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ನ. 27ರಂದು ಹಮ್ಮಿಕೊಂಡಿರುವ ಲಿಂಗೈಕ್ಯ ಶಿವಾನಂದ ರಾಜೇಂದ್ರ ಶಿವಾಚಾರ್ಯರ ಪೀಠಾರೋಹಣದ ಶತಮಾನೋತ್ಸವದ ನಿಮಿತ್ತ ಭಾನುವಾರ ಪಾದಯಾತ್ರೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಇಷ್ಠಲಿಂಗ ಪೂಜೆ ಸೇರಿ ಪೂಜಾ ಕೈಕಾರ್ಯಗಳ ಮಹತ್ವವನ್ನು ಕಿರಿಯರಿಗೆ ಮನವರಿಕೆ ಮಾಡಬೇಕಿದೆ. ಸಮಾಜದ ಕಾರ್ಯಕ್ರಮಗಳಲ್ಲಿ ಯುವಶಕ್ತಿ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕು. ದುಶ್ಚಟಗಳಿಗೆ ಬಲಿಯಾಗಿ ಯುವ ಪೀಳಿಗೆ ಹಾದಿತಪ್ಪದಂತೆ ನೋಡಿಕೊಳ್ಳಬೇಕು. ಸಮಾಜಮುಖಿ ಕಾರ್ಯಗಳಿಗೆ ನೆರವು ನೀಡುವುದನ್ನು ಮರೆಯಬಾರದು. ಯುವ ಪೀಳಿಗೆಯವರು ಹೆಚ್ಚಾಗಿ ಪಾದಯಾತ್ರೆಗಳಲ್ಲಿ ತೋಡಗಬೇಕು. ಸಂಕಲ್ಪ ಮಾಡಿಕೊಂಡು ಪಾದಯಾತ್ರೆಯಲ್ಲಿ ಭಾಗವಹಿಸಿದರೆ ಕಾರ್ಯ ಸಾಧನೆಯ ಪುಣ್ಯ ಫಲ ಪ್ರಾಪ್ತಿಯಾಗುತ್ತದೆ’ ಎಂದು ತಿಳಿಸಿದರು.
ವೀರಶೈವ ಸಮಾಜದ ಮುಖಂಡ ಸಾರ್ಥಿ ರಾಜಪ್ಪ, ‘ಸಮಾಜದ ಪ್ರಗತಿಯಲ್ಲಿ ಮಠಗಳು ಪ್ರಶಸ್ತ್ಯ ಪಡೆಯುತ್ತವೆ. ಮಠಗಳು ಸಂಸ್ಕೃತಿಯ ಸಾಕ್ಷಿ ರೂಪ. ಶಿವ ಶಾಂತ ವೀರ ಶ್ರೀಗಳು ಕಾಯಕ ದಾಸೋಹದ ಜೊತೆಗೆ ಆಧ್ಯಾತ್ಮಿಕ ಚಿಂತನೆಗಳನ್ನು ಜನಮನದಲ್ಲಿ ಬಿತ್ತುತ್ತಿದ್ದಾರೆ. ಸಮಾಜದ ಬಂಧುಗಳಲ್ಲಿ ಸಹನೆ, ಶಾಂತಿ ಮತ್ತು ಸದ್ವಿಚಾರಗಳನ್ನು ತುಂಬುತ್ತಿದ್ದಾರೆ. ನಮ್ಮ ಭಾಗದಲ್ಲಿ ಶ್ರೀಗಳ ಪಾದಯಾತ್ರೆಗೆ ಉತ್ತಮ ಸ್ಪಂದನೆ ದೊರೆಯುತ್ತಿದೆ. ಈ ಭಾಗದ ಭಕ್ತರು ಸಾಮಾಜಿಕ ಕಾರ್ಯಗಳಿಗೆ ಕೈ ಜೋಡಿಸುವುದನ್ನು ಎಂದಿಗೂ ಮರೆಯುವುದಿಲ್ಲ’ ಎಂದು ಹೇಳಿದರು.
ಭಾನುವಾರ ಬೆಳಿಗ್ಗೆ ಚನ್ನಗಿರಿಯ ಕೇದಾರ ಶಾಖಾ ಪೀಠದಿಂದ ಆರಂಭವಾದ ಪಾದಯಾತ್ರೆ ಶಿವಮೊಗ್ಗ– ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಭದ್ರಾವತಿ ತಾಲ್ಲೂಕಿನ ಯಡೇಹಳ್ಳಿಯಲ್ಲಿ ವಿರಾಮ ನೀಡಲಾಯಿತು. ಯಡೇಹಳ್ಳಿಯಿಂದ ಮಧ್ಯಾಹ್ನದ ಪ್ರಸಾದದ ನಂತರ ಅರಹತೊಳಲು ಕೈಮರದಲ್ಲಿ ಕಲ್ಲಿಹಾಳು ಮೈದೊಳಲು ಭಾಗದ ಭಕ್ತರು ಶ್ರೀಗಳಿಗೆ ಅದ್ದೂರಿ ಸ್ವಾಗತ ನೀಡಿದರು. ಕೇದಾರಲಿಂಗ ಶಿವ ಶಾಂತವೀರ ಶ್ರೀಗಳು ಕೆಲಕಾಲ ಭಕ್ತರೊಂದಿಗೆ ಸಮಾಲೋಚನೆ ನಡೆಸಿದರು. ಸಮೀಪದ ಅರಕರೆಯ ವಿರಕ್ತ ಮಠದ ಚನ್ನವೀರ ಸ್ವಾಮೀಜಿ ಜೊತೆಯಾದರು.
ಸಂಜೆ ನಂತರ ಅರಹತೊಳಲು ಕೈಮರದಿಂದ ಆರಂಭವಾದ ಪಾದಯಾತ್ರೆ ಸಂಜೆ ವೇಳೆಗೆ ಹೊಳೆಹೊನ್ನೂರು ತಲುಪಿತು. ಹೊಳೆಹೊನ್ನೂರಿನಲ್ಲಿ ಶ್ರೀಗಳು ಹಾಗೂ ಭಕ್ತರಿಗೆ ವಾಸ್ಥವ್ಯದ ವ್ಯವಸ್ಥೆ ಮಾಡಲಾಗಿತ್ತು. ಸೋಮವಾರ ಬೆಳಿಗ್ಗೆಯಿಂದ ಹೊಳೆಹೊನ್ನೂರಿನಿಂದ ಆರಂಭವಾಗುವ ಪಾದಯಾತ್ರೆ ಶಿವಮೊಗ್ಗ ಮಾರ್ಗವಾಗಿ ಸಾಗಲಿದೆ. ಸೋಮವಾರ ರಾತ್ರಿ ಉಂಬ್ಳೆಬೈಲಿನಲ್ಲಿ, ಬುಧವಾರ ಎನ್.ಆರ್. ಪುರದಲ್ಲಿ ವಾಸ್ತವ್ಯಕ್ಕೆ ಸಿದ್ಧತೆ ಮಾಡಲಾಗಿದೆ ಎಂದರು.
ಸಮಾಜ ಮುಖಂಡ ಕಿರಣ್‌ಕುಮಾರ್, ಜಂಗಮ ಸಮಾಜದ ಅಧ್ಯಕ್ಷ ಹಾಲಸ್ವಾಮಿ, ಸಂಗೊಳ್ಳಿಯ ಶಿವಕುಮಾರ್, ರುದ್ರಸ್ವಾಮಿ, ಕೋಡಿಹಳ್ಳಿ ಸತೀಶ್, ನಿರಂಜನ, ಬೈರೇಶ್, ಹಾಲಸ್ವಾಮಿ, ವಿರೂಪಾಕ್ಷ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.