ADVERTISEMENT

ಶಿವಮೊಗ್ಗ: ಆನೆ ಹಿಮ್ಮೆಟ್ಟಿಸುವ ಶಿಬಿರ, ಬೇಲಿ ಅಳವಡಿಕೆಗೆ ಸಿದ್ಧತೆ

ಭದ್ರಾ ಭಾಗದಿಂದ ಶೆಟ್ಟಿಹಳ್ಳಿ ಅಭಯಾರಣ್ಯಕ್ಕೆ ಬರುವ ಕಾಡಾನೆಗಳು

ವೆಂಕಟೇಶ ಜಿ.ಎಚ್.
Published 19 ನವೆಂಬರ್ 2024, 5:41 IST
Last Updated 19 ನವೆಂಬರ್ 2024, 5:41 IST
ಆಯನೂರು ಬಳಿಯ ಚನ್ನನಹಳ್ಳಿ ಬಳಿ 2022ರ ಜನವರಿಯಲ್ಲಿ ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾಗಿದ್ದ ಗಂಡಾನೆ (ಸಂಗ್ರಹ ಚಿತ್ರ)
ಆಯನೂರು ಬಳಿಯ ಚನ್ನನಹಳ್ಳಿ ಬಳಿ 2022ರ ಜನವರಿಯಲ್ಲಿ ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾಗಿದ್ದ ಗಂಡಾನೆ (ಸಂಗ್ರಹ ಚಿತ್ರ)   

ಶಿವಮೊಗ್ಗ: ಶೆಟ್ಟಿಹಳ್ಳಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಎರಡು ವರ್ಷಗಳ ಅವಧಿಯಲ್ಲಿ ಮೂರು ಕಾಡಾನೆಗಳು ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾಗಿವೆ. ಸಾವು–ನೋವು ತಪ್ಪಿಸಲೆಂದೇ ಅರಣ್ಯ ಇಲಾಖೆ ಈ ಭಾಗದಲ್ಲಿ ಆನೆ ಹಿಮ್ಮೆಟ್ಟಿಸುವ ಶಿಬಿರ ಆರಂಭಿಸಲು ಸಿದ್ಧತೆ ನಡೆಸಿದ್ದು, ಜನವಸತಿ ಪ್ರದೇಶಗಳ ಬಳಿ ಬೇಲಿ ನಿರ್ಮಿಸಲು ಮುಂದಾಗಿದೆ.

ಪ್ರತಿ ವರ್ಷ ಜಮೀನುಗಳಲ್ಲಿ ಬೆಳೆ ಇರುವ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಅಭಯಾರಣ್ಯದಿಂದ ಶಿವಮೊಗ್ಗದ ಶೆಟ್ಟಿಹಳ್ಳಿ ವಿಭಾಗ ಹಾಗೂ ಸಾಗರದವರೆಗೆ ಆನೆಗಳು ಓಡಾಡುವ ಮಾರ್ಗವನ್ನು ಇಲಾಖೆ ಗುರುತಿಸಿದೆ.

‘ಆನೆಗಳ ಓಡಾಟದ ಜಾಗದಲ್ಲಿ ಈಗಾಗಲೇ 25 ಕಿ.ಮೀ.ವರೆಗೆ ಆನೆ ತಡೆ ಕಂದಕ (ಇಪಿಟಿ) ತೋಡಿದ್ದೇವೆ. ಜನನಿಬಿಡ ಪ್ರದೇಶದ ಬಳಿ ಬೇಲಿ ಹಾಕಲು ಹಾಗೂ ಆನೆಗಳನ್ನು ವಾಪಸ್ ಭದ್ರಾ ಅಭಯಾರಣ್ಯದತ್ತಲೇ ಹಿಮ್ಮೆಟ್ಟಿಸಲು ಶಿಬಿರ ಆರಂಭಿಸಲಿದ್ದೇವೆ’ ಎಂದು ಶಿವಮೊಗ್ಗ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಸಿಸಿಎಫ್) ಕೆ.ಟಿ. ಹನುಮಂತಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ವಿದ್ಯುತ್ ಸ್ಪರ್ಶದಿಂದ ಆನೆಗಳು ಸಾವಿಗೀಡಾದರೆ ಅದಕ್ಕೆ ಸಂಬಂಧಿಸಿದ ಜಮೀನಿನ ಮಾಲೀಕನನ್ನು ಹೊಣೆಯಾಗಿಸುತ್ತೇವೆ. ಅಪರಾಧ ಸಾಬೀತಾದಲ್ಲಿ ಏಳು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗುತ್ತದೆ. ಗ್ರಾಮೀಣರಲ್ಲಿ ಇದರ ಬಗ್ಗೆ ಮಾಹಿತಿ ಇಲ್ಲ. ಹೀಗಾಗಿ ಕಾಡಂಚಿನ ಗ್ರಾಮಗಳಲ್ಲಿ ಜಾಗೃತಿ ಮೂಡಿಸಲಿದ್ದೇವೆ. ಈಗಾಗಲೇ ಹಲವು ಕಡೆ ಭಿತ್ತಿಪತ್ರ ಅಂಟಿಸಿದ್ದೇವೆ’ ಎಂದು ಅವರು ವಿವರಿಸಿದರು.

ಡ್ರೋಣ್ ಕಣ್ಣೊರೆಸುವ ತಂತ್ರ: ‘ಭದ್ರಾದಿಂದ ಶೆಟ್ಟಿಹಳ್ಳಿ ಅಭಯಾರಣ್ಯದ ಕಡೆಗೆ ಎಷ್ಟು ಆನೆಗಳು ಬಂದಿವೆ ಎಂಬ ಮಾಹಿತಿಯೇ ಅರಣ್ಯ ಇಲಾಖೆ ಬಳಿ ಇಲ್ಲ. ಇಲಾಖೆಯೂ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಡ್ರೋಣ್ ನೆರವಿನಿಂದ ಆನೆಗಳ ಓಡಾಟದ ಮಾಹಿತಿ ಸಂಗ್ರಹಿಸುತ್ತೇವೆ ಎನ್ನುತ್ತಾರೆ. ಚಿಕ್ಕಮಗಳೂರಿನ ಕಾಫಿ ಎಸ್ಟೇಟ್‌ಗಳಿಗೆ ಆನೆ ಬಂದರೆ ಮಾತ್ರ ಡ್ರೋಣ್ ಮೂಲಕ ಚಿತ್ರ ಪಡೆಯಲು ಸಾಧ್ಯ. ಇಲ್ಲಿಯದು ಕಾಡು ಪ್ರದೇಶ. ಮರಗಳ ದಟ್ಟಣೆ  ಜೊತೆಗೆ ಅಡಿಕೆ ತೋಟಗಳ ಮಧ್ಯೆ ಆನೆಗಳನ್ನು ಪತ್ತೆ ಮಾಡಲು ಡ್ರೋಣ್‌ಗೆ ಸಾಧ್ಯವಿಲ್ಲ. ಇದೆಲ್ಲ ಅರಣ್ಯ ಇಲಾಖೆಯ ಕಣ್ಣೊರೆಸುವ ತಂತ್ರ’ ಎಂದು ಪರಿಸರಾಸಕ್ತ ಶಿವಮೊಗ್ಗದ ದರ್ಶನ್ ಮೂಡಲಗಿ ಹೇಳುತ್ತಾರೆ.

‘ಸಕ್ರೆಬೈಲು ಕ್ಯಾಂಪ್‌ನಿಂದ ಆನೆಗಳನ್ನು ಕೊಂಡೊಯ್ದು ಚಿಕ್ಕಮಗಳೂರು, ಸಕಲೇಶಪುರ, ಹಾಸನದಲ್ಲಿ ಕಾಡಾನೆ ಹಿಡಿಯುತ್ತಾರೆ. ನಮ್ಮದೇ ಪ್ರದೇಶದಲ್ಲಿ ಆನೆಗಳನ್ನು ಹಿಡಿಯುತ್ತಿಲ್ಲ’ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

ಹೆಣ್ಣಾನೆ ಅರಸಿ ಬಂದು ಜೀವ ಬಿಡುತ್ತಿವೆ..!

ಭದ್ರಾ ಅಭಯಾರಣ್ಯದಿಂದ ಆಹಾರ ಅರಸಿ ಮಾತ್ರವಲ್ಲ ಸಕ್ರೆಬೈಲು ಆನೆ ಶಿಬಿರದ ಹೆಣ್ಣಾನೆಗಳ ಸಾಂಗತ್ಯ ಅರಸಿ ಬಂದು ಗಂಡಾನೆಗಳು ಜೀವ ಬಿಡುತ್ತಿವೆ. ಭದ್ರಾ ಭಾಗದಲ್ಲಿ ಹೆಣ್ಣಾನೆಗಳ ಸಂಖ್ಯೆ ಕಡಿಮೆ ಇರುವುದರಿಂದ ತುಂಗಾ ಜಲಾಶಯದ ಹಿನ್ನೀರು ಈಜಿಕೊಂಡು ಈ ಭಾಗಕ್ಕೆ ಬರುತ್ತಿವೆ ಎಂದು ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಹೇಳುತ್ತಾರೆ.

‘ಸಕ್ರೆಬೈಲ್‌ನ ಕ್ರಾಲ್ (ಆನೆ ಪಳಗಿಸುವ ಜಾಗ) ಹತ್ತಿರವೂ ಈ ಕಾಡಾನೆ ಬರುತ್ತಿವೆ. ಶಿಬಿರದಿಂದ ನಿತ್ಯ ಹೆಣ್ಣಾನೆಗಳನ್ನು ಕಾಡಿಗೆ ಮೇಯಲು ಬಿಡುತ್ತೇವೆ. ಆಗ ಅಲ್ಲಿ ಕಾಡಾನೆಗಳೊಂದಿಗೆ ಸಾಂಗತ್ಯವೇರ್ಪಡುತ್ತದೆ. ಈಚೆಗೆ ಭದ್ರಾ ಅಭಯಾರಣ್ಯ ಭಾಗದಿಂದ ಬಂದಿದ್ದ ಸಲಗಗಳು ಹೇಮಾವತಿ ಆನೆಯನ್ನು 12 ದಿನ ಭಾನುಮತಿಯನ್ನು 33 ದಿನ ವಾಪಸ್ ಶಿಬಿರಕ್ಕೆ ಬರಲು ಬಿಟ್ಟಿರಲಿಲ್ಲ. ಒತ್ತೆಯಾಳುಗಳ ರೀತಿ ಇಟ್ಟುಕೊಂಡಿದ್ದವು. ಶಿಬಿರದ ಬೇರೆ ಆನೆ ಕೊಂಡೊಯ್ದು ಬೆದರಿಸಿದರೂ ಪಟಾಕಿ ಹಾರಿಸಿದರೂ ಬಿಟ್ಟಿರಲಿಲ್ಲ. ಆಗ ಯಾರಿಗೂ ಹತ್ತಿರಕ್ಕೆ ಹೋಗಲೂ ಆಗುವುದಿಲ್ಲ. ಅವುಗಳಿಗೆ ತೃಪ್ತಿ ಆದಾಗ ಮಾತ್ರ ಅಲ್ಲಿಂದ ಮುಂದುವರಿಯುತ್ತವೆ. ಹೆಣ್ಣಾನೆ ಸಹಕರಿಸದಿದ್ದರೆ ಅವುಗಳನ್ನು ಗಾಯಗೊಳಿಸುತ್ತವೆ. ಇದು ಪದೇಪದೇ ಆಗುತ್ತಿದೆ. ಈಗ ಹೇಮಾವತಿ ಮತ್ತೆ ಗರ್ಭಿಣಿ ಆಗಿದ್ದಾಳೆ’ ಎಂದು ಅವರು ಮಾಹಿತಿ ನೀಡಿದರು.

ಅರಣ್ಯ ಇಲಾಖೆ–ಮೆಸ್ಕಾಂ ಸಮನ್ವಯದ ಕೊರತೆ?

ಶಿವಮೊಗ್ಗ ತಾಲ್ಲೂಕಿನ ಆಯನೂರು ಸಮೀಪದ ಚನ್ನಹಳ್ಳಿ ಬಳಿ 2022ರ ಜನವರಿಯಲ್ಲಿ ಎರಡು ಗಂಡಾನೆಗಳು ವಿದ್ಯುತ್ ಸ್ಪರ್ಶದಿಂದ ಸಾವಿಗೀಡಾಗಿದ್ದವು. ಈಗ ಅಲ್ಲಿಯೇ ಸಮೀಪದ ವೀರಗಾರನ ಭೈರನಕೊಪ್ಪದ ಬಳಿ ನ. 5ರಂದು 20 ವರ್ಷದ ಮತ್ತೊಂದು ಸಲಗ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದೆ. ಒಂದೇ ಪ್ರದೇಶದಲ್ಲಿಯೇ ಮೂರು ಆನೆಗಳು ಮೃತಪಟ್ಟಿವೆ. ಎರಡೂ ಪ್ರಕರಣಗಳಲ್ಲಿ ಕಾಡಂಚಿನ ಜಮೀನುಗಳಿಗೆ ಬೇಲಿ ನಿರ್ಮಿಸಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆಯಲಾಗಿದೆ. ಕಾಡಂಚಿನಲ್ಲಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದವರ ವಿರುದ್ಧ ಮೆಸ್ಕಾಂ ಕ್ರಮ ಕೈಗೊಳ್ಳುತ್ತಿಲ್ಲ. ಅರಣ್ಯ ಇಲಾಖೆಯೂ ಆ ಬಗ್ಗೆ ಮೆಸ್ಕಾಂನ ಗಮನ ಸೆಳೆಯುತ್ತಿಲ್ಲ. ಇದು ಎರಡೂ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯ ದ್ಯೋತಕ ಎಂದು ದರ್ಶನ್‌ ಮೂಡಲಗಿ ಆರೋಪಿಸುತ್ತಾರೆ. ವೀರಗಾರನ ಭೈರನಕೊಪ್ಪದ ಬಳಿ ಮುಖ್ಯರಸ್ತೆಯಿಂದ ಕೇವಲ 30 ಮೀಟರ್‌ ದೂರದಲ್ಲಿ ಆನೆ ಸಾವಿಗೀಡಾಗಿದೆ. ಅದೂ ಮೂರು ದಿನಗಳ ನಂತರ ಗೊತ್ತಾಗಿದೆ. ಹಾಗಿದ್ದರೆ ಅರಣ್ಯ ಇಲಾಖೆ ಸಿಬ್ಬಂದಿ ಎಲ್ಲಿ ಗಸ್ತು ತಿರುಗುತ್ತಾರೆ ಎಂದು ಅವರು ಪ್ರಶ್ನಿಸುತ್ತಾರೆ.

ಆನೆಗಳ ಸಾವನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ಕಾಡಂಚಿನ ಪ್ರದೇಶಗಳಲ್ಲಿ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆಯುವುದನ್ನು ತಪ್ಪಿಸಲು ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಜತೆ ಶೀಘ್ರ ಸಮನ್ವಯ ಸಭೆ ನಡೆಸಲಿದ್ದೇನೆ.
-ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.