ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣದ ನೋಟ
ಶಿವಮೊಗ್ಗ: ತಾಲ್ಲೂಕಿನ ಸೋಗಾನೆ ಬಳಿ ಇರುವ ವಿಮಾನ ನಿಲ್ದಾಣದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಪೈಲಟ್ ತರಬೇತಿ ಕೇಂದ್ರ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕಾಗಿ 30 ವರ್ಷಗಳ ಅವಧಿಗೆ ಹೂಡಿಕೆ, ನಿರ್ಮಾಣ ಹಾಗೂ ನಿರ್ವಹಣೆ (ಐಬಿಒ) ಆಧಾರದ ಮೇಲೆ ಫ್ಲೈಯಿಂಗ್ ಕ್ಲಬ್ ಆರಂಭಕ್ಕೆ ಜಾಗತಿಕ ಟೆಂಡರ್ ಕರೆಯಲಾಗಿದೆ.
ವಿಮಾನ ನಿಲ್ದಾಣದ ನಿರ್ವಹಣೆ ಮಾಡುತ್ತಿರುವ ರಾಜ್ಯ ಕೈಗಾರಿಕಾ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ನಿಗಮವು ಪೈಲಟ್ ತರಬೇತಿ ಕೇಂದ್ರ ಆರಂಭಕ್ಕೆ ಯೋಜನೆ ರೂಪಿಸಿದೆ. ಸದ್ಯ ಮೈಸೂರು ಹಾಗೂ ಕಲಬುರಗಿಯಲ್ಲಿ ಮಾತ್ರ ಖಾಸಗಿ ವಲಯದ ಪೈಲಟ್ ತರಬೇತಿ ಕೇಂದ್ರಗಳಿವೆ. ಪ್ರತಿ ವರ್ಷ 100 ಜನರಿಗೆ ಇಲ್ಲಿ ಪೈಲಟ್ ತರಬೇತಿ ನೀಡಲಾಗುವುದು. ಅದರಲ್ಲಿ 25 ಸೀಟುಗಳನ್ನು ಕರ್ನಾಟಕದ ವಿದ್ಯಾರ್ಥಿಗಳಿಗೆ ಮೀಸಲಿಡಲಾಗುವುದು ಎಂದು ತಿಳಿದುಬಂದಿದೆ.
ಫ್ಲೈಯಿಂಗ್ ಕ್ಲಬ್ ನಿರ್ಮಾಣಕ್ಕೆ ವಿಮಾನ ನಿಲ್ದಾಣದ ಬಳಿಯೇ 3,500 ಚದರ ಮೀಟರ್ ಸ್ಥಳ ನೀಡಲಾಗುತ್ತದೆ. ಅದರಲ್ಲಿ 1,500 ಚದರ ಮೀಟರ್ ಜಾಗವನ್ನು ಟರ್ಮಿನಲ್ ಪಕ್ಕದ ಹ್ಯಾಂಗರ್ ಸಮೀಪದಲ್ಲಿ ಒದಗಿಸಿದರೆ, 2,000 ಚದರ ಮೀಟರ್ ಜಾಗವನ್ನು ಟರ್ಮಿನಲ್ ಹೊರ ಭಾಗದಲ್ಲಿ ನೀಡಲಾಗುತ್ತದೆ. ಇದರಲ್ಲಿ ಕಚೇರಿ, ತರಗತಿ ಕೊಠಡಿ, ಗ್ರಂಥಾಲಯ ಹಾಗೂ ತರಬೇತಿ ಚಟುವಟಿಕೆಗೆ ಬೇಕಿರುವ ಅತ್ಯಾಧುನಿಕ ಸೌಲಭ್ಯ ಕಲ್ಪಿಸಲು ಬಳಸಲಾಗುತ್ತದೆ.
ಕೆಎಸ್‌ಐಐಡಿಸಿ ಫೈರ್ ಸೇಫ್ಟಿ, ಆಂಬುಲೆನ್ಸ್ ಸೌಲಭ್ಯ, ಏರ್ ಟ್ರಾಫಿಕ್ ಕಂಟ್ರೋಲ್ ಹಾಗೂ ರನ್ ವೇ ವ್ಯವಸ್ಥೆ ಮಾಡಲಿದೆ. ಎಲ್ಲವೂ ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ನಿಯಮಗಳ ಅನ್ವಯ ಕಾರ್ಯಾಚರಣೆ ನಡೆಸಲಿವೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.