ADVERTISEMENT

ಶಿವಮೊಗ್ಗ: ಜಿಲ್ಲೆಯ ಎಲ್ಲೆಡೆ ಭಾರಿ ಮಳೆ; ತುಂಬಿದ ಹಳ್ಳಕೊಳ್ಳ

ತುಂಬಿ ಹರಿದ ಅಂಬ್ಲಿಗೊಳ್ಳ ಜಲಾಶಯ; ತುಂಗಾ ಜಲಾಶಯಕ್ಕೆ 56 ಸಾವಿರ ಕ್ಯುಸೆಕ್‌ನಷ್ಟು ನೀರು

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 6:18 IST
Last Updated 23 ಜುಲೈ 2021, 6:18 IST
ಶಿವಮೊಗ್ಗ ತಾಲ್ಲೂಕಿನ ಸಕ್ರೇಬೈಲಿನಲ್ಲಿ ಮಳೆಯಲ್ಲಿಯೇ ಮಾವುತ ಕೊಡೆ ಹಿಡಿದು ಆನೆ ಏರಿ ಸಾಗಿದ ಪರಿ- ಚಿತ್ರ–ಶಿವಮೊಗ್ಗ ನಾಗರಾಜ್‌
ಶಿವಮೊಗ್ಗ ತಾಲ್ಲೂಕಿನ ಸಕ್ರೇಬೈಲಿನಲ್ಲಿ ಮಳೆಯಲ್ಲಿಯೇ ಮಾವುತ ಕೊಡೆ ಹಿಡಿದು ಆನೆ ಏರಿ ಸಾಗಿದ ಪರಿ- ಚಿತ್ರ–ಶಿವಮೊಗ್ಗ ನಾಗರಾಜ್‌   

ಶಿವಮೊಗ್ಗ: ಜಿಲ್ಲೆಯಾದ್ಯಂತ ಗುರುವಾರ ಜೋರು ಮಳೆ ಸುರಿದಿದ್ದು, ಶಿವಮೊಗ್ಗ ನಗರದಲ್ಲಿ ಬೆಳಿಗ್ಗೆಯಿಂದ ಬಿಡುವು ನೀಡದೆ ಮಳೆ ಸುರಿಯಿತು.

ಎರಡು ದಿನಗಳಿಂದ ಜಿಲ್ಲೆಯಲ್ಲಿ ಮಳೆ ಚುರುಕುಗೊಂಡಿದ್ದು, ತೀರ್ಥಹಳ್ಳಿ ಭಾಗದಲ್ಲಿನಿರಂತರ ಮಳೆ ಸುರಿಯುತ್ತಿದೆ. ಹಲವೆಡೆ ಸುರಿದ ಭಾರಿ ಮಳೆಗೆ ಹಳ್ಳ, ಕೊಳ್ಳಗಳುತುಂಬಿಹರಿಯುತ್ತಿವೆ.

ಹಿನ್ನೀರು ಭಾಗದಲ್ಲಿ ಜೋರು ಮಳೆಯಾಗಿದ್ದು, ಗುರುವಾರ ಸಂಜೆ ನಂತರ ತುಂಗಾ ಜಲಾಶಯಕ್ಕೆ 56 ಸಾವಿರ ಕ್ಯುಸೆಕ್‌ನಷ್ಟು ನೀರು ಹರಿದುಬಂದಿದೆ. ಈಗಾಗಲೇ ಜಲಾಶಯ ಭರ್ತಿಯಾಗಿರುವ ಕಾರಣ ಅಷ್ಟೇ ಪ್ರಮಾಣದ ನೀರನ್ನು ನದಿಗಳಿಗೆ ಬಿಡುವ ಸಾಧ್ಯತೆ ಹೆಚ್ಚಿದೆ. ತುಂಗಾ ಜಲಾಶಯದಿಂದ ಹೆಚ್ಚು ಪ್ರಮಾಣದಲ್ಲಿ ನೀರು ಬಿಡುತ್ತಿರುವುದರಿಂದ ತುಂಗಾ ನದಿ ಮೈದುಂಬಿ ಹರಿಯುತ್ತಿದೆ.

ADVERTISEMENT

ಅಬ್ಬರದ ಗಾಳಿ ಸಹಿತ ಮಳೆ

ಹೊಸನಗರ: ತಾಲ್ಲೂಕಿನಲ್ಲಿ ಮೂರು ದಿನಗಳಿಂದ ಮಳೆ ಜೋರಾಗಿದೆ. ಗುರುವಾರ ಹೊಸನಗರದಲ್ಲಿ 14.7 ಮಿ.ಮೀ. ಮಳೆ ಆಗಿದೆ.

ಗುರುವಾರದಿಂದ ಗಾಳಿ ಸಹಿತ ಮಳೆ ಆರಂಭವಾಗಿದೆ. ತಾಲ್ಲೂಕಿನಲ್ಲಿ ಸಣ್ಣ ಪುಟ್ಟ ಮನೆಯ ಗೋಡೆ ಕುಸಿತ ಬಿಟ್ಟರೆ ಯಾವುದೇ ಹಾನಿ ಸಂಭವಿಸಿಲ್ಲ.

ಅತಿವೃಷ್ಟಿಗೆ ತಾಲ್ಲೂಕು ಆಡಳಿತ ಸಜ್ಜು: ‘ತಹಶೀಲ್ದಾರ್ ನೇತೃತ್ವದ 8 ಅಧಿಕಾರಿಗಳ ತಂಡವನ್ನು ಈಗಾಗಲೇ ರಚಿಸಲಾಗಿದೆ. ತಾಲ್ಲೂಕಿ ನಲ್ಲಿ ಎಲ್ಲಿಯಾದರೂ ಅನಾಹುತ ಸಂಭವಿಸಿ ದರೆ ತಕ್ಷಣ ತಾಲ್ಲೂಕು ಕಚೇರಿಯ ಸಿಬ್ಬಂದಿ ತಂಡ ಅನಾಹುತವಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸಂತ್ರಸ್ತರಿಗೆ ಸ್ಪಂದಿಸಲಿದೆ’ ಎಂದು ತಹಶೀಲ್ದಾರ್ ವಿ.ಎಸ್.ರಾಜೀವ್ ತಿಳಿಸಿದ್ದಾರೆ.

ಸಾಗರದಲ್ಲಿ ಧಾರಾಕಾರ ಮಳೆ

ಸಾಗರ: ನಗರದಲ್ಲಿ ಗುರುವಾರ ಬೆಳಗಿನಿಂದ ಸಂಜೆವರೆಗೂ ಧಾರಾಕಾರ ಮಳೆ ಸುರಿದಿದೆ. ನಗರದ ಮಾರ್ಕೆಟ್ ರಸ್ತೆ ಸೇರಿ ಹಲವೆಡೆ ಚರಂಡಿ ನೀರು ರಸ್ತೆಯ ಮೇಲೆ ಹರಿದಿದ್ದು, ಜನರ ಹಾಗೂ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿತ್ತು.

ಗುರುವಾರ ನಗರದಲ್ಲಿ ಸಂತೆಯ ದಿನವಾಗಿದ್ದು, ಕೋವಿಡ್ ಕಾರಣಕ್ಕೆ ಸಂತೆ ಮೈದಾನದ ಬದಲು ವಿವಿಧ ಬಡಾವಣೆಗಳಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ವಿಪರೀತ ಮಳೆ ಸುರಿದ ಕಾರಣ ತರಕಾರಿ ಮಾರಾಟಗಾರರು ತಮ್ಮ ವಸ್ತುಗಳನ್ನು ಕಾಪಾಡಿಕೊಳ್ಳಲು ಹರಸಾಹಸ ಮಾಡಬೇಕಾಯಿತು. ನಗರದ ಚಂದ್ರ ಮಾವಿನಕೊಪ್ಪಲು ಬಡಾವಣೆಯ ಮನೆಯೊಂದರ ಗೋಡೆ ಕುಸಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.