
ಸಾಗರ: ಸಾಗರಕ್ಕೆ ಜಿಲ್ಲಾ ಕೇಂದ್ರದ ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿ ಸಾಗರ ಜಿಲ್ಲಾ ಹೋರಾಟ ಸಮಿತಿ ಬುಧವಾರ ನೀಡಿದ್ದ ಸಾಗರ ಬಂದ್ ಕರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ನಗರವ್ಯಾಪ್ತಿಯ ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಮಳಿಗೆಗಳು, ಹೋಟೆಲ್ ಗಳು ಸಂಪೂರ್ಣವಾಗಿ ಬಾಗಿಲು ಮುಚ್ಚಿದ್ದವು. ಬೀದಿ ಬದಿ ವ್ಯಾಪಾರಿಗಳು ಸಹ ತಮ್ಮ ವಹಿವಾಟನ್ನು ನಿಲ್ಲಿಸಿದ್ದರು. ಸರ್ಕಾರಿ ಕಚೇರಿ, ಬ್ಯಾಂಕ್‌ಗಳು ತೆರೆದಿದ್ದವು.
ಬೆಳಗಿನಿಂದ ಸಂಜೆಯವರೆಗೂ ಖಾಸಗಿ ಬಸ್‌ಗಳ ಸಂಚಾರ ಇರಲಿಲ್ಲ. ನ್ಯಾಯಾಲಯದ ಕಾರ್ಯಕಲಾಪಗಳಿಂದ ದೂರ ಉಳಿದ ವಕೀಲರು ಚಳವಳಿಗೆ ಬೆಂಬಲ ಸೂಚಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಆಟೋ ಚಾಲಕರ ಸಂಘ, ಕಟ್ಟಡ ಕಾರ್ಮಿಕರ ಸಂಘ, ಹೋಟೆಲ್ ಮಾಲಿಕರ ಸಂಘ, ವರ್ತಕರ ಸಂಘ, ಚಿನ್ನ ಬೆಳ್ಳಿ ಮಾರಾಟಗಾರರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ರಾಜ್ಯ ರೈತ ಸಂಘ, ದಲಿತ ಸಂಘರ್ಷ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ, ರಾಜಕೀಯ ಪಕ್ಷಗಳ ಪ್ರಮುಖರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಕೆಲವು ವೃತ್ತಗಳಲ್ಲಿ ಟೈಯರ್‌ಗಳಿಗೆ ಬೆಂಕಿ ಹಚ್ಚಿದ ಘಟನೆ ಬಿಟ್ಟರೆ ಬಂದ್ ಸಂಪೂರ್ಣವಾಗಿ ಶಾಂತಿಯುತವಾಗಿತ್ತು. ಗಣಪತಿ ದೇವಸ್ಥಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಸಾಗರ್ ಹೋಟೆಲ್ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
70 ವರ್ಷಗಳ ಹಿಂದೆಯೆ ಸಾಗರ ಉಪವಿಭಾಗ ಎಂದು ಘೋಷಣೆಯಾಗಿ ಸೊರಬ, ಶಿಕಾರಿಪುರ , ಹೊಸನಗರ ತಾಲ್ಲೂಕಿನ ಜನರು ತಮ್ಮ ಕೆಲಸಗಳಿಗಾಗಿ ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿಗೆ ಬರುತ್ತಿದ್ದಾರೆ. 109 ವರ್ಷಗಳಿಂದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಇಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಹಿನ್ನಲೆಯಲ್ಲಿ ಸಾಗರ ಜಿಲ್ಲಾ ಕೇಂದ್ರವಾಗುವ ಎಲ್ಲಾ ಅರ್ಹತೆ ಪಡೆದಿದೆ ಎಂದು ಪ್ರತಿಭಟನಾಕಾರರು ಪ್ರತಿಪಾದಿಸಿದರು.
ಭೌಗೋಳಿಕ ವಿಸ್ತೀರ್ಣದ ದೃಷ್ಟಿಯಿಂದ ನೋಡಿದರೂ ಸಾಗರ ಜಿಲ್ಲಾ ಕೇಂದ್ರವಾಗುವ ಮಾನದಂಡದೊಳಗೆ ಬರುತ್ತದೆ. ಪ್ರಸಿದ್ಧ ಪ್ರವಾಸಿ ತಾಣ, ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡಿರುವ ಸಾಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡುವುದು ಆಡಳಿತಾತ್ಮಕ ದೃಷ್ಟಿಯಿಂದಲೂ ಸೂಕ್ತವಾದ ನಿರ್ಧಾರವಾಗಿದೆ ಎಂದು ಪ್ರತಿಭಟನಾಕಾರರು ತಮ್ಮ ಅಹವಾಲು ಮಂಡಿಸಿದರು.
12 ವರ್ಷಗಳಿಂದ ಸಾಗರ ಭಾಗದ ಜನ ಜಿಲ್ಲಾ ಕೇಂದ್ರದ ಮಾನ್ಯತೆ ಬೇಡಿಕೆಯನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ನೂತನ ಜಿಲ್ಲೆಗಳ ರಚನೆ ಸಂದರ್ಭದಲ್ಲಿ ಸಾಗರವನ್ನು ಜಿಲ್ಲಾ ಕೇಂದ್ರವೆಂದು ಘೋಷಿಸದಿದ್ದರೆ ಇಲ್ಲಿನ ಸರ್ಕಾರಿ ಕಚೇರಿಗೆ ಬೀಗ ಜಡಿದು ತೀವ್ರ ಹೋರಾಟ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಸಾಗರ ಜಿಲ್ಲಾ ಹೋರಾಟ ಸಮಿತಿಯ ಪ್ರಮುಖರಾದ ತೀ.ನ.ಶ್ರೀನಿವಾಸ್, ಸುಂದರ್ ಸಿಂಗ್, ಬಸವರಾಜ್, ಮಂಜುನಾಥ್ ಆಚಾರ್, ಕೆ.ವಿ.ಜಯರಾಮ್, ಎಸ್.ವಿ.ಹಿತಕರ ಜೈನ್, ನಗರಸಭೆ ಮಾಜಿ ಅಧ್ಯಕ್ಷರಾದ ಟಿ.ಡಿ.ಮೇಘರಾಜ್, ಮಧುರಾ ಶಿವಾನಂದ್, ಮೈತ್ರಿ ಪಾಟೀಲ್, ಮಾಜಿ ಉಪಾಧ್ಯಕ್ಷ ಮಹ್ಮದ್ ಖಾಸಿಂ, ವಕೀಲರ ಸಂಘದ ಅಧ್ಯಕ್ಷ ಎಂ.ಬಿ.ಗಿರೀಶ್ ಗೌಡ, ಪ್ರಮುಖರಾದ ಎಚ್.ಎನ್.ಉಮೇಶ್, ಅಶ್ವಿನಿಕುಮಾರ್, ಕನ್ನಪ್ಪ ಬೆಳಲಮಕ್ಕಿ, ಆರ್.ಶ್ರೀನಿವಾಸ್, ಕೆ.ಎನ್.ನಾಗೇಂದ್ರ, ಕೆ.ಆರ್.ಗಣೇಶ್ ಪ್ರಸಾದ್, ಸದ್ದಾಂ, ಅಜೀಮ್, ಮನೋಜ್ ಕುಗ್ವೆ, ಕೋಮಲ್ ರಾಘವೇಂದ್ರ, ನಂದಾ ಗೊಜನೂರು, ಮಂಜಪ್ಪ ಹಿರೇನೆಲ್ಲೂರು, ಪ್ರಶಾಂತ್ ಕೆ.ಎಸ್. ಭಾಗವಹಿಸಿದ್ದರು.
ಇಂದು ಸಿಎಂ ಭೇಟಿ ಮಾಡಲಿರುವ ಸಮಿತಿ ಪ್ರಮುಖರು
ಸಾಗರ ಜಿಲ್ಲಾ ಹೋರಾಟ ಸಮಿತಿ ಪ್ರಮುಖರು ಡಿ.18 ರಂದು ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಜಿಲ್ಲಾ ಕೇಂದ್ರದ ಬೇಡಿಕೆಯನ್ನು ಮುಂದಿಡಲಿದ್ದಾರೆ. ಶಾಸಕ ಗೋಪಾಲಕೃಷ್ಣ ಬೇಳೂರು ಸಮಿತಿ ಪ್ರಮುಖರಿಗೆ ಸಿಎಂ ಭೇಟಿಗೆ ಅವಕಾಶ ಮಾಡಿಕೊಟ್ಟಿದ್ದು ಈ ಮೂಲಕ ಸಾಗರ ಜಿಲ್ಲಾ ಹೋರಾಟ ಮಹತ್ವದ ಘಟ್ಟ ತಲುಪಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.