
ಸಾಗರ: ಹವಾಮಾನಾಧಾರಿತ ಬೆಳೆ ವಿಮೆ ಸೌಲಭ್ಯವನ್ನು ರೈತರಿಗೆ ನೀಡುವ ವಿಷಯದಲ್ಲಿ ಸರಿಯಾದ ರೀತಿಯಲ್ಲಿ ನಡೆದುಕೊಳ್ಳದೆ ರೈತರನ್ನು ವಂಚಿಸಿದ ವಿಷಯ ಮಂಗಳವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪ್ರತಿಧ್ವನಿಸಿತು.
ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಸಭೆಯಲ್ಲಿ ಕೃಷಿ ಇಲಾಖೆ ಮೇಲಿನ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು, ‘ಮಳೆಯ ಪ್ರಮಾಣವನ್ನು ಸಮರ್ಪಕವಾಗಿ ಮಾಪನ ಮಾಡದೆ ರೈತರಿಗೆ ವಂಚಿಸುವ ಉದ್ದೇಶದಿಂದಲೆ ವಿಮಾ ಕಂಪೆನಿ ತಪ್ಪು ಮಾಹಿತಿ ನೀಡಿರುವ ಅನುಮಾನ ದಟ್ಟವಾಗಿದೆ. ಇಂತಹ ನಡೆಯನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಹವಾಮಾನಾಧಾರಿತ ಬೆಳೆ ವಿಮೆ ಯೋಜನೆಯಡಿ ಅರ್ಹ ರೈತರಿಗೆ ಪರಿಹಾರ ದೊರಕಬೇಕು ಎಂಬುದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆಶಯವಾಗಿದೆ. ಆದರೆ ವಿಮಾ ಕಂಪೆನಿ ತನ್ನ ಜವಾಬ್ಧಾರಿಯಿಂದ ತಪ್ಪಿಸಿಕೊಳ್ಳಲು ಅನ್ಯ ಮಾರ್ಗ ಹಿಡಿದಿದೆ. ಇದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಕೆಟ್ಟ ಹೆಸರು ಬರುವಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
ದೊಡ್ಡ ಮೊತ್ತದ ವಿಮೆ ಕಂತನ್ನು ಹೆಚ್ಚಿನ ಸಂಖ್ಯೆಯ ರೈತರಿಂದ ಕಟ್ಟಿಸಿಕೊಂಡು ಅರ್ಹ ರೈತರಿಗೆ ವಿಮಾ ಪರಿಹಾರದ ಮೊತ್ತವನ್ನು ನೀಡಲು ಹಿಂದೇಟು ಹಾಕಿರುವ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಈ ಸಂಬಂಧ ಸಮಗ್ರ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಹವಾಮಾನಾಧಾರಿತ ಬೆಳೆ ವಿಮೆ ಎಂಬ ಯೋಜನೆಯೆ ಒಂದು ಮೋಸದ ಯೋಜನೆಯಾಗಿದೆ. ಬಹುರಾಷ್ಟ್ರೀಯ ಕಂಪನಿಗಳು ಈ ಯೋಜನೆಯಡಿ ರೈತರನ್ನು ವಂಚಿಸುತ್ತಿವೆ. ಈ ಅಕ್ರಮ ಜಾಲದ ಪತ್ತೆ ಹಚ್ಚಿ ರೈತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಆರ್.ಜಯಂತ್ ಹೇಳಿದರು.
ಮಂಗನ ಕಾಯಿಲೆಯಿಂದ ತಾಲ್ಲೂಕಿನಲ್ಲಿ ಮೃತಪಟ್ಟವರ ಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ. ಮೃತಪಟ್ಟವರಿಗೆ ಈವರೆಗೂ ಪೂರ್ಣ ಪ್ರಮಾಣದ ಪರಿಹಾರ ವಿತರಣೆಯಾಗಿಲ್ಲ ಎಂಬ ವಿಷಯದ ಕುರಿತು ಕೆಡಿಪಿ ಸದಸ್ಯೆ ಪ್ರಭಾವತಿ ಚಂದ್ರಕಾಂತ್ ಸಭೆಯ ಗಮನ ಸೆಳೆದರು.
ತಹಶೀಲ್ದಾರ್ ರಶ್ಮಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶಿವಪ್ರಕಾಶ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಟರಾಜ್, ಡಾ.ನಾಗರಾಜ್, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಮಂಗನ ಕಾಯಿಲೆ; ಎಚ್ಚರ ವಹಿಸಿ ಈ ಹಿಂದೆ ತಾಲ್ಲೂಕಿನಲ್ಲಿ ಮಂಗನ ಕಾಯಿಲೆಯಿಂದ ಒಂದೇ ವರ್ಷ 22 ಮಂದಿ ಮೃತಪಟ್ಟಿದ್ದನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಮರೆಯಬಾರದು. ಹೊಸನಗರ ಭಾಗದಲ್ಲಿ ಮಂಗನ ಕಾಯಿಲೆ ಪ್ರಕರಣಗಳು ಈ ವರ್ಷ ಪತ್ತೆಯಾಗಿದೆ. ಈ ಮೊದಲು ಸಾಗರ ತಾಲ್ಲೂಕಿನ ಯಾವ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಯಿಲೆ ಕಾಣಿಸಿಕೊಂಡಿತ್ತೊ ಆ ಭಾಗದಲ್ಲಿ ಕಟ್ಟೆಚ್ಚರ ವಹಿಸಬೇಕು ಎಂದು ಶಾಸಕ ಬೇಳೂರು ಸಲಹೆ ನೀಡಿದರು.
ಮಾರಿಕಾಂಬಾ ಜಾತ್ರೆ: ಸರ್ಕಾರಿ ಕಟ್ಟಡಗಳಿಗೆ ಬಣ್ಣ ಹಚ್ಚಲು ಸೂಚನೆ ಕರ್ನಾಟಕದ ಅತೀ ದೊಡ್ಡ ಜಾತ್ರೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಾಗರದ ಮಾರಿಕಾಂಬಾ ದೇವಿ ಜಾತ್ರೆ ಫೆ. 3ರಿಂದ 9 ದಿನಗಳ ಕಾಲ ನಡೆಯಲಿದೆ. ರಾಜ್ಯದ ವಿವಿಧ ಭಾಗಗಳಿಂದ ಜಾತ್ರೆಗೆ ಜನರು ಆಗಮಿಸುವುದರಿಂದ ಇಲ್ಲಿನ ಸರ್ಕಾರಿ ಕಚೇರಿ ಶಾಲಾ ಕಟ್ಟಡಗಳಿಗೆ ಬಣ್ಣ ಹಚ್ಚಬೇಕು ಎಂದು ಶಾಸಕ ಬೇಳೂರು ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.