ADVERTISEMENT

ಸಂಸದ್ ಖೇಲ್ | ಯುವ ಕ್ರೀಡಾಪಟುಗಳಿಗೆ ಚಿಮ್ಮು ಹಲಗೆ: ಬಿ.ವೈ.ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2025, 5:10 IST
Last Updated 25 ಡಿಸೆಂಬರ್ 2025, 5:10 IST
ಶಿವಮೊಗ್ಗದಲ್ಲಿ ಬುಧವಾರ ಸಂಸದ್ ಖೇಲ್ ಮಹೋತ್ಸವವನ್ನು ಸಂಸದ ಬಿ.ವೈ. ರಾಘವೇಂದ್ರ ಬಲೂನು ಹಾರಿ ಬಿಡುವ ಮೂಲಕ ಉದ್ಘಾಟಿಸಿದರು
ಶಿವಮೊಗ್ಗದಲ್ಲಿ ಬುಧವಾರ ಸಂಸದ್ ಖೇಲ್ ಮಹೋತ್ಸವವನ್ನು ಸಂಸದ ಬಿ.ವೈ. ರಾಘವೇಂದ್ರ ಬಲೂನು ಹಾರಿ ಬಿಡುವ ಮೂಲಕ ಉದ್ಘಾಟಿಸಿದರು   

ಶಿವಮೊಗ್ಗ: ದೇಶದಲ್ಲಿ 2030ಕ್ಕೆ ಕಾಮನ್‌ವೆಲ್ತ್‌ ಕ್ರೀಡಾಕೂಟ ನಡೆಯುತ್ತಿದೆ. ಆ ಕೂಟದಲ್ಲಿ ದೇಶವನ್ನು ಪ್ರತಿನಿಧಿಸಲು ಪ್ರತಿಭೆಗಳ ಗುರುತಿಸಲು ಸಂಸದ್ ಖೇಲ್‌ ಮಹೋತ್ಸವ ಹಮ್ಮಿಕೊಳ್ಳಲಾಗಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಕನಸು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಇಲ್ಲಿನ ನೆಹರೂ ಕ್ರೀಡಾಂಗಣದಲ್ಲಿ ಬುಧವಾರ ಸಂಸದ್ ಖೇಲ್ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಕ್ರೀಡೆಗಳಲ್ಲಿ ಎಲ್ಲರೂ ಭಾಗವಹಿಸುವ ಅವಕಾಶ ಇದೆ. ಇಲ್ಲಿ ಸಾಧನೆ ತೋರುವವರಿಗೆ ಕಾಮನ್‌ವೆಲ್ತ್‌ ಕೂಟದಲ್ಲಿ ಪದಕ ಗೆಲ್ಲಲು ಕೇಂದ್ರ ಸರ್ಕಾರದಿಂದ ಅಗತ್ಯ ತರಬೇತಿ ಕೊಡಿಸಲಾಗುವುದು ಎಂದರು. 

ಪ್ರತೀ ಗ್ರಾಮ ಪಂಚಾಯಿತಿ, ಜಿಲ್ಲಾ, ರಾಜ್ಯಮಟ್ಟದಲ್ಲಿ ಈ ಕ್ರೀಡಾಕೂಡ ನಡೆಯಲಿದೆ. ಅದರ ಯಶಸ್ಸಿಗೆ ಎಲ್ಲರೂ ಕೈಜೋಡಿಸಿ ಎಂದು ಹೇಳಿದರು.

ADVERTISEMENT

ಯುವ ಜನರನ್ನು ಸಮಾಜಮುಖಿಯಾಗಿ ನಿರ್ಮಾಣ ಮಾಡಲು ಈ ಕ್ರೀಡಾಕೂಟ ವೇದಿಕೆ ಆಗಲಿದೆ. ಯುವಕರನ್ನು ಒಟ್ಟಿಗೆ ಸೇರಿಸಿ ಅವರಲ್ಲಿ ಕ್ರೀಡಾ ಮನೋಭಾವ ಉತ್ತೇಜಿಸಲು ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.

ಯುವಜನತೆ ಮದ್ಯ, ಮಾದಕ ವಸ್ತು ಸೇವನೆಯಂತಹ ವ್ಯಸನಗಳಿಂದ ಹೊರಗೆ ಬರಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಪ್ರತಿಜ್ಞೆ ತೊಡಬೇಕು. ಮಾದಕ ವಸ್ತುಗಳ ಮಾರಾಟ ಮಾಡುವವರ ಆಶಯವೇ ದೇಶದ ಯುವಕರ ಶಕ್ತಿ ಹರಣ ಮಾಡುವ ಹಾಗೂ ದೇಶ ವಿರೋಧಿ ಚಟುವಟಿಕೆಗಳಿಗೆ ಹಣ ಸಂಗ್ರಹ ಮಾಡುವುದಾಗಿದೆ. ಯುವಜನ ಮಾದಕ ವಸ್ತುಗಳ ಬದಲಿಗೆ ಕ್ರೀಡೆಯ ಬಗ್ಗೆ ಒಲವು ಬೆಳೆಸಿಕೊಳ್ಳಬೇಕು. ಜಾಗತಿಕ ಮಟ್ಟದಲ್ಲಿ ತಮ್ಮ ಶಕ್ತಿ ತೋರಿಸಬೇಕು. ಕ್ರೀಡಾಕೂಟದಲ್ಲಿ ಎಲ್ಲರೂ ಪಾಲ್ಗೊಳ್ಳಿ ಎಂದು ಹಾರೈಸಿದರು.

ಅಥ್ಲೆಟಿಕ್ಸ್‌ ಸೇರಿದಂತೆ ರಾಷ್ಟ್ರಮಟ್ಟದ ವಿವಿಧ ಕ್ರೀಡೆಗಳಲ್ಲಿ  ಜಿಲ್ಲೆಯನ್ನು ಪ್ರತಿನಿಧಿಸಿರುವ 17 ವರ್ಷದೊಳಗಿನ ವಿದ್ಯಾರ್ಥಿಗಳಾದ ಇರಾಮ್ ಶೇಖ್, ಲೇಖನ್ ಸಾಗರ್, ಅಮೂಲ್ಯಾ, ಕೆ.ಜಿ. ಸಿರಿ. ಅಪೂರ್ವಾ, ಎಸ್. ಮಿಥಾಲಿ, ವೇದಾ, ಪದ್ಮಾವತಿ, ಮಣಿಕಂಠಗೌಡ, ಆರ್ಯನ್, ಶರತ್, ನಬೀನ್, ಸಚಿನ್, ಸುಧನ್ವ, ಸಂಜಯ್, ಸಾಗರ್, ಸಂಜಯ್ ಹಾಗೂ ಖೇಲ್ ಇಂಡಿಯಾದಲ್ಲಿ ಚಿನ್ನದ ಪದಕ ಪಡೆದ ಸುದೀಪ್‌ ಅವರನ್ನು ಗೌರವಿಸಲಾಯಿತು. ಇದೇ ವೇಳೆ ಟೀ ಶರ್ಟ್ ಅನಾವರಣಗೊಳಿಸಲಾಯಿತು.

ಶಾಸಕ ಎಸ್‌.ಎನ್‌.ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕರಾದ ಕೆ.ಬಿ.ಅಶೋಕನಾಯ್ಕ, ಕೆ.ಜಿ. ಕುಮಾರಸ್ವಾಮಿ, ಸುಡಾ ಮಾಜಿ ಅಧ್ಯಕ್ಷ ಎಸ್‌.ದತ್ತಾತ್ರಿ ಹಾಜರಿದ್ದರು. ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ತಿಪ್ಪೇಸ್ವಾಮಿ ಬೋಧಿಸಿದರು.

ವ್ಯಕ್ತಿ ಸದೃಢವಾಗಿದ್ದರೆ ದೇಶ ಸದೃಢ ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯ. ಯುವಜನತೆ ಆರೋಗ್ಯಯುತ ಜೀವನ ಶೈಲಿ ರೂಢಿಸಿಳ್ಳಲು ಆಟೋಟ ವ್ಯಾಯಾಮದಲ್ಲಿ ತೊಡಗಿಕೊಳ್ಳಿ. ಮೊಬೈಲ್‌ಫೋನ್‌ನಿಂದ ದೂರವಿರಿ.
ಡಾ.ಧನಂಜಯ ಸರ್ಜಿ ವಿಧಾನಪರಿಷತ್ ಸದಸ್ಯ
2014ರ ನಂತರ ಅಭಿವೃದ್ಧಿ ಮಾತ್ರವಲ್ಲದೇ ವ್ಯಕ್ತಿತ್ವದ ವಿಕಸನಕ್ಕೂ ನರೇಂದ್ರ ಮೋದಿ ಒತ್ತು ಕೊಟ್ಟಿದ್ದಾರೆ. ನಶೆ ಮುಕ್ತ ಯುವ ಭಾರತವನ್ನು ಒಲಂಪಿಕ್ಸ್ ಕಾಮನ್ವೆಲ್ತ್‌ ಕೂಟಕ್ಕೆ ಈಗಿನಿಂದಲೇ ಸಜ್ಜುಗೊಳಿಸುತ್ತಿರುವುದು ಅವರ ದೂರದೃಷ್ಟಿಯ ದ್ಯೋತಕ
ಡಿ.ಎಸ್.ಅರುಣ್ ವಿಧಾನಪರಿಷತ್ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.