ADVERTISEMENT

ಹರ್ಷ ಹತ್ಯೆಗೆ ಬಳಸಿದ್ದ ಎರಡೂ ಕಾರುಗಳು ಜಪ್ತಿ

ಭದ್ರಾವತಿಯ ಕುಲುಮೆಯಲ್ಲಿ ಲಾಂಗ್‌ಗಳನ್ನು ಸಿದ್ಧಪಡಿಸಿಕೊಂಡಿದ್ದ ಹಂತಕರು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2022, 21:15 IST
Last Updated 25 ಫೆಬ್ರುವರಿ 2022, 21:15 IST
ಹರ್ಷ
ಹರ್ಷ   

ಶಿವಮೊಗ್ಗ: ಬಜರಂಗದಳದ ಕಾರ್ಯಕರ್ತ ಹರ್ಷ ಹತ್ಯೆಗೆ ಬಳಸಿದ್ದ ಎರಡು ಕಾರುಗಳನ್ನು ತನಿಖಾ ತಂಡ ಶುಕ್ರವಾರ ಜಪ್ತಿ ಮಾಡಿದೆ.

ಹಂತಕರು ಹತ್ಯೆ ಮಾಡುವ ಮೊದಲು ಒಂದು ಕಾರು, ನಂತರ ಅಲ್ಲಿಂದ ಪರಾರಿಯಾಗಲು ಮತ್ತೊಂದು ಕಾರು ಬಳಸಿರುವುದು ತನಿಖೆಯಿಂದ ದೃಢಪಟ್ಟಿದೆ. ಜಾರ್ಖಂಡ್‌ ರಾಜ್ಯದಲ್ಲಿ ನೋಂದಣಿಯಾದ ಸಂಖ್ಯಾಫಲಕ ಇರುವ ಬಿಳಿ ಬಣ್ಣದ ಸ್ವಿಫ್ಟ್‌ ಕಾರನ್ನು ಹಾಗೂ ಬೆಂಗಳೂರಿನ ಕೆಂಗೇರಿಯ ನೋಂದಣಿ ವಿಳಾಸ ಹೊಂದಿರುವ ಕೆಂಪು ಬಣ್ಣದ ಹುಂಡೈ ಐ–20 ಕಾರನ್ನು ಬಳಸಿದ್ದಾರೆ.

ಹತ್ಯೆಯ ದಿನ ಅಂದರೆ ಫೆ.20ರ ಬೆಳಿಗ್ಗೆ ಹರಿತವಾದ ಮೂರು ಲಾಂಗ್‌ಗಳನ್ನು ಭದ್ರಾವತಿಯ ಕುಲುಮೆಯೊಂದರಲ್ಲಿ ಸಿದ್ಧಪಡಿಸಿರುವುದು ಪತ್ತೆಯಾಗಿದೆ. ಅಂದು ಬೆಳಿಗ್ಗೆಯಿಂದಲೇ ಸೀಗೆಹಟ್ಟಿ ಬಳಿ ಕಾರಿನಲ್ಲಿ ಕುಳಿತ ಆರೋಪಿಗಳು ಹರ್ಷ ಅವರ ಚಲನವಲನದ ಮೇಲೆ ನಿಗಾ ಇರಿಸಿದ್ದರು. ರಾತ್ರಿ ಹೋಟೆಲ್‌ಗೆ ಬಂದಿದ್ದ ಸಮಯದಲ್ಲಿ ಹತ್ಯೆ ಮಾಡಿದ್ದಾರೆ ಎನ್ನುವುದು ತನಿಖೆಯಲ್ಲಿ ಖಚಿತವಾಗಿದೆ. ‘ಆರೋಪಿಗಳಲ್ಲಿ ಒಬ್ಬ ಹಳೆಯ ಕಾರುಗಳ ಮಾರಾಟದ ವ್ಯವಹಾರ ನಡೆಸುತ್ತಿದ್ದು, ಮಾರಾಟಕ್ಕೆ ಗ್ರಾಹಕರು ನೀಡಿದ ಕಾರುಗಳನ್ನು ಕೃತ್ಯಕ್ಕೆ ಬಳಸಿರಬಹುದು ಎಂಬ ಸಂಶಯವಿದೆ’ ಎಂದು ತನಿಖಾಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

ADVERTISEMENT

11 ದಿನ ಪೊಲೀಸ್‌ ವಶಕ್ಕೆ: ಪೊಲೀಸರ ಮನವಿಯ ಮೇರೆಗೆ ನ್ಯಾಯಾಲಯವು ಶುಕ್ರವಾರ 10 ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ 11 ದಿನಗಳ ಕಾಲ ಮತ್ತೆ ಪೊಲೀಸ್‌ ವಶಕ್ಕೆ ನೀಡಿದೆ.

ಸಂಜೆ 4ರ ವರೆಗಷ್ಟೇ ಕರ್ಫ್ಯೂ ಸಡಿಲಿಕೆ; ರಜೆ ಮುಂದುವರಿಕೆ

ಹರ್ಷ ಹತ್ಯೆಯ ನಂತರ ಉದ್ವಿಗ್ನಗೊಂಡಿದ್ದ ಶಿವಮೊಗ್ಗ ನಗರ ಸಹಜ ಸ್ಥಿತಿಗೆ ಮರಳಿದ್ದು, ಫೆ.26ರ ಬೆಳಿಗ್ಗೆ 6ರಿಂದ ಸಂಜೆ 4ರವರೆಗೆ ಕರ್ಫ್ಯೂ ಸಡಿಸಲಾಗಿದೆ.

26ರಿಂದ ಶಾಲಾ–ಕಾಲೇಜು ತೆರೆಯಲು ಶುಕ್ರವಾರ ಆದೇಶ ಹೊರಡಿಸಿದ್ದ ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ದಿಢೀರನೆ ನಿರ್ಧಾರ ಬದಲಿಸಿದ್ದು, ಶನಿವಾರವೂ ರಜೆ ಘೋಷಿಸಿದ್ದಾರೆ.

₹ 1 ಕೋಟಿ ದಾಟಿದ ನೆರವು: ಮೃತ ಹರ್ಷ ಅವರ ಕುಟುಂಬಕ್ಕೆ ಅಪಾರ ಪ್ರಮಾಣದಲ್ಲಿ ನೆರವು ಹರಿದುಬರುತ್ತಿದೆ. ಶುಕ್ರವಾರ ಸಚಿವ ಮುರುಗೇಶ್‌ ನಿರಾಣಿ, ವಿಧಾನಪರಿಷತ್ ಸದಸ್ಯರಾದ ಎಸ್‌.ರುದ್ರೇಗೌಡ, ಡಿ.ಎಸ್‌. ಅರುಣ್‌, ಆದಿಚುಂಚನಗಿರಿ ಪ್ರಸನ್ನನಾಥ ಸ್ವಾಮೀಜಿ, ಹಂಪಿ ಗಾಯತ್ರಿ ಪೀಠದ ದಯಾನಂದಪುರಿ ಸ್ವಾಮೀಜಿ, ದೊಡ್ಡಬಳ್ಳಾಪುರದ ಬಸವದೇವರ ಮಠದ ನಿಶ್ಚಲ ದೇಶೀಕೇಂದ್ರ ಶ್ರೀ ಮತ್ತಿತರರು ಧನಸಹಾಯ ಮಾಡಿದರು. ಇಲ್ಲಿಯವರೆಗೆ ಹರ್ಷ ಅವರ ತಾಯಿ ಪದ್ಮಾ ಖಾತೆಗೆ ಜಮೆಯಾದ ಹಣ ₹ 1 ಕೋಟಿ ದಾಟಿದೆ. ನೆರವಿನ ಸ್ವಲ್ಪ ಪಾಲನ್ನು ಗಲಭೆಯಲ್ಲಿ ಗಾಯಗೊಂಡ ಹಿಂದೂ ಕಾರ್ಯಕರ್ತರ ಚಿಕಿತ್ಸೆಗೆ ವಿನಿಯೋಗಿಸಲಾಗುವುದು ಎಂದು ಸಹೋದರಿ ಅಶ್ವಿನಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.