ADVERTISEMENT

ಶಿವಮೊಗ್ಗ: ಪೇಸ್ ಇಂಟರ್ ನ್ಯಾಷನಲ್ ಸ್ಕೂಲ್ ಉದ್ಘಾಟನಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2025, 16:00 IST
Last Updated 23 ಮಾರ್ಚ್ 2025, 16:00 IST
ಶಿವಮೊಗ್ಗ ಪೇಸ್ ಪಿಯು ಕಾಲೇಜು ಆವರಣದ ಜಯಕ್ಷ್ಮೀ ಈಶ್ವರಪ್ಪ ಸಭಾ ಭವನದಲ್ಲಿ ಆಯೋಜಿಸಿದ್ದ 'ಪೇಸ್ ಇಂಟರ್ ನ್ಯಾಷನಲ್ ಸ್ಕೂಲ್' ಉದ್ಘಾಟನಾ ಸಮಾರಂಭವನ್ನು ಆಳ್ವಾಸ್ ಎಜುಕೇಶನ್ ಫೌಂಡೇಶನ್ ಸಂಸ್ಥಾಪಕ ಮೋಹನ್ ಆಳ್ವಾ ಅವರು ಉದ್ಘಾಟಿಸಿದರು.
ಶಿವಮೊಗ್ಗ ಪೇಸ್ ಪಿಯು ಕಾಲೇಜು ಆವರಣದ ಜಯಕ್ಷ್ಮೀ ಈಶ್ವರಪ್ಪ ಸಭಾ ಭವನದಲ್ಲಿ ಆಯೋಜಿಸಿದ್ದ 'ಪೇಸ್ ಇಂಟರ್ ನ್ಯಾಷನಲ್ ಸ್ಕೂಲ್' ಉದ್ಘಾಟನಾ ಸಮಾರಂಭವನ್ನು ಆಳ್ವಾಸ್ ಎಜುಕೇಶನ್ ಫೌಂಡೇಶನ್ ಸಂಸ್ಥಾಪಕ ಮೋಹನ್ ಆಳ್ವಾ ಅವರು ಉದ್ಘಾಟಿಸಿದರು.   

ಶಿವಮೊಗ್ಗ: ಖಾಸಗಿ ವಿದ್ಯಾಸಂಸ್ಥೆಗಳನ್ನು ಸಾಮಾಜಿಕ ಪರಿಕಲ್ಪನೆಯಲ್ಲಿ ಕಟ್ಟಬೇಕು. ವಿದ್ಯಾ ಸಂಸ್ಥೆಗಳು ವ್ಯಾಪಾರೀಕರಣ ಆಗಕೂಡದು. ಆಗ ಮಾತ್ರ ಖಾಸಗಿ ವಿದ್ಯಾ ಸಂಸ್ಥೆಗಳಿಂದ ಕ್ರಾಂತಿ ಸಾಧ್ಯ ಎಂದು ಮೂಡುಬಿದರೆಯ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಸಂಸ್ಥಾಪಕ ಮೋಹನ್ ಆಳ್ವಾ ಹೇಳಿದರು.

ಪ್ರಜ್ಞಾ ಎಜುಕೇಶನ್ ಟ್ರಸ್ಟ್ ವತಿಯಿಂದ ಇಲ್ಲಿನ ಪೇಸ್ ಪಿಯು ಕಾಲೇಜು ಆವರಣದ ಜಯಕ್ಷ್ಮೀ ಈಶ್ವರಪ್ಪ ಸಭಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ 'ಪೇಸ್ ಇಂಟರ್ ನ್ಯಾಷನಲ್ ಸ್ಕೂಲ್' ಉದ್ಘಾಟನಾ ಸಮಾರಂಭ ಹಾಗೂ ಕರ್ನಾಟಕ ವೈಭವ ನೃತ್ಯ ರೂಪಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಖಾಸಗಿ ವಿದ್ಯಾಸಂಸ್ಥೆಯಲ್ಲಿ ಕಲಿತ ಮಕ್ಕಳ ಸಾಧನೆಯ ಪಟ್ಟಿ ದೊಡ್ಡದಿದೆ. ಯುವ ಶಕ್ತಿಯ ಬಲವನ್ನು ಸರ್ಕಾರಗಳು ಅರಿಯಬೇಕು. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಬಹುಮುಖ್ಯ ಪಾತ್ರವಹಿಸುತ್ತದೆ. ಯಾವುದೇ ಮಾಧ್ಯಮ ಇರಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಬಲಿಷ್ಟವಾಗಿ ಕಟ್ಟಬೇಕು ಎಂದರು.

ADVERTISEMENT

ದೇಶದಲ್ಲಿ 51 ಕೋಟಿ ಮಂದಿ 25 ವರ್ಷಕ್ಕಿಂತ ಕಡಿಮೆ ವಯೋಮಾನದವರಿದ್ದಾರೆ. 1 ನೇ ತರಗತಿಯಿಂದ 12ನೇ ತರಗತಿ ಓದುವ ಮಕ್ಕಳ ಸಂಖ್ಯೆ 39ಕೋಟಿಗೂ ಹೆಚ್ಚಿದೆ. ಇದನ್ನು ಮಾನವ ಸಂಪತ್ತಾಗಿ ಬಳಸಿಕೊಂಡು ದೇಶವನ್ನು ಕಟ್ಟುವುದು ಎಲ್ಲರ ಕರ್ತವ್ಯ ಎಂದರು.

ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರು ಸಾಮಾಜಿಕ ಪರಿಕಲ್ಪನೆ ಇಟ್ಟುಕೊಂಡು ಸಿಬಿಎಸ್ ಇ ಶಾಲೆಯನ್ನು ಆರಂಭಿಸಿದ್ದಾರೆ. ಇಲ್ಲಿ ವ್ಯಾಪಾರ ದೃಷ್ಟಿಯ ವಿದ್ಯಾ ಸಂಸ್ಥೆಗಳ ಬಗ್ಗೆ ಸರ್ಕಾರಗಳು ಕ್ರಮ ಕೈಗೊಳ್ಳುವ ತುರ್ತಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಜೀವನ ಮೌಲ್ಯಗಳನ್ನೂ ತಿಳಿಹೇಳಬೇಕು ಎಂದರು.

ಆರಂಭದಲ್ಲಿ ಕ್ಯಾನ್ಸರ್ ಆಸ್ಪತ್ರೆ ತೆರೆಯಬೇಕು ಎನ್ನುವ ಭಯಕ್ಕೆ ಇತ್ತು. ಇಲ್ಲಿ ಪೇಸ್ ಕಾಲೇಜು ಆರಂಭಿಸುವ ಬಗ್ಗೆ ಯಾವುದೇ ಕಲ್ಪನೆ ಇರಲಿಲ್ಲ. ಆದರೆ, ಮೋಹನ್ ಆಳ್ವಾ ಅವರು ಕಾಲೇಜು ತೆರೆಯಲು ಪ್ರೋತ್ಸಾಹ ನೀಡಿದರು. ಸಿಬಿಎಸ್ ಇ ಶಾಲೆ ಆರಂಭಿಸಲು ಉತ್ತೇಜನ ನೀಡಿದರು. ಇದರಿಂದ, ಈ ವಿದ್ಯಾ ಸಂಸ್ಥೆ ಜನ್ಮ ತಾಳಿದೆ. 165 ಮಕ್ಕಳಿಂದ ಆರಂಭಗೊಂಡ ಕಾಲೇಜಿನಲ್ಲಿ ಪ್ರಸ್ತುತ 1,400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಪ್ರಜ್ಞಾ ಎಜುಕೇಶನ್ ಟ್ರಸ್ಟ್ ಖಜಾಂಚಿ ಕೆ.ಈ.ಕಾಂತೇಶ್ ಹೇಳಿದರು.

ಪ್ರಪಂಚದಲ್ಲಿ ಜ್ಞಾನಕ್ಕಿಂತ ಪವಿತ್ರವಾದದು ಯಾವುದೂ ಇಲ್ಲ. ಉದ್ಧಾತವಾದ ಉದ್ದೇಶ ಇದ್ದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಲು ಸಾಧ್ಯ. ಮಕ್ಕಳಿಗೆ ಸಂಸ್ಕಾರ ಕಲಿಸುವ ಶಿಕ್ಷಣಕ್ಕೆ ಸಂಸ್ಥೆಯಲ್ಲಿ ಉತ್ತೇಜನ ನೀಡಲಾಗುತ್ತಿದೆ. ಶಾಲೆಯಲ್ಲಿ ಶಿಕ್ಷಕರ ನೇಮಕ ಆಗಿದೆ. ಇದೇ ಜೂನ್.1 ರಿಂದ ಶಾಲೆ ಆರಂಭಗೊಳ್ಳಲಿದೆ ಎಂದು ಶಾಲೆಯ ಪ್ರಾಚಾರ್ಯ ಎನ್.ಆರ್. ಪವನ್ ಕುಮಾರ್ ಹೇಳಿದರು.

ಭರತನಾಟ್ಯ ಕಲಾವಿದ ಸಂಜಯ್ ಶಾಂತಾರಾಮ್ ರವರ ನೇತೃತ್ವದ ಶಿವಪ್ರಿಯ ನಾಟ್ಯ ಶಾಲೆಯ 40 ಕಲಾವಿದರು ನೃತ್ಯ ಪ್ರದರ್ಶನ ಪ್ರಸ್ತುತಪಡಿಸಿದರು. ಕ್ಲಾಟ್ (ರಾಷ್ಟ್ರೀಯ ಮಟ್ಟದ ಕಾನೂನು ಪ್ರವೇಶ ಪರೀಕ್ಷೆ) ಪರೀಕ್ಷೆಯಲ್ಲಿ ದೇಶಕ್ಕೆ 84 ನೇ ರಾಂಕ್ ಹಾಗೂ ರಾಜ್ಯಕ್ಕೆ 7ನೇ ರಾಂಕ್ ಪಡೆದ ನಗರದ ವೈ.ಎಸ್. ಅನಿಕೇತನ್ ಅವರಿಗೆ ಇಲ್ಲಿ ಸನ್ಮಾನಿಸಲಾಯಿತು.

ಟ್ರಸ್ಟ್ ಉಪಾಧ್ಯಕ್ಷ ಪ್ರೊ.ಎಚ್.ಆನಂದ್, ಕಾರ್ಯದರ್ಶಿ ಪ್ರೊ.ಬಿ.ಎನ್.ವಿಶ್ವನಾಥಯ್ಯ, ಉಪನ್ಯಾಸಕ ಸಜಯ್, ಶಾಲಿನಿ ಕಾಂತೇಶ್, ಕೃಷ್ಣ ಇದ್ದರು.

Cut-off box - ಪಠ್ಯೇತರ ನೆಲೆಗಟ್ಟಿನಲ್ಲೂ ಶಿಕ್ಷಣ; ಈಶ್ವರಪ್ಪ ಬಡವರು ಕೂಲಿಕಾರ್ಮಿಕರ ಮಕ್ಕಳೂ ಸಹ ಗುಣ ಮಟ್ಟದ ಶಿಕ್ಷಣ ಪಡೆಯಬೇಕು. ವ್ಯವಹಾರಿಕ ಹಿನ್ನಲೆಯೊಂದರಿಂದಲೇ ಶೈಕ್ಷಣಿಕ ಗುಣಮಟ್ಟವನ್ನು ಅಳೆಯ ಬಾರದು. ಅದೇ ಉದ್ದೇಶದಿಂದ ಪೇಸ್ ಇಂಟರ್ ನ್ಯಾಷನಲ್ ಸ್ಕೂಲ್ ಆರಂಭಿಸಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಪ್ರಜ್ಞಾ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರೂ ಆದ ಕೆ.ಎಸ್.ಈಶ್ವರಪ್ಪ ಹೇಳಿದರು. ನರ್ಸರಿಯಿಂದ 8ನೇ ತರಗತಿವರೆಗೆ ಶಾಲೆಯಲ್ಲಿ ಮಕ್ಕಳ ನೋಂದಣಿ ಕಾರ್ಯ ಆರಂಭಗೊಂಡಿದೆ. ಇಲ್ಲಿ ಕೇವಲ ಪಠ್ಯಕ್ಕೆ ಮಾತ್ರ ಆದ್ಯತೆ ನೀಡಿಲ್ಲ ಬದಲಿಗೆ ಪಠ್ಯೇತರ ಚಟುವಟಿಕೆ ಕಲೆ ಸಂಸ್ಕೃತಿ ಬೌದ್ಧಿಕ ನೈತಿಕ ಮತ್ತು ಆದ್ಯಾತ್ಮಿಕ ನೆಲೆಗಟ್ಟಿನಲ್ಲೂ ಶಿಕ್ಷಣ ನೀಡುವ ಉದ್ದೇಶವನ್ನು ಸಂಸ್ಥೆ ಹೊಂದಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.