ಶಿವಮೊಗ್ಗ: ಇಲ್ಲಿನ ಸೋಗಾನೆ ಬಳಿ ಇರುವ ವಿಮಾನ ನಿಲ್ದಾಣಕ್ಕೆ ಚಾಲನೆ ದೊರೆತು ಗುರುವಾರ ಎರಡು ವರ್ಷ ಕಳೆಯುತ್ತಿದೆ. ರಾಜ್ಯದ ದೇಸಿ ವಿಮಾನ ನಿಲ್ದಾಣಗಳಲ್ಲಿ (Domestic Airport) ಹುಬ್ಬಳ್ಳಿಯ ನಂತರ ಪ್ರಯಾಣಿಕರ ಅತಿ ದಟ್ಟಣೆಯ 2ನೇ ನಿಲ್ದಾಣ ಎಂಬ ಶ್ರೇಯಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣ ಪಾತ್ರವಾಗಿದೆ. ಕಳೆದೊಂದು ವರ್ಷದಲ್ಲಿ ಇಲ್ಲಿಂದ 1,30,587 ಜನ ‘ಆಕಾಶಯಾನ’ ಮಾಡಿದ್ದಾರೆ.
2023ರ ಫೆ.27ರಂದು (ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನ) ವಿಮಾನ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ್ದರು.
‘ಸ್ಟಾರ್ ಏರ್, ಇಂಡಿಗೋ, ಸ್ಪೈಸ್ ಜೆಟ್ ಸಂಸ್ಥೆಗಳಿಗೆ ಸೇರಿದ ಆರು ವಿಮಾನಗಳು ನಿತ್ಯ ಇಲ್ಲಿಂದ 12 ಬಾರಿ ಹಾರಾಟ ನಡೆಸುತ್ತಿವೆ. ಬೆಂಗಳೂರು, ಹೈದರಾಬಾದ್, ತಿರುಪತಿ, ಗೋವಾ ಹಾಗೂ ಚೆನ್ನೈಗೆ ವಿಮಾನ ಹಾರಾಟ ನಡೆಯುತ್ತಿದೆ. ಈ ವಿಮಾನಗಳು ಒಟ್ಟು 3,092 ಬಾರಿ ಇಲ್ಲಿಂದ ಹಾರಾಟ ನಡೆಸಿವೆ. ವಾಣಿಜ್ಯ ಹಾಗೂ ಖಾಸಗಿ ಜೆಟ್ ವಿಮಾನಗಳು 168 ಬಾರಿ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದು ಹೋಗಿವೆ’ ಎಂದು ವಿಮಾನ ನಿಲ್ದಾಣದ ನಿರ್ದೇಶಕ ಶಮಂತ್ ಮಾಹಿತಿ ನೀಡಿದ್ದಾರೆ.
ಹೈದರಾಬಾದ್‌ಗೆ ಹೆಚ್ಚು: ಬೆಂಗಳೂರು ಬಿಟ್ಟರೆ ಶಿವಮೊಗ್ಗದಿಂದ ಹೈದರಾಬಾದ್‌ಗೆ ಹೆಚ್ಚು ಜನರು ಈ ಅವಧಿಯಲ್ಲಿ ಪ್ರಯಾಣಿಸಿದ್ದಾರೆ. ದಟ್ಟಣೆ ಹಿನ್ನೆಲೆಯಲ್ಲಿ ಹೈದರಾಬಾದ್‌ಗೆ ನಿತ್ಯ ಎರಡು ವಿಮಾನಗಳು ಹಾರಾಟ ನಡೆಸುತ್ತಿವೆ. ಗೋವಾ, ತಿರುಪತಿಗೆ ಸೀಸನ್ ವೇಳೆ ಹೆಚ್ಚು ಪ್ರಯಾಣಿಕರ ದಟ್ಟಣೆ ಇರುತ್ತದೆ. ಜನವರಿಯಿಂದ ಈಚೆಗೆ ವಾಣಿಜ್ಯ ವಿಮಾನಗಳ (ನಾನ್ ಷಡ್ಯೂಲ್) ಹಾರಾಟ ಹೆಚ್ಚಳಗೊಂಡಿದೆ ಎನ್ನುತ್ತಾರೆ.
ರಾತ್ರಿ ವಿಮಾನ ಆಗಸ್ಟ್‌ನಿಂದ: ‘ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಆರಂಭಗೊಂಡ ನಂತರ ಮುಂಬೈ, ಇಂದೋರ್ ಸೇರಿದಂತೆ ಉತ್ತರ ಭಾರತದ ನಗರಗಳಿಗೆ ನೇರ ವಿಮಾನ ಹಾರಾಟ ಸೇವೆ ಆರಂಭವಾಗಲಿದೆ. ನೈಟ್ ಲ್ಯಾಂಡಿಂಗ್ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ ಈಗಾಗಲೇ ಮುಗಿಸಿದೆ. ಅದು ನಿಗದಿತ ದರ್ಜೆಯಲ್ಲಿದೆಯೇ ಎಂಬುದರ ತಾಂತ್ರಿಕ ಪರಿಶೀಲನೆಯನ್ನು ಕೇಂದ್ರ ಸರ್ಕಾರ ಅಧೀನದ ರೈಟ್ಸ್ ಸಂಸ್ಥೆ ನಡೆಸಬೇಕಿದೆ. ಆರು ತಿಂಗಳಲ್ಲಿಯೇ ಅದು ಪೂರ್ಣಗೊಂಡು ಆಗಸ್ಟ್‌ನಿಂದ ರಾತ್ರಿ ವೇಳೆ ವಿಮಾನ ಇಳಿಯುವ ಹಾಗೂ ಹಾರುವ ಸೌಲಭ್ಯ ಆರಂಭವಾಗಲಿದೆ. ಅದಕ್ಕೆ ಈಗಾಗಲೇ ಪ್ರಕ್ರಿಯೆ ಆರಂಭವಾಗಿದೆ’ ಎಂದು ಶಮಂತ್ ಹೇಳುತ್ತಾರೆ.
ಇನ್ನೂ ಮೂರು ಸ್ಟ್ಯಾಂಡಿಂಗ್ ಬೇಗೆ ಮನವಿ: ‘ಈಗ ಸದ್ಯ ವಿಮಾನ ನಿಲ್ದಾಣದಲ್ಲಿ ವಿಮಾನ ನಿಲ್ಲಲು ಮೂರು ಸ್ಟ್ಯಾಂಡಿಂಗ್ ಬೇಗಳಿವೆ. ಇನ್ನೂ ಮೂರು ಬೇ ನಿರ್ಮಿಸಲು ಕೆಎಸ್‌ಐಐಡಿಸಿಗೆ ಮನವಿ ಸಲ್ಲಿಸಿದ್ದೇವೆ. ಅದು ಸಾಕಾರಗೊಂಡಲ್ಲಿ ಕಾರ್ಗೊ ವಿಮಾನಗಳು ಹಾರಾಟ ನಡೆಸಲಿವೆ. ಈಗಾಗಲೇ ಸ್ಟಾರ್ ಏರ್‌ನವರು ಕಾರ್ಗೊ ಇನ್‌ಕಮಿಂಗ್ ಶುರು ಮಾಡಿದ್ದಾರೆ. ದೈನಂದಿನ ಏರ್‌ಲೈನ್ ಮೂಲಕವೇ ಶಿವಮೊಗ್ಗಕ್ಕೆ ಬರುವ ಸರಂಜಾಮು ತರುತ್ತಿದ್ದಾರೆ. ಸ್ಟ್ಯಾಂಡಿಂಗ್ ಬೇ ಹೆಚ್ಚಳಗೊಂಡರೆ ಇಲ್ಲಿಂದಲೇ ಸರಂಜಾಮು ಒಯ್ಯುವ ಕೆಲಸ ಅರಂಭವಾಗಲಿದೆ’ ಎಂದು ಅವರು ತಿಳಿಸಿದ್ದಾರೆ.
ಸರ್ಕಾರದ್ದೇ ನಿರ್ವಹಣೆ; ಕಡಿಮೆ ವೆಚ್ಚದ ಶ್ರೇಯ
ಶಿವಮೊಗ್ಗ ವಿಮಾನ ನಿಲ್ದಾಣದ ನಿರ್ವಹಣೆ ಸದ್ಯ ರಾಜ್ಯ ಕೈಗಾರಿಕೆ ಮೂಲ ಸೌಕರ್ಯ ಅಭಿವೃದ್ಧಿ ನಿಗಮದಡಿ (ಕೆಎಸ್‌ಐಐಡಿಸಿ) ನಡೆಯುತ್ತಿದೆ. ಇಲ್ಲಿ 273 ಜನರಿಗೆ ನೇರ ಉದ್ಯೋಗಾವಕಾಶ ದೊರೆತಿದೆ. ಸರ್ಕಾರವೇ ನಿರ್ವಹಣೆ ಮಾಡುತ್ತಿರುವ ದೇಶದ ಏಕೈಕ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಯೂ ಸೋಗಾನೆಯದ್ದು. ವಿಮಾನ ನಿಲ್ದಾಣದ ನಿರ್ವಹಣೆಗೆ ಕೆಎಸ್‌ಐಐಡಿಸಿ ಇಲ್ಲಿಯವರೆಗೂ ₹ 8.5 ಕೋಟಿ ಖರ್ಚು ಮಾಡಿದೆ. ₹ 2.86 ಕೋಟಿ ಆದಾಯ ಸಂಗ್ರಹವಾಗಿದೆ.
‘ಖಾಸಗಿ ನಿರ್ವಹಣೆಯ ರಾಜ್ಯದ ಉಳಿದ ವಿಮಾನ ನಿಲ್ದಾಣಗಳು ₹ 40 ಕೋಟಿಯವರೆಗೆ ಖರ್ಚು ಮಾಡುತ್ತಿವೆ. ಅದಕ್ಕೆ ಹೋಲಿಸಿದರೆ ಇದು ಅತ್ಯಂತ ಕಡಿಮೆ ನಿರ್ವಹಣೆಯ ಮಾದರಿ. ಖಾಸಗಿಯವರಿಗೆ ಸರ್ಕಾರದಿಂದಲೇ ನಿರ್ವಹಣೆ ಶುಲ್ಕ ಕೊಡಬೇಕಿದೆ. ಇಲ್ಲಿಂದ ಉತ್ತರ ಭಾರತಕ್ಕೆ ವಿಮಾನ ಹಾರಾಟ ಹಾಗೂ ಕಾರ್ಗೊ ಸಾಗಣೆಯಂತಹ ವಾಣಿಜ್ಯ ಚಟುವಟಿಕೆ ಆರಂಭವಾದರೆ ಆದಾಯ ಹಾಗೂ ವೆಚ್ಚದ ವಿಚಾರದಲ್ಲಿ ಸ್ವಾವಲಂಬಿಯಾಗಲಿದ್ದೇವೆ’ ಎಂದು ಕೆಎಸ್‌ಐಐಡಿಸಿ ಮೂಲಗಳು ಹೇಳುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.