ADVERTISEMENT

ಶಿವಮೊಗ್ಗ: ಮಳೆಯ ನಡುವೆ ದಸರಾ ಜಂಬೂ ಸವಾರಿ ಆರಂಭ

ಚಾಮುಂಡೇಶ್ವರಿ ದೇವಿಗೆ ಹೂ ಅರ್ಪಿಸಿ ಮೆರವಣಿಗೆಗೆ ಸಚಿವ‌ ಮಧು ಬಂಗಾರಪ್ಪ ಚಾಲನೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2025, 11:04 IST
Last Updated 2 ಅಕ್ಟೋಬರ್ 2025, 11:04 IST
   

ಶಿವಮೊಗ್ಗ: ಆಗಾಗ ಜೋರಾಗಿ ಸುರಿದ ಮಳೆಯ ನಡುವೆ ಮೈಸೂರಿನ ರಾಜ ಸವಾರಿಗೆ ಪ್ರತಿಬಿಂಬದಂತೆ ತೋರುವ ಶಿವಮೊಗ್ಗದ ದಸರಾ ಜಂಬೂ ಸವಾರಿ, ವಿಜಯದಶಮಿಯ ದಿನ ಗುರುವಾರ ಅದ್ಧೂರಿ ಚಾಲನೆ ದೊರೆಯಿತು.

ಇಲ್ಲಿನ ಕೋಟೆ ರಸ್ತೆಯ ಶಿವಪ್ಪ ನಾಯಕ ಅರಮನೆ ಮುಂಭಾಗ ನಂದಿ ಪೂಜೆಯ ನಂತರ ಮೆರವಣಿಗೆ ಆರಂಭವಾಯಿತು.

ಕೋಟೆ ಆಂಜನೇಯ ದೇವಸ್ಥಾನದ ಎದುರಿನ ಕಮಾನು ಪಕ್ಕದ ಅಟ್ಟಣಿಗೆಯ ಮೇಲೆ ನಿಂತು ಅಂಬಾರಿ ಮೇಲಿದ್ದ ಚಾಮುಂಡೇಶ್ವರಿ ದೇವಿಗೆ ಹೂವು ಅರ್ಪಿಸಿದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಜಿಲ್ಲೆಯ ಜನರ ಪರವಾಗಿ ದೇವರಿಗೆ ಗೌರವ ಸಮರ್ಪಿಸಿದರು. ಈ ವೇಳೆ ಶಿವಮೊಗ್ಗ ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಕಾಂಗ್ರೆಸ್ ಮುಖಂಡ ಎಚ್.ಸಿ.ಯೋಗೀಶ್, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಎಸ್ಪಿ ಜಿ.ಕೆ.ಮಿಥುನ್‌ಕುಮಾರ್, ಸಿಇಒ ಎನ್.ಹೇಮಂತ್, ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣಗೌಡ ಚಾಮುಂಡೇಶ್ವರಿಗೆ ಹೂ ಸಮರ್ಪಿಸಿದರು.

ADVERTISEMENT

ಮಧ್ಯಾಹ್ನ 2.30ಕ್ಕೆ ಜಂಬೂ ಸವಾರಿ ಹೊರಡಬೇಕಿತ್ತು. ಆದರೆ ಮಳೆಯ ಕಾರಣ ತಡವಾಯಿತು. 3 ಗಂಟೆಗೆ ಆರಂಭವಾಯಿತು. 650 ಕೆ.ಜಿ ತೂಕದ ಬೆಳ್ಳಿಯ ಮಂಟಪ ಹಾಗೂ ಚಾಮುಂಡೇಶ್ವರಿಯ ಪುತ್ಥಳಿಯನ್ನು ಬೃಹತ್ ಕ್ರೇನ್ ಬಳಸಿ ಆನೆ ಸಾಗರನ ಬೆನ್ನಿನ ಮೇಲೆ ಪ್ರತಿಷ್ಠಾಪಿಸಲಾಯಿತು.

ಸಾಗರನ ಜೊತೆ ಆನೆಗಳಾದ ಬಹದ್ಧೂರ್‌ ಹಾಗೂ ಬಾಲಣ್ಣ ಹೆಜ್ಜೆ ಹಾಕಿದವು. ಸ್ವತಃ ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ ನೇತೃತ್ವದಲ್ಲಿ ಆನೆಗಳನ್ನು ಮೆರವಣಿಗೆಗೆ ಸಿದ್ಧಗೊಳಿಸಲಾಯಿತು.

200ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಲ್ಲಿ ಉತ್ಸವ ಮೂರ್ತಿಗಳು...

ಮೆರವಣಿಗೆಯಲ್ಲಿ 200ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಲ್ಲಿ ಶಿವಮೊಗ್ಗದ ವಿವಿಧ ದೇವಸ್ಥಾನಗಳಿಂದ ಹೊರಡಿಸಲಾದ ಉತ್ಸವ ಮೂರ್ತಿಗಳು ಸಾಗಿ ಬರುತ್ತಿವೆ.

ಮೆರವಣಿಗೆ ಕೋಟೆ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್‌, ಗಾಂಧಿ ಬಜಾರ್, ಶಿವಪ್ಪ ನಾಯಕ ವೃತ್ತ, ಅಮೀರ್ ಅಹಮದ್ ವೃತ್ತ, ನೆಹರೂ ರಸ್ತೆ, ಸೀನಪ್ಪ ಶೆಟ್ಟಿ ಸರ್ಕಲ್‌, ದುರ್ಗಿಗುಡಿ, ಜೈಲು ಸರ್ಕಲ್ ಮಾರ್ಗವಾಗಿ ಅಲ್ಲಮಪ್ರಭು ಬಯಲನ್ನು (ಫ್ರೀಡಂ ಪಾರ್ಕ್) ತಲುಪಲಿದೆ.

ಕೋಟು‍–ಪಂಚೆ ಧರಿಸಿ ಮಲೆನಾಡಿನ ಸಾಂಪ್ರದಾಯಿಕ ದಿರಿಸಿನಲ್ಲಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ತಹಶೀಲ್ದಾರ್ ರಾಜೀವ್ ಸಂಪ್ರದಾಯದಂತೆ ಅಲ್ಲಮಪ್ರಭು ಮೈದಾನದಲ್ಲಿ ರಾತ್ರಿ ಅಂಬು ಛೇದನ ಮಾಡುವರು. ನಂತರ ದಸರಾ ಆಚರಣೆ ವಿದ್ಯುಕ್ತವಾಗಿ ಕೊನೆಗೊಳ್ಳಲಿದೆ. ಈ ವೇಳೆ ಸಿಡಿಮದ್ದು ಸಿಡಿಸಲಾಗುತ್ತದೆ.

ಮೆರವಣಿಗೆಯಲ್ಲಿ ನಂದಿ ಕುಣಿತ, ವೀರಗಾಸೆ, ಕೀಲು ಕುದುರೆ, ಡೊಳ್ಳು ಕುಣಿತ, ಹುಲಿ ವೇಷಧಾರಿಗಳು, ಗೊಂಬೆ ಕುಣಿತ, ತಟ್ಟಿರಾಯ ಕಲಾ ತಂಡಗಳು ಭಾಗಿಯಾಗಿದ್ದು, ವಿಶೇಷ ಕಳೆ ತಂದಿವೆ.

ಹುಲಿಯ ಪ್ರತಿಕೃತಿ ಹೊಂದಿದ್ದ ಅರಣ್ಯ ಇಲಾಖೆ ಶಿವಮೊಗ್ಗ ವನ್ಯಜೀವಿ ವಿಭಾಗದ ಟ್ಯಾಬ್ಲೊ ಮೆರವಣಿಗೆಯಲ್ಲಿ ಗಮನ ಸೆಳೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.