ADVERTISEMENT

ಮಲೆನಾಡಲ್ಲಿ ಮರಗಳ ಹನನ, ಒತ್ತುವರಿ ಅವ್ಯಾಹತ

ಇಲಾಖೆಯಲ್ಲಿ ಸಿಬ್ಬಂದಿ ಕೊರತೆ: ಅರಣ್ಯಾಧಿಕಾರಿಗಳ ಅಸಹಾಯಕತೆ

ವೆಂಕಟೇಶ ಜಿ.ಎಚ್.
Published 28 ಜನವರಿ 2025, 5:41 IST
Last Updated 28 ಜನವರಿ 2025, 5:41 IST
ಸೊರಬ ತಾಲ್ಲೂಕಿನ ಕಂತನಹಳ್ಳಿ ಬಳಿ ಮರಗಳನ್ನು ಕಡಿದು ಹಾಕಿರುವುದು
ಸೊರಬ ತಾಲ್ಲೂಕಿನ ಕಂತನಹಳ್ಳಿ ಬಳಿ ಮರಗಳನ್ನು ಕಡಿದು ಹಾಕಿರುವುದು   

ಶಿವಮೊಗ್ಗ: ಮಲೆನಾಡಿನ ಹಲವೆಡೆ ಕಂದಾಯ ಹಾಗೂ ಅರಣ್ಯ ಭೂಮಿ ಅತಿಕ್ರಮಣ ಮತ್ತೆ ವೇಗ ಪಡೆದಿದೆ. ಸರ್ಕಾರದ ಆದೇಶ ಹಾಗೂ ಕಾನೂನು ಧಿಕ್ಕರಿಸಿ ಅರಣ್ಯ ನಾಶಪಡಿಸುವುದು ಅವ್ಯಾಹತವಾಗಿ ನಡೆಯುತ್ತಿದೆ. ಬಗರ್‌ಹುಕುಂ ಅಡಿ ಮಂಜೂರಾದ ಜಮೀನಿಗೆ ತಾಗಿಕೊಂಡಂತಿರುವ ಸರ್ಕಾರಿ, ಅರಣ್ಯ ಇಲಾಖೆ ಜಮೀನಿನಲ್ಲಿನ ಮರ–ಮುಟ್ಟುಗಳನ್ನು ರಾತ್ರೋರಾತ್ರಿ ಕಡಿದು, ಬೇರು–ಬೊಡ್ಡೆಗಳನ್ನು ಸುಟ್ಟು ಹಾಕಿ ಒತ್ತುವರಿ ಮಾಡಲಾಗುತ್ತಿದೆ.

ಸೊರಬ ತಾಲ್ಲೂಕು ಗುಡವಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂತನಹಳ್ಳಿ ಗ್ರಾಮದ ಸರ್ವೆ ನಂ 8ರಲ್ಲಿ ಒಟ್ಟು 533 ಎಕರೆ ಅರಣ್ಯವಿದೆ. ಅದು ನಿತ್ಯ ಹರಿದ್ವರ್ಣ ಕಾಡು. ಅಲ್ಲಿ ಅಪಾರ ಪ್ರಮಾಣದ ಬೆಲೆಬಾಳುವ ಪಾರಂಪರಿಕ ವೃಕ್ಷಗಳನ್ನು ಕಡಿಯಲಾಗಿದೆ. ಇದಕ್ಕೆ ತಾಗಿಕೊಂಡೇ ಇರುವ ಸಾರೆಮರೂರು ಗ್ರಾಮದ ಸರ್ವೆ ನಂ 27ರಲ್ಲಿ 352 ಎಕರೆ ಅರಣ್ಯವಿದೆ. ಅಲ್ಲಿಯೂ ಅಂದಾಜು 15 ಎಕರೆ ಅತಿಕ್ರಮಣವಾಗಿದೆ. ನೂರಾರು ನಂದಿ, ಹೊನ್ನೆ, ಬಣಗಿ, ಮತ್ತಿ, ಹುಣಾಲು ಜಾತಿಯ ಮರಗಳನ್ನು ಕಡಿದು ಉರುಳಿಸಲಾಗಿದೆ. ಬೆಲೆ ಬಾಳುವ ಮರಗಳನ್ನು ಕತ್ತರಿಸಿ ಉರುವಲಿಗೆ ಕಟ್ಟಿಗೆಯಾಗಿಯೂ ಬಳಸಲಾಗಿದೆ.

ಚಂದ್ರಗುತ್ತಿ ಹೋಬಳಿಯ ಹೊಳೆಮರೂರು, ತೋರಣಗೊಂಡನಕೊಪ್ಪ, ಅಂದವಳ್ಳಿ, ಮುಟಗುಪ್ಪೆ, ಗೊಗ್ಗೆಹಳ್ಳಿ, ಹರಳಿಗೆ, ಕೋಡಂಬಿ ಸೇರಿ ಹಲವು ಕಡೆ ಅರಣ್ಯ ನಾಶವಾಗಿದೆ. ಹೊಳೆಮರೂರು ಮತ್ತು ತೋರಣಗೊಂಡನಕೊಪ್ಪದಲ್ಲಿನ ಅರಣ್ಯ ನಾಶದ ವಿರುದ್ಧ ಗ್ರಾಮಸ್ಥರೇ ಧ್ವನಿ ಎತ್ತಿದ್ದಾರೆ. 

ADVERTISEMENT

‘ದೇವರ ಕಾಡು, ಜಂಬಳ್ಳಿ ಕಾಡು, ಸಾರೆ ಮರೂರು ಕಾಡಿನಲ್ಲೂ ಮರಗಳ ಹನನ ನಡೆದಿದೆ. ಇವೆಲ್ಲ ನಿರ್ಜನ ಪ್ರದೇಶವೇನಲ್ಲ. ವಾಹನ ಓಡಾಡಲು ರಸ್ತೆ ವ್ಯವಸ್ಥೆ ಇರುವ ಇಲ್ಲಿ ಏನೇ ಚಟುವಟಿಕೆ ನಡೆದರೂ ಗೊತ್ತಾಗುತ್ತದೆ. ಆದಾಗ್ಯೂ ಅರಣ್ಯ ಇಲಾಖೆ ಗಮನಕ್ಕೆ ಬಾರದಿರುವುದು ಅಚ್ಚರಿ ಮೂಡಿಸಿದೆ’ ಎಂದು ಸೊರಬ ಪರಿಸರ ಜಾಗೃತಿ ಟ್ರಸ್ಟ್‌ನ ಉಪಾಧ್ಯಕ್ಷ ಶ್ರೀಪಾದ್ ಬಿಚ್ಚುಗತ್ತಿ ಆರೋಪಿಸುತ್ತಾರೆ.

ಸಿಬ್ಬಂದಿ ಕೊರತೆ ನೆಪ:

‘ಸೊರಬ ಮಾತ್ರವಲ್ಲ ಸಾಗರ, ತೀರ್ಥಹಳ್ಳಿ, ಶಿಕಾರಿಪುರ ತಾಲ್ಲೂಕುಗಳಲ್ಲಿಯೂ ಇದೇ ಪರಿಸ್ಥಿತಿ ಇದೆ. ಮರಗಳಿಂದ ಆವರಿಸಿದ ಭೂಮಿ ಬೆಳಗಾಗುವುದರೊಳಗೆ ಪಕ್ಕದ ಅಡಿಕೆ ತೋಟದ ವಿಸ್ತರಣೆಯ ಭಾಗವಾಗಿರುತ್ತದೆ. ಕಾನು ಬರಿದಾಗುತ್ತಿದೆ. ಅದನ್ನು ತಪ್ಪಿಸಿ ಅಂದರೆ ನಮ್ಮಲ್ಲಿ (ಚಂದ್ರಗುತ್ತಿ ಹೋಬಳಿ) ಸಿಬ್ಬಂದಿ ಕೊರತೆ ಇದೆ ಎಂದು ಅರಣ್ಯಾಧಿಕಾರಿಗಳು ನೆಪ ಹೇಳುತ್ತಾರೆ. ಇಲಾಖೆಯ ನಿಷ್ಕಾಳಜಿಯಿಂದಾಗಿಯೇ ಸಮಸ್ಯೆ ಉಲ್ಬಣಗೊಂಡಿದೆ. ಕಣ್ಣೆದುರು ಮರಗಳ ಹನನವಾಗುತ್ತಿದ್ದರೂ ಅದನ್ನು ಬಹಿರಂಗವಾಗಿ ವಿರೋಧಿಸಲು ಸ್ಥಳೀಯರು ಭಯಪಡುತ್ತಿದ್ದಾರೆ’ ಎಂದು ಶ್ರೀಪಾದ ಬೇಸರ ವ್ಯಕ್ತಪಡಿಸುತ್ತಾರೆ.

ಸೊರಬ ತಾಲ್ಲೂಕಿನ ಕಂತನಹಳ್ಳಿ ಬಳಿ ಮರಗಳನ್ನು ಕಡಿದು ಹಾಕಿರುವುದು
ಕಂತನಹಳ್ಳಿ ಭಾಗದಲ್ಲಿ ಮರ ಕಡಿದಿದ್ದಕ್ಕಾಗಿ ಗುಂಜನೂರಿನ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಯಂತ್ರಗಳನ್ನು ವಶ‍ಪಡಿಸಿಕೊಂಡಿದ್ದು ಕಠಿಣ ಕ್ರಮ ಕೈಗೊಳ್ಳಲಿದ್ದೇವೆ.
ಜಾವೀದ್ ಅಹಮದ್ ವಲಯ ಅರಣ್ಯಾಧಿಕಾರಿ ಸೊರಬ
ಅರಣ್ಯ ಒತ್ತುವರಿ ಮರ ಕಡಿತಲೆಗೆ ಅವಕಾಶವಿಲ್ಲ ಎಂದು ಸರ್ಕಾರ ಹೇಳುತ್ತಿದ್ದರೂ ಮಲೆನಾಡಿನಲ್ಲಿ ಇದಕ್ಕೆ ಕಡಿವಾಣ ಬಿದ್ದಿಲ್ಲ. ಅರಣ್ಯ ಇಲಾಖೆ ಇತ್ತ ಗಮನಹರಿಸಬೇಕು
ಎಂ.ಆರ್.ಪಾಟೀಲ್ ಪರಿಸರ ಜಾಗೃತಿ ಟ್ರಸ್ಟ್ ಅಧ್ಯಕ್ಷ ಸೊರಬ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.