ADVERTISEMENT

ಸಿಗಂದೂರು ಸೇತುವೆ: ಮೊದಲ ಹಂತದ ಪರೀಕ್ಷೆ ಯಶಸ್ವಿ

100 ಟನ್ ತೂಕವನ್ನು ಸತತ 24 ಗಂಟೆ ತಾಳಿಕೊಂಡ ಸೇತುವೆ: ಪೀರ್‌ಪಾಶಾ

ವೆಂಕಟೇಶ ಜಿ.ಎಚ್.
Published 25 ಜೂನ್ 2025, 15:41 IST
Last Updated 25 ಜೂನ್ 2025, 15:41 IST
ಸಾಗರ ತಾಲ್ಲೂಕಿನ ಸಿಗಂದೂರು ಸೇತುವೆಯ ತಾಳಿಕೆ ಸಾಮರ್ಥ್ಯ ಪರೀಕ್ಷೆ ಬುಧವಾರ ಯಶಸ್ವಿಯಾಯಿತು
ಸಾಗರ ತಾಲ್ಲೂಕಿನ ಸಿಗಂದೂರು ಸೇತುವೆಯ ತಾಳಿಕೆ ಸಾಮರ್ಥ್ಯ ಪರೀಕ್ಷೆ ಬುಧವಾರ ಯಶಸ್ವಿಯಾಯಿತು   

ಶಿವಮೊಗ್ಗ: ಸಾಗರ ತಾಲ್ಲೂಕಿನ ಸಿಗಂದೂರಿನ ಸೇತುವೆ ನಿರ್ಮಾಣ ಕಾರ್ಯ ಮುಕ್ತಾಯದ ಹಂತ ತಲುಪಿದೆ. ಬುಧವಾರ ಸೇತುವೆಯ ಸಾಮರ್ಥ್ಯ ಅರಿಯಲು ನಡೆಸಿದ ಮೊದಲ ಹಂತದ ಪರೀಕ್ಷೆ ಯಶಸ್ವಿಯಾಯಿತು.

ಮೊದಲ ಹಂತದಲ್ಲಿ ಸೇತುವೆಯ ತಾಳಿಕೆಯ ಸಾಮರ್ಥ್ಯವನ್ನು ಒರೆಗೆ ಹಚ್ಚಲಾಯಿತು. ಜೂನ್ 23ರಂದು 50 ಟನ್, 24ರಂದು 75 ಟನ್ ಹಾಗೂ 25ರಂದು 100 ಟನ್‌ ಸಾಮರ್ಥ್ಯದ ಟಿಪ್ಪರ್‌ಗಳನ್ನು 24 ಗಂಟೆಗಳ ಕಾಲ ನಿರಂತರವಾಗಿ ಸೇತುವೆಯ ಮೇಲೆ ನಿಲ್ಲಿಸಲಾಗಿತ್ತು. ಈ ಪ್ರಾಯೋಗಿಕ ಪ್ರಕ್ರಿಯೆಯ ಯಶಸ್ಸಿನ ನಂತರ ಒಮ್ಮೆಗೆ 100 ಟನ್ ಸಾಮರ್ಥ್ಯ ತಾಳಿಕೊಳ್ಳುವ ಶಕ್ತಿ ಸೇತುವೆಗೆ ಇರುವುದು ಪರೀಕ್ಷೆಯಲ್ಲಿ ಗೊತ್ತಾಯಿತು.

‘ಸೇತುವೆಯ ಸುರಕ್ಷತೆಯ ಮೊದಲ ಹಂತದ ವರದಿ ಬಂದಿದ್ದು, ಅದು ಯಶಸ್ವಿಯಾಗಿದೆ. ವಿನ್ಯಾಸದ ರೀತಿಯಲ್ಲಿಯೇ ಸೇತುವೆ ನಿರ್ಮಾಣ ಆಗಿರುವುದು ಖಾತರಿಯಾಗಿದೆ. ಮುಂದಿನ ವಾರ ಎರಡನೇ ಹಂತದ ಪರೀಕ್ಷೆ ನಡೆಯಲಿದೆ. ಆಗ ಸೇತುವೆಗೆ ಪೂರಕವಾಗಿ ಅಳವಡಿಸಿರುವ ಕೇಬಲ್‌ಗಳ ಸಾಮರ್ಥ್ಯದ ಪರೀಕ್ಷೆ ನಡೆಯಲಿದೆ. ನಂತರ ಸೇತುವೆ ಸಂಚಾರಕ್ಕೆ ಸಿದ್ಧವಾಗಲಿದೆ’ ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪೀರ್‌ಪಾಶಾ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಶರಾವತಿ ಹಿನ್ನೀರು ಪ್ರದೇಶದ ಮೇಲೆ ಹಾದು ಹೋಗಿರುವ, ಅಂಬರಗೋಡ್ಲು–ಕಳಸವಳ್ಳಿ ನಡುವೆ 2.44 ಕಿ.ಮೀ ಉದ್ದದ ಈ ಸೇತುವೆಯನ್ನು ₹450 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪೇಂಟಿಂಗ್ ಸೇರಿದಂತೆ ಕೊನೆಯ ಹಂತದ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಉದ್ಘಾಟನೆ ಕಾರ್ಯಕ್ರಮದ ನಂತರ ಸೇತುವೆ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳ್ಳಲಿದೆ’ ಎಂದು ಪೀರ್‌ಪಾಶಾ ಹೇಳಿದರು.

ರಾಜಕೀಯ ಇಚ್ಛಾಶಕ್ತಿ: 
‘ಸೂಕ್ತ ಸಂಪರ್ಕ ಸೌಲಭ್ಯ ಇಲ್ಲದೇ, ಮುಳುಗಡೆ ಜನರು ಉತ್ಸಾಹವನ್ನೇ ಕಳೆದುಕೊಂಡಿದ್ದರು. ಇಂತಹ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಿ ಈ ಸೇತುವೆ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಪ್ರಧಾನಿ ನರೆಂದ್ರ ಮೋದಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಡುವಿನ ರಾಜ ಕೀಯ ಕೊಂಡಿಯ ಫಲ’ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

ಇದು ಅತ್ಯಂತ ತೃಪ್ತಿಯ ದಿನ: ಬಿವೈಆರ್

‘ಸಿಗಂದೂರು ಸೇತುವೆಯ ಮೊದಲ ಹಂತದ ಸಾಮರ್ಥ್ಯ ಪರೀಕ್ಷೆ ಯಶಸ್ವಿಯಾಗಿ ನಡೆದಿರುವುದು ನನಗೆ ತೃಪ್ತಿ ತಂದ ದಿನ’ ಎಂದು ಸಂಸದ ಬಿ.ವೈ.ರಾಘವೇಂದ್ರ ಹರ್ಷ ವ್ಯಕ್ತಪಡಿಸಿದರು.

‘ಸೂಕ್ತ ಸಂಪರ್ಕ ಸವಲತ್ತು ಇಲ್ಲದೇ ಮುಳುಗಡೆ ಜನರು ಉತ್ಸಾಹವನ್ನೇ ಕಳೆದುಕೊಂಡಿದ್ದರು. ಇಂತಹ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಿ ಈ ಸೇತುವೆ ನಿರ್ಮಾಣ ಮಾಡಲಾಗಿದೆ. ಇದಕ್ಕೆ ಪ್ರಧಾನಿ ನರೆಂದ್ರ ಮೋದಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಡುವಿನ ರಾಜಕೀಯ ಕೊಂಡಿಯೇ ಕಾರಣ’ ಎಂದರು.

ಈ ಸೇತುವೆ ನಿರ್ಮಾಣಕ್ಕೆ ಅನೇಕ ಸಂಘ–ಸಂಸ್ಥೆಗಳು ಹೋರಾಟ ಮಾಡಿವೆ. ರಾಜಕೀಯ ಪಕ್ಷಗಳು ಕೆಲಸ ಮಾಡಿವೆ. ಎಲ್ಲರಿಗೂ ಇದರ ಶ್ರೇಯ ಸಲ್ಲಬೇಕು. ಶೀಘ್ರ ಸೇತುವೆ ಉದ್ಘಾಟನೆ ದಿನ ನಿಗದಿ ಆಗಲಿದೆ ಎಂದು ತಿಳಿಸಿದರು. 

ಸಿಗಂದೂರು ಸೇತುವೆಯ ಮೊದಲ ಹಂತದ ಸಾಮರ್ಥ್ಯ ಪರೀಕ್ಷೆ ಯಶಸ್ವಿಯಾಗಿ ನಡೆದಿರುವುದು ನನಗೆ ತೃಪ್ತಿ ತಂದ ದಿನ
ಬಿ.ವೈ.ರಾಘವೇಂದ್ರ, ಶಿವಮೊಗ್ಗ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.