ತುಮರಿ: ಸಾಗರ ತಾಲ್ಲೂಕಿನ ಶರಾವತಿ ಎಡದಂಡೆಯ ದ್ವೀಪ ಪ್ರದೇಶ ತುಮರಿ, ಸುಳ್ಳಳ್ಳಿ ಸೇರಿ ನಾಲ್ಕು ಗ್ರಾಮ ಪಂಚಾಯಿತಿಗೆ ಸಂಪರ್ಕ ಕಲ್ಪಿಸುವ ಸಿಗಂದೂರು ಲಾಂಚ್ ಸೇರಿದಂತೆ ಇಲ್ಲಿನ ನಾಲ್ಕು ಕಡವು ಮಾರ್ಗಗಳಲ್ಲಿನ ಅರೆಕಾಲಿಕ ನೌಕರರಿಗೆ 8 ತಿಂಗಳಿಂದ ವೇತನ ಪಾವತಿಯಾಗಿಲ್ಲ. ಇದರಿಂದಾಗಿ ಅವರೆಲ್ಲಾ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಂಬಾರಗೋಡ್ಲು-ಕಳಸವಳ್ಳಿ, ಮುಪ್ಪಾನೆ, ಹಸಿರುಮಕ್ಕಿ, ತಲಗಳಲೆ (ಬೋಟ್)ಯಲ್ಲಿ ಕಡವು ಮಾರ್ಗಗಳು ಇವೆ. ಇದರಲ್ಲಿ 5 ಲಾಂಚ್ ಹಾಗೂ 1 ಬೋಟಿನಲ್ಲಿ ಒಟ್ಟು 17 ಜನರು ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಡಿ ಅರೆಕಾಲಿಕ ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೇತನ ಪಾವತಿಸುವ ವಿಚಾರದಲ್ಲಿ ಇಲಾಖೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವುದಾಗಿ ಇವರು ಆರೋಪಿಸಿದ್ದಾರೆ.
ಪ್ರತಿನಿತ್ಯ ಬಿಸಿಲು, ಮಳೆ, ಚಳಿಯನ್ನು ಲೆಕ್ಕಿಸದೇ ಸೂರ್ಯೋದಯಕ್ಕೂ ಮುನ್ನ ಹೊರಟು ಸೂರ್ಯಾಸ್ತದ ನಂತರ ಮನೆ ಸೇರುವ ಕಷ್ಟದ ಕಾಯಕ ಇವರದು. ಇವರಿಗೆ ಪ್ರತಿ ತಿಂಗಳು ತಲಾ ₹15,097 ಪಾವತಿಸಬೇಕು. ಆದರೆ ಇಲಾಖೆ, 8 ತಿಂಗಳಿಂದ ಒಟ್ಟು ₹ 20.53 ಲಕ್ಷ ಮೊತ್ತ ಬಾಕಿ ಉಳಿಸಿಕೊಂಡಿದೆ.
‘ಶರಾವತಿ ಹಿನ್ನೀರಿನ ನಾಲ್ಕು ಕಡವು ಮಾರ್ಗಗಳಲ್ಲಿ ಅಂಬಾರಗೋಡ್ಲು - ಕಳಸವಳ್ಳಿ ಹೊಳೆಬಾಗಿಲು ಮಾರ್ಗದ ಶರಾವತಿ-1, ಶರಾವತಿ-2, ಶರಾವತಿ -3 ಲಾಂಚ್ ಸೇವೆಯಿಂದಲೇ ದಿನಕ್ಕೆ ಸರಾಸರಿ ₹ 25,000 ದಿಂದ ₹ 30,000 ಆದಾಯ ಬರುತ್ತದೆ. ಆದರೆ ಜಲ ಸಾರಿಗೆ ಇಲಾಖೆಯ ಕೆಲವು ಹಿರಿಯ ಅಧಿಕಾರಿಗಳು ಇದನ್ನು ಮರೆಮಾಚುತ್ತಿದ್ದಾರೆ. ಕಡಿಮೆ ಆದಾಯ ಬರುತ್ತಿರುವುದಾಗಿ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ನೌಕರರ ವೇತನ ವಿಳಂಬಕ್ಕೆ ಇದು ಪ್ರಮುಖ ಕಾರಣ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಇಲಾಖೆಯ ಸಿಬ್ಬಂದಿಯೊಬ್ಬರು ಹೇಳಿದರು.
‘ಅರೆಕಾಲಿಕ ನೌಕರರು, ಪ್ರವಾಸಿಗರು ಹಾಗೂ ಸ್ಥಳೀಯರಿಗೆ ಗುಣಮಟ್ಟದ ಸೇವೆ ಒದಗಿಸುತ್ತಿದ್ದಾರೆ. ಒತ್ತಡದ ನಡುವೆಯೂ ದಕ್ಷತೆಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಇವರಿಗೆ ಸಮಯಕ್ಕೆ ಸರಿಯಾಗಿ ವೇತನ ನೀಡುವಲ್ಲಿ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ. ಸ್ಥಳೀಯ ಶಾಸಕರು ಮಧ್ಯಪ್ರವೇಶಿಸಿ ಬಾಕಿ ವೇತನ ಪಾವತಿಗೆ ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯರಾದ ಶೇಖರ್ ಹಾಗೂ ನಾಗರಾಜ ಒತ್ತಾಯಿಸಿದರು.
ಶರಾವತಿ ತಟದಲ್ಲಿ ನಿರ್ಮಾಣ ಆಗುತ್ತಿರುವ ಸಿಗಂದೂರು ಸೇತುವೆ ಕಾಮಗಾರಿ ಈ ವರ್ಷದ ಅಂತ್ಯದಲ್ಲಿ ಲೋಕಾರ್ಪಣೆ ಆಗಲಿದೆ ಎಂಬ ಮಾತು ಕೇಳಿಬರುತ್ತಿದೆ. ಸೇತುವೆ ಪೂರ್ಣಗೊಂಡರೆ ತಮ್ಮನ್ನು ಕೆಲಸದಿಂದ ತೆಗೆದು ಹಾಕಬಹುದು ಎಂಬ ಆತಂಕ ನೌಕರರಲ್ಲಿ ಮನೆಮಾಡಿದೆ. ಹಾಗೊಮ್ಮೆ ಕೆಲಸದಿಂದ ಬಿಡುಗಡೆಗೊಳಿಸಿದರೆ ಜೀವನ ನಿರ್ವಹಣೆಗೆ ಮುಂದೇನು ಮಾಡಬೇಕು ಎಂಬ ಪ್ರಶ್ನೆಯೂ ಅವರನ್ನು ಕಾಡುತ್ತಿದೆ.
‘ವೇತನ ಪಾವತಿಯಾಗದೇ ಇರುವುದರಿಂದ ಮನೆಗೆ ದಿನಸಿ ಖರೀದಿಸಲೂ ಆಗುತ್ತಿಲ್ಲ. ಮಕ್ಕಳ ಓದು ಸೇರಿ ಇತರೆ ಖರ್ಚು ವೆಚ್ಚಕ್ಕೆ ಹಣ ಹೊಂದಿಸುವುದು ಕಷ್ಟವಾಗಿದೆ. ಶೀಘ್ರ ವೇತನ ಬಿಡುಗಡೆ ಮಾಡಿದರೆ ಅನುಕೂಲವಾಗಲಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ನೌಕರರೊಬ್ಬರು ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.
ನೌಕರರ ಬಾಕಿ ವೇತನ ಬಿಡುಗಡೆಗೆ ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು ಶೀಘ್ರ ವೇತನ ಪಾವತಿಯಾಗಲಿದೆ.ಧನೇಂದ್ರ ಕಡವು ನಿರೀಕ್ಷಕ ಸಾಗರ
ಕಡವು ಕೇಂದ್ರಗಳ ಅರೆಕಾಲಿಕ ನೌಕರರು ವೇತನ ಪಾವತಿಯಾಗದ ಬಗ್ಗೆ ಅಗತ್ಯ ದಾಖಲೆಯೊಂದಿಗೆ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳಲಾಗುವುದು. ಸ್ವಷ್ಟನೆ ಕೇಳಿ ಕಡವು ನಿರೀಕ್ಷಕರಿಗೆ ತಕ್ಷಣವೇ ನೋಟಿಸ್ ಜಾರಿ ಮಾಡಲಾಗುವುದುಶಿಲ್ಪಾ ಬಿ. ಕಾರ್ಮಿಕ ಅಧಿಕಾರಿ
‘ಫೆಬ್ರುವರಿ 10ರೊಳಗೆ ಲಾಂಚ್ ನೌಕರರಿಗೆ ವೇತನ ಪಾವತಿಸಬೇಕು. ಇಲ್ಲದಿದ್ದರೆ ಸಾಗರ ಕಡವು ನಿರೀಕ್ಷಕರ ಕಚೇರಿ ಎದುರು ಸಾಂಕೇತಿಕವಾಗಿ ಭಿಕ್ಷಾಟನೆ ನಡೆಸಿ ಅಧಿಕಾರಿಗಳ ವಿರುದ್ಧ ಚಳವಳಿ ಹಮ್ಮಿಕೊಳ್ಳಲಾಗುವುದು’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಿನೇಶ್ ಶಿರವಾಳ ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.