ADVERTISEMENT

ಹೊಸನಗರ: ‘ಕಪ್ಪುಚಿನ್ನ’ಕ್ಕೆ ಕಾಡುತ್ತಿದೆ ಸೊರಗು ರೋಗ ಬಾಧೆ

ಸೊರಗುತ್ತಿದೆ ಕಾಳುಮೆಣಸಿನ ಬಳ್ಳಿಗಳು..

ರವಿ ನಾಗರಕೊಡಿಗೆ
Published 26 ಜನವರಿ 2025, 5:26 IST
Last Updated 26 ಜನವರಿ 2025, 5:26 IST
ಹೊಸನಗರ ತಾಲ್ಲೂಕಿನ ತೋಟವೊಂದರಲ್ಲಿ ಸಮೃದ್ಧವಾಗಿ ಬೆಳೆದಿದ್ದ ಕಾಳು ಮೆಣಸಿನ ಬಳ್ಳಿಗಳು ಸೊರಗಿರುವುದು
ಹೊಸನಗರ ತಾಲ್ಲೂಕಿನ ತೋಟವೊಂದರಲ್ಲಿ ಸಮೃದ್ಧವಾಗಿ ಬೆಳೆದಿದ್ದ ಕಾಳು ಮೆಣಸಿನ ಬಳ್ಳಿಗಳು ಸೊರಗಿರುವುದು   

ಹೊಸನಗರ: ಕಪ್ಪುಚಿನ್ನ ಎಂದೇ ಖ್ಯಾತಿ ಪಡೆದಿರುವ ಕಾಳುಮೆಣಸನ್ನು ಬೆಳೆಯುವ ರೈತರ ಮೊಗದಲ್ಲಿ ಈಗ ಸಂತಸವಿಲ್ಲ. ಮಲೆನಾಡು ಪ್ರದೇಶದಲ್ಲಿನ ಕಾಳುಮೆಣಸಿನ ಬಳ್ಳಿಗಳಿಗೆ ಸೊರಗು ರೋಗ ವ್ಯಾಪಿಸಿದ್ದು ರೋಗಗ್ರಸ್ಥ ಬಳ್ಳಿಗಳು ಸಾಯುತ್ತಿವೆ. ದಿನೇದಿನೇ ರೋಗ ಉಲ್ಬಣಗೊಳ್ಳುತ್ತಿದ್ದು ಬೆಳೆಗಾರರು ಆತಂಕದಲ್ಲಿದ್ದಾರೆ.

ಕಾಳುಮೆಣಸು ಬಳ್ಳಿಗೆ ಫಂಗಸ್ ತಗುಲಿದ್ದು, ರೋಗಪೀಡಿತ ಬಳ್ಳಿಗಳು ಯಾವುದೇ ಔಷಧೋಪಚಾರಕ್ಕೂ ಬಗ್ಗುತ್ತಿಲ್ಲ. ರೈತರು ಕಂಡಕಂಡ ಔಷಧಿ ಸಿಂಪಡಿಸಿ ಕೈಸುಟ್ಟುಕೊಂಡಿದ್ದಾರೆ. ಸಾಕಿ ಸಲುಹಿದ ಬಳ್ಳಿಗಳು ಕಣ್ಣೆದುರಿಗೆ ಸಾಯುವುದನ್ನು ಕಂಡು ಚಿಂತಿತರಾಗಿದ್ದಾರೆ. 

ಫಂಗಸ್ ದಾಳಿಗೆ ತುತ್ತಾದ ಬಳ್ಳಿಗಳು ಕೃಷವಾಗುತ್ತಾ ಸಾಗುತ್ತಿವೆ. ಮೊದಲಿಗೆ ಹಳದಿ ಎಲೆ ಕಂಡುಬಂದು, ಕ್ರಮೇಣ ಬಳ್ಳಿ ಒಣಗುತ್ತದೆ. ಬಳ್ಳಿಯಲ್ಲಿ ಸತ್ವ ಇಲ್ಲದಂತಾಗಿ ಎಲೆಗಳು ಸಂಪೂರ್ಣ ಉದುರಿ ಬಳ್ಳಿಗಳು ಸಾಯುತ್ತವೆ. 

ADVERTISEMENT

ಕಪ್ಪುಚಿನ್ನ: ಕಾಳುಮೆಣಸು ದೇಶದ ಪ್ರಮುಖ ಸಾಂಬಾರು ಪದಾರ್ಥ. ಕಪ್ಪುಚಿನ್ನ ಎನಿಸಿಕೊಂಡಿರುವ ಇದಕ್ಕೆ ದೇಶ ವಿದೇಶದಲ್ಲಿ ಉತ್ತಮ ಮಾರುಕಟ್ಟೆ ಇದೆ. ಇಲ್ಲಿನ ಮೆಣಸಿಗೆ ಉತ್ತಮ ಬೆಲೆ, ಹೆಸರೂ ಇದೆ. ಕಳೆದ ವರ್ಷ ಒಂದು ಕೆ.ಜಿ.ಗೆ ₹620ರಿಂದ ₹720ವರಗೆ ಧಾರಣೆ ಇತ್ತು. ಈಗ ₹620 ದರ ಇದೆ. ಈ ಹಿಂದಿನಿಂದಲೂ ಉತ್ತಮವಾದ ಧಾರಣೆ ಇದ್ದು, ಇಲ್ಲಿನ ರೈತರು ಸಂಪ್ರಾದಾಯಕವಾಗಿ ಮೆಣಸು ಬೆಳೆದು ಸಂತೃಪ್ತಿ ಕಂಡಿದ್ದರು. 

ಉಪಬೆಳೆ: ಮಲೆನಾಡಿನ ಅಡಿಕೆ ತೋಟದಲ್ಲಿ ಉಪಬೆಳೆಯಾಗಿ ಕಾಳುಮೆಣಸು ಬೆಳೆಯವ ಪದ್ಧತಿ ಇದೆ. ಅಡಿಕೆಗೆ ರೋಗಬಾಧೆ ಹೆಚ್ಚುತ್ತಿದ್ದು, ತೋಟಗಳು ಅವನತಿಯತ್ತ ಸಾಗುತ್ತಿರುವ ಸಮಯದಲ್ಲಿ ಮೆಣಸು ರೈತರ ಕೈ ಹಿಡಿಯುವ ಆಶಾದಾಯಕ ಬೆಳೆ ಎಂದೆನಿಸಿತ್ತು. ರೈತರು ಮೆಣಸು ಬೆಳೆಯುವಲ್ಲಿ ಆಸಕ್ತಿ ವಹಿಸಿ ಹೆಚ್ಚು ಹೆಚ್ಚು ಬಳ್ಳಿಗಳ್ನು ನೆಟ್ಟು ಪೋಷಿಸಿದ್ದರು. ಸಮೃದ್ಧ ಬಳ್ಳಿಗಳು ಫಸಲಿಗೆ ಬರುವ ಹಂತದಲ್ಲಿ ಸೊರಗು ರೋಗ ವ್ಯಾಪಕವಾಗಿ ಹರಡುತ್ತಿರುವುದು ರೈತರ ನಿದ್ದೆಗೆಡಿಸಿದೆ.

‘ನಮ್ಮ ತೋಟದಲ್ಲಿ ಸಾವಿರಕ್ಕೂ ಹೆಚ್ಚು ಬಳ್ಳಿ ನೆಟ್ಟಿದ್ದು, ಪ್ರತೀ ವರ್ಷವೂ 10 ಕ್ವಿಂಟಲ್‌ಗೆ ಹೆಚ್ಚು ಮೆಣಸು ಬೆಳೆಯುತ್ತಿದ್ದೆ. ಸಮೃದ್ಧ ಫಸಲು ನೀಡಿದ್ದ ಬಳ್ಳಿಗಳು ಕಳೆದ ಎರಡು ವರ್ಷಗಳಿಂದ ಕ್ಷೀಣಿಸುತ್ತಿವೆ. ಈ ವರ್ಷವಂತೂ ಸಾಕಷ್ಟು ಬಳ್ಳಿಗಳು ಒಣಗಿವೆ. 4 ಕ್ವಿಂಟಲ್‌ನಷ್ಟು ಫಸಲು ಸಿಗುವುದೂ ಕಷ್ಟವಾಗಿದೆ. ಮೆಣಸಿನ ಮೇಲೆ ಮನಸೇ ಇಲ್ಲವಾಗಿದೆ’ ಎನ್ನುತ್ತಾರೆ ಬಸವನಗುಂಡಿ ರುದ್ರೇಶಗೌಡರು.

ಸವಾಲಾಗಿ ಸ್ವೀಕರಿಸಿ: ‘ಮೆಣಸಿಗೆ ಯಾವತ್ತೂ ಬೆಲೆ ಇದ್ದೇ ಇದೆ. ಬಳ್ಳಿಗಳಿಗೆ ವ್ಯಾಪಿಸುತ್ತಿರುವ ರೋಗದ ಮೇಲೆ ಹತೋಟಿ ಸಾಧಿಸಬೇಕು. ಸೂಕ್ತ ಔಷಧೋಪಚಾರದಿಂದ ಬಳ್ಳಿ ಉಳಿಸಿಕೊಳ್ಳಬೇಕು. ಸತ್ತ ಬಳ್ಳಿಗಳನ್ನು ಸುಟ್ಟು ಹಾಕಿ, ಹೊಸ ಹೊಸ ಬಳ್ಳಿಗಳನ್ನು ನೆಡುತ್ತಿರಬೇಕು. ರೈತರು ಸೊರಗು ರೋಗವನ್ನು ಸವಾಲಾಗಿ ಸ್ವೀಕರಿಸಬೇಕು. ರೈತರು ಆಸಕ್ತಿ ಕಳೆದುಕೊಳ್ಳಬಾರದು’ ಎಂಬುದು ಪ್ರಗತಿಪರ ಕೃಷಿಕ ಕೆ.ಎನ್ ಸ್ವರೂಪ್ ಅವರ ಮಾತು. 

‘ಸೂಕ್ತ ಔಷಧೋಪಚಾರದಿಂದ ರಕ್ಷಣೆ ಸಾಧ್ಯ’

ಸೊರಗು ರೋಗದ ವೈಜ್ಞಾನಿಕ ಹೆಸರು ಕ್ವಿಕ್ವಿಲ್ಟ್. ಇದು ಫಿಟ್ಟತರ ಕ್ಯಾಪ್ಸಿಸಿ ಫಂಗಸ್‌ನಿಂದ ಹರಡುವ ರೋಗವಾಗಿದೆ. ಚೆನ್ನಾಗಿ ಬೆಳೆದ ಬಳ್ಳಿಗಳಿಗೆ ಈ ರೋಗಾಣು ಹಠಾತ್ತನೆ ದಾಳಿ ನಡೆಸುತ್ತದೆ. ರೋಗ ಲಕ್ಷಣ ಹೆಚ್ಚಿರುವ ಬಳ್ಳಿಗಳಿಗೆ ಬೋರ್ಡೋ ದ್ರಾವಣವನ್ನು ಸಿಂಪಡಿಸಬೇಕು ಅಥವಾ ಸಿಒಸಿ ಪೌಡರ್‌ ಅನ್ನು ಒಂದು ಲೀಟರ್ ನೀರಿಗೆ 2 ಗ್ರಾಂ ಬೆರಸಿ ಸಿಂಪಡಿಸಬೇಕು. ಬೇವಿನಹಿಂಡಿ ಮತ್ತು ಕೊಟ್ಟಿಗೆ ಗೊಬ್ಬರ ಚೆನ್ನಾಗಿ ನೀಡಬೇಕು. ಬೇಸಾಯ ಮಾಡುವಾಗ ಬೇರಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು. ರೈತರು ಸಕಾಲದಲ್ಲಿ ಸೂಕ್ತ ಔಷಧೋಪಚಾರ ಮಾಡಿದರೆ ರೋಗ ತಡೆಗಟ್ಟಬಹುದಾಗಿದೆ ಎಂದು ಮಾಹಿತಿ ನೀಡುತ್ತಾರೆ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪುಟ್ಟನಾಯ್ಕ.

ಸೊರಗು ರೋಗ ತುಂಬಾ ಅಪಾಯಕಾರಿ. ರೋಗ ಲಕ್ಷಣ ಗೋಚರಿಸಿದ ಕೂಡಲೇ ಬಳ್ಳಿಗಳು ಸಾಯುತ್ತವೆ. ರೈತರು ಎಚ್ಚರ ವಹಿಸಬೇಕಾಗಿದೆ.  ಹತ್ತಾರು ಔಷಧಿ ಪ್ರಯೋಗ ಬೇಡ. ತಜ್ಞರ ಸಲಹೆ ಮೇರೆಗೆ ಮುಂಜಾಗ್ರತಾ ಕ್ರಮ ಕಂಡುಕೊಳ್ಳಬೇಕು.
-ಬಸವನಗುಂಡಿ ರುದ್ರೇಶಗೌಡ, ರೈತರು
ಸೊರಗು ರೋಗದ ಆರಂಭಿಕ ಹಂತ
ಕಾಳುಮೆಣಸಿನ ಬಳ್ಳಿ ಸಂಪೂರ್ಣ ಸತ್ತು ಹೋಗಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.