ADVERTISEMENT

ತ್ಯಾವರೆಕೊಪ್ಪ: ವನ್ಯ‍ಪ್ರಾಣಿಗಳ ಆರೈಕೆಗೆ ಹೀಗೊಂದು ನೆಲೆ

ರಾಜ್ಯದ ನಾಲ್ಕನೇ ವನ್ಯಜೀವಿ ಸಂರಕ್ಷಣೆ, ರಕ್ಷಣೆ ಹಾಗೂ ಪುನರ್ವಸತಿ ಕೇಂದ್ರ ಸಿದ್ಧ

ವೆಂಕಟೇಶ ಜಿ.ಎಚ್.
Published 12 ಜನವರಿ 2026, 7:22 IST
Last Updated 12 ಜನವರಿ 2026, 7:22 IST
ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ–ಸಿಂಹಧಾಮದ ಪಕ್ಕದಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ವನ್ಯಪ್ರಾಣಿಗಳ ಪುನರ್ವಸತಿ ಕೇಂದ್ರದಲ್ಲಿನ ಹುಲಿಯ ನೆಲೆ –ಪ್ರಜಾವಾಣಿ ಚಿತ್ರ 
ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ–ಸಿಂಹಧಾಮದ ಪಕ್ಕದಲ್ಲಿ ಉದ್ಘಾಟನೆಗೆ ಸಿದ್ಧವಾಗಿರುವ ವನ್ಯಪ್ರಾಣಿಗಳ ಪುನರ್ವಸತಿ ಕೇಂದ್ರದಲ್ಲಿನ ಹುಲಿಯ ನೆಲೆ –ಪ್ರಜಾವಾಣಿ ಚಿತ್ರ    

ಶಿವಮೊಗ್ಗ: ಗಾಯ, ಅನಾರೋಗ್ಯ, ಮಾನವ–ಪ್ರಾಣಿ ಸಂಘರ್ಷ, ರಸ್ತೆ ಅಪಘಾತ ಇಲ್ಲವೇ ಗುಂಪಿನಿಂದ ಬೇರ್ಪಟ್ಟ ಕಾರಣಕ್ಕೆ ಅರಣ್ಯದಿಂದ ರಕ್ಷಿಸಲ್ಪಟ್ಟ ಕಾಡು ಪ್ರಾಣಿಗಳಿಗೆ ನೆಲೆ ಕಲ್ಪಿಸಿ ಚಿಕಿತ್ಸೆ ನೀಡಲು ರಾಜ್ಯದ ನಾಲ್ಕನೇ ವನ್ಯಜೀವಿ ಸಂರಕ್ಷಣೆ, ರಕ್ಷಣೆ ಹಾಗೂ ಪುನರ್ವಸತಿ ಕೇಂದ್ರ ಇಲ್ಲಿನ ಸಾಗರ ರಸ್ತೆಯ ತ್ಯಾವರೆಕೊಪ್ಪ ಹುಲಿ–ಸಿಂಹ ಧಾಮದಲ್ಲಿ ತಲೆ ಎತ್ತಿದೆ.

ರಾಜ್ಯದಲ್ಲಿ ಮೈಸೂರಿನ ಕೂರ್ಗಳ್ಳಿ, ಬನ್ನೇರುಘಟ್ಟ ಹಾಗೂ ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ಸದ್ಯ ವನ್ಯಜೀವಿ ಸಂರಕ್ಷಣೆ, ರಕ್ಷಣೆ ಹಾಗೂ ಪುನರ್ವಸತಿ ಕೇಂದ್ರ ಕಾರ್ಯಾಚರಿಸುತ್ತಿವೆ. ಇಲ್ಲಿ ಕಾಡುಪ್ರಾಣಿಗಳಿಗೆ ನೆಲೆ ಕಲ್ಪಿಸುವ ಜೊತೆಗೆ ತಳಿ ಸಂರಕ್ಷಣೆ ಹಾಗೂ ವಂಶಾಭಿವೃದ್ಧಿ ಕಾರ್ಯವೂ ನಡೆಯಲಿದೆ.

ತ್ಯಾವರೆಕೊಪ್ಪದ ಹುಲಿ–ಸಿಂಹಧಾಮದ ಪಕ್ಕದಲ್ಲಿಯೇ 5 ಎಕರೆ ವಿಸ್ತೀರ್ಣದಲ್ಲಿ ₹5 ಕೋಟಿ ವೆಚ್ಚದಲ್ಲಿ ಪುನರ್ವಸತಿ ಕೇಂದ್ರವನ್ನು ಈಗಾಗಲೇ ಅರಣ್ಯ ಇಲಾಖೆಯ ಶಿವಮೊಗ್ಗ ವನ್ಯಜೀವಿ ವಿಭಾಗ ನಿರ್ಮಾಣ ಮಾಡಿದೆ.

ADVERTISEMENT

‘ಪುನರ್ವಸತಿ ಕೇಂದ್ರದ ನಿರ್ವಹಣೆಯನ್ನು ಕೇಂದ್ರೀಯ ಮೃಗಾಲಯ ಪ್ರಾಧಿಕಾರವೇ ಮಾಡುವುದರಿಂದ ಅದನ್ನು ತ್ಯಾವರೆಕೊಪ್ಪ ಹುಲಿ–ಸಿಂಹ ಧಾಮದ ಆಡಳಿತಕ್ಕೆ ವಹಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಹಸ್ತಾಂತರ ಕಾರ್ಯ ಶೀಘ್ರ ಪೂರ್ಣಗೊಳ್ಳಲಿದ್ದು, ನಂತರ ಪುನರ್ವಸತಿ ಕೇಂದ್ರಕ್ಕೆ ಚಾಲನೆ ದೊರೆಯಲಿದೆ’ ಎಂದು ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ ಹೇಳುತ್ತಾರೆ.

ಮಧ್ಯ ಕರ್ನಾಟಕ, ಮಲೆನಾಡು ಭಾಗಕ್ಕೆ ಅನುಕೂಲ: ಈಚೆಗೆ ಮಾನವ–ಪ್ರಾಣಿ ಸಂಘರ್ಷ ಹೆಚ್ಚುತ್ತಿವೆ. ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ, ದಾವಣಗೆರೆ, ಹಾವೇರಿ, ಚಿತ್ರದುರ್ಗ ಸೇರಿದಂತೆ ಮಧ್ಯಕರ್ನಾಟಕ ಹಾಗೂ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ಗಾಯಗೊಂಡು ರಕ್ಷಣೆಗೊಳಗಾಗುತ್ತಿದ್ದ ಪ್ರಾಣಿಗಳನ್ನು ಇಲ್ಲಿಯವರೆಗೂ ಬನ್ನೇರುಘಟ್ಟ ಇಲ್ಲವೇ ಮೈಸೂರಿನ ಕೂರ್ಗಳ್ಳಿಯ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗುತ್ತಿತ್ತು. ಈ ಜಿಲ್ಲೆಗಳ ವನ್ಯಜೀವಿಗಳಿಗೆ ತುರ್ತು ನೆರವು ಹಾಗೂ ಪುನರ್ವಸತಿ ಅಗತ್ಯವಿದ್ದರೆ ಇನ್ನುಮುಂದೆ ಶಿವಮೊಗ್ಗಕ್ಕೆ ಕರೆತರಲಿದ್ದಾರೆ ಎಂದು ತ್ಯಾವರೆಕೊಪ್ಪ ಹುಲಿ–ಸಿಂಹ ಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಕೆ.ವಿ.ಅಮರಾಕ್ಷರ ಹೇಳುತ್ತಾರೆ.

ಆನೆಗಳಿಗೆ ಸಕ್ರೆಬೈಲು ಶಿಬಿರ ಇರುವುದರಿಂದ ಹುಲಿ, ಚಿರತೆ, ಕರಡಿ ಸೇರಿದಂತೆ ಬೇರೆ ಬೇರೆ ವನ್ಯಪ್ರಾಣಿಗಳನ್ನು ಇಲ್ಲಿಗೆ ಕರೆತರಲಾಗುತ್ತದೆ. 

ಇದು ತಾತ್ಕಾಲಿಕ ನೆಲೆ: ವನ್ಯಜೀವಿಗಳಿಗೆ ಮನುಷ್ಯರ ಸಂಪರ್ಕ ಆರಂಭವಾದರೆ ಅವು ಕಾಡಿನ ಗುಣಗಳನ್ನು ಮರೆತು ಬಿಡುತ್ತವೆ. ಹೀಗಾಗಿ ಪುನರ್ವಸತಿ ಕೇಂದ್ರಕ್ಕೆ ಸಾರ್ವಜನಿಕರಿಗೆ ಪ್ರವೇಶಾವಕಾಶ ಇಲ್ಲ. ಅನಾರೋಗ್ಯ ಇಲ್ಲವೇ ನಾಡಿಗೆ ಬಂದು ತೊಂದರೆ ಕೊಡುತ್ತಿದ್ದರೆ ಅಂತಹ ಪ್ರಾಣಿಗಳನ್ನು ಇಲ್ಲಿಗೆ ಕರೆತಂದು ಚಿಕಿತ್ಸೆ ನೀಡಲಾಗುತ್ತದೆ. ಅವುಗಳ ಒತ್ತಡ ಕಡಿಮೆ ಮಾಡಲಾಗುತ್ತದೆ. ಆ ಪ್ರಾಣಿಗೆ ಕಾಡಿನಲ್ಲಿ ಇರಲು ಅರ್ಹತೆ ಇದ್ದರೆ ವಾಪಸ್ ಬಿಡಲಾಗುವುದು. ಹೀಗಾಗಿ ಪುನರ್ವಸತಿ ಕೇಂದ್ರ ಅವುಗಳಿಗೆ ತಾತ್ಕಾಲಿಕ ನೆಲೆ ಮಾತ್ರ ಎಂದು ಅಮರಾಕ್ಷರ ತಿಳಿಸಿದರು.

ಇಲ್ಲಿ ಪುನರ್ವಸತಿ ಕೇಂದ್ರದ ಅಗತ್ಯವಿತ್ತು..

ಸಂರಕ್ಷಿಸಲ್ಪಟ್ಟ ಪ್ರಾಣಿಗಳಿಗೆ ತುರ್ತಾಗಿ ಚಿಕಿತ್ಸೆ ನೀಡಬೇಕಿದ್ದರೂ ಇಲ್ಲಿಯವರೆಗೂ ದೂರದ ಮೈಸೂರು ಇಲ್ಲವೇ ಬನ್ನೇರುಘಟ್ಟಕ್ಕೆ ಒಯ್ಯಬೇಕಿತ್ತು. ಇದರಿಂದ ನಿಗದಿತ ಅವಧಿಯಲ್ಲಿ ಚಿಕಿತ್ಸೆ ಸಿಗದೇ ಪ್ರಾಣಿಗಳು ಮೃತಪಡುತ್ತಿದ್ದವು. ಹೀಗಾಗಿ ಶಿವಮೊಗ್ಗದಲ್ಲಿ ಪುನರ್ವಸತಿ ಕೇಂದ್ರ ನಿರ್ಮಿಸುವ ತುರ್ತು ಅಗತ್ಯವಿತ್ತು ಎಂದು ಕೆ.ವಿ.ಅಮರಾಕ್ಷರ ಹೇಳುತ್ತಾರೆ. ಕಾಡಿನಲ್ಲಿ ಸಂರಕ್ಷಿಸಿ ಕರೆತಂದ ಪ್ರಾಣಿಗಳನ್ನು ಮೃಗಾಲಯದಲ್ಲಿ ಇಡಲು ಸಾಧ್ಯವಿಲ್ಲ. ಅವಕಾಶವೂ ಇಲ್ಲ. ಅಲ್ಲಿನ ಪ್ರಾಣಿಗಳ ವರ್ತನೆಯೇ ಬೇರೆ. ಇಲ್ಲಿಯ ಪ್ರಾಣಿಗಳ ರೀತಿಯೇ ಬೇರೆ. ಹೀಗೆ ರಕ್ಷಿಸಿ ಕರೆತಂದ ವನ್ಯಪ್ರಾಣಿಗಳಿಂದ ಯಾವುದಾದರೂ ಸಾಂಕ್ರಾಮಿಕ ರೋಗ ಹರಡಬಹುದು. ಹೀಗಾಗಿ ಕಾಡಿನಿಂದ ಕರೆತಂದ ಪ್ರಾಣಿಗಳನ್ನು ಮೃಗಾಲಯದಿಂದ ದೂರವೇ ಇಡಬೇಕಿದೆ ಎನ್ನುತ್ತಾರೆ.

ತ್ಯಾವರೆಕೊಪ್ಪ ಹುಲಿ–ಸಿಂಹಧಾಮದ ಪಕ್ಕ ವನ್ಯಜೀವಿ ಸಂರಕ್ಷಣೆ ರಕ್ಷಣೆ ಹಾಗೂ ಪುನರ್ವಸತಿ ಕೇಂದ್ರ ಸಿದ್ಧವಾಗಿದೆ. ಅದನ್ನು ಮೃಗಾಲಯ ಪ್ರಾಧಿಕಾರಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.
–ಪ್ರಸನ್ನಕೃಷ್ಣ ಪಟಗಾರ, ಡಿಸಿಎಫ್ ಶಿವಮೊಗ್ಗ ವನ್ಯಜೀವಿ ವಿಭಾಗ
ಹುಲಿ–ಸಿಂಹಧಾಮದಲ್ಲಿನ ಪ್ರಾಣಿಗಳ ಆರೈಕೆ ಮಾಡುತ್ತಿರುವ ಸಿಬ್ಬಂದಿ ಹಾಗೂ ವೈದ್ಯರೇ ಪುನರ್ವಸತಿ ಕೇಂದ್ರಕ್ಕೆ ಬರುವ ಪ್ರಾಣಿಗಳ ಕಾಳಜಿ ಮಾಡಲಿದ್ದಾರೆ. ಹಸ್ತಾಂತರ ಆಗುತ್ತಿದ್ದಂತೆಯೇ ನಿರ್ವಹಣೆ ಆರಂಭಿಸಲಿದ್ದೇವೆ
–ಕೆ.ವಿ.ಅಮರಾಕ್ಷರ, ತ್ಯಾವರೆಕೊಪ್ಪ ಹುಲಿ–ಸಿಂಹಧಾಮದ ಕಾರ್ಯನಿರ್ವಾಹಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.