ಭದ್ರಾವತಿ: ತಾಲ್ಲೂಕಿನ ಉಕ್ಕುಂದ ಗ್ರಾಮದ ಭದ್ರಾ ಕಾಲುವೆಯಲ್ಲಿ ಸೆ. 21ರಂದು ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಯುವತಿ ಮೃತಪಟ್ಟಿದ್ದು, ಯುವಕ ಸಾವಿನಿಂದ ಪಾರಾಗಿದ್ದಾನೆ.
ಪ್ರಿಯಕರನೇ ಪ್ರೇಯಸಿಯ ಕೊಲೆ ಮಾಡಿದ್ದಾನೆ ಎಂದು ಯುವತಿಯ ಪೋಷಕರು ನಗರದ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನೆಯ ವಿವರ: ‘ಸೂರ್ಯ ಮತ್ತು ಸ್ವಾತಿ ಪರಸ್ಪರ ಪ್ರೀತಿಸುತ್ತಿದ್ದರು. ಸ್ವಾತಿ ಪದವಿ ವ್ಯಾಸಂಗ ಮಾಡುತ್ತಿದ್ದರು. ಸೂರ್ಯ ಮದುವೆ ಆಗುವುದಕ್ಕೆ ಪೀಡಿಸುತ್ತಿದ್ದ. ಇತ್ತ ಸ್ವಾತಿ ಮನೆಯವರು ಓದು ಮುಗಿಯುವವರೆಗೆ ಮದುವೆ ಬೇಡವೆಂದಿದ್ದರು. ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿತ್ತು. ನಂತರ ಇಬ್ಬರೂ ಮನೆ ಬಿಟ್ಟು ಹೋಗಿದ್ದರು. ಸ್ವಾತಿಯ ಕುಟುಂಬದವರು ನಗರದ ಹೊಸ ಮನೆ ಠಾಣೆಯಲ್ಲಿ ‘ಕಾಣೆ’ಯಾಗಿರುವ ಬಗ್ಗೆ ದೂರು ನೀಡಿದ್ದರು. ಮನೆಯಿಂದ ಹೊರಟ ಪ್ರೇಮಿಗಳು ಭದ್ರಾ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದರು’ ಎನ್ನಲಾಗಿದೆ. ಎರಡು ದಿನದ ನಂತರ ಯುವತಿಯ ಮೃತದೇಹ ಪತ್ತೆಯಾಗಿದೆ.
ಸ್ವಾತಿ ಕುಟುಂಬದವರು ಸೂರ್ಯ ಮತ್ತು ಆತನ ತಂದೆ ಸ್ವಾಮಿ ವಿರುದ್ಧ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಸೂರ್ಯ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.