ಕೋಣಂದೂರು: ಈಚೆಗೆ ಕೋಣಂದೂರು ಸುತ್ತಮುತ್ತ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಮಲೆನಾಡಿಗರಲ್ಲಿ ಆತಂಕ ಮನೆ ಮಾಡಿದೆ.
ಕೋಣಂದೂರು ಸಮೀಪದ ಗುಡ್ಡೆಕೊಪ್ಪದಲ್ಲಿ ಶುಕ್ರವಾರ ಮಧ್ಯಾಹ್ನ ಮನೆಯ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ್ದು, ಮನೆಯಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಬೆಲೆಬಾಳುವ ವಸ್ತುಗಳು ಸಿಕ್ಕಿಲ್ಲದಿರುವುದರಿಂದ ವಸ್ತುಗಳನ್ನು ಪುಡಿ ಪುಡಿ ಮಾಡಿ ಹಿಂಭಾಗದ ಬಾಗಿಲಿನಿಂದ ಹೊರ ಹೋಗಿದ್ದಾರೆ. ಹಿರೇಸರದ ಮನೆಯೊಂದರಲ್ಲಿದ್ದ ₹5,000 ನಗದು ಹಾಗೂ ಬಂಗಾರ, ಬೆಳ್ಳಿಯನ್ನು ಕದ್ದು ಪರಾರಿಯಾಗಿದ್ದಾರೆ.
ಆಲೂರು ಹೊಸಕೊಪ್ಪದ ಉಮಾಮಹೇಶ್ವರ ದೇವಸ್ಥಾನ, ಯೋಗಿಮಳಲಿ ದೇವಸ್ಥಾನದ ಹುಂಡಿ, ಜಂಬೆ, ಹುಲ್ಲತ್ತಿ, ಹುಂಚಾ, ಕಾರ್ಕೊಡ್ಲು ಈ ಭಾಗಗಳಲ್ಲಿ ಕಳ್ಳತನ ನಡೆದಿದ್ದು, ಆಭರಣ, ನಗದು, ಚಪ್ಪರದಲ್ಲಿ ಒಣಗಿಸಿದ್ದ ಅಡಿಕೆ, ಪಾತ್ರೆಗಳನ್ನು ಕಳ್ಳರು ದೋಚಿಕೊಂಡು ಹೋಗಿದ್ದಾರೆ.
‘ದಿನದಿಂದ ದಿನಕ್ಕೆ ಒಂದಲ್ಲ ಒಂದು ಭಾಗದಲ್ಲಿ ಕಳ್ಳತನ ನಡೆಯುತ್ತಿರುವುದು ಈ ಭಾಗದಲ್ಲಿ ಆತಂಕ ಸೃಷ್ಟಿಸಿದೆ. ಕೆಲವರು ದೂರು ನೀಡಲು ಮುಂದಾಗುತ್ತಿಲ್ಲ. ಒಂಟಿ ಮನೆಗಳಲ್ಲಿ ಕಳ್ಳತನ ನಡೆಯುತ್ತಿದ್ದು, ಸ್ಥಳೀಯರ ಸಹಕಾರ ಇರಬಹುದು’ ಎಂದು ನಿವಾಸಿಗಳು ಶಂಕಿಸಿದ್ದಾರೆ.
ಕೆಲ ದಿನಗಳ ಹಿಂದೆ ಹೊಸಕೊಪ್ಪದ ಉಮಾಮಹೇಶ್ವರ ದೇವಸ್ಥಾನದ 2 ಕಾಣಿಕೆ ಹುಂಡಿಗಳನ್ನು ಕಳ್ಳರು ಹೊತ್ತೊಯ್ದಿದ್ದರು. ಹಣವನ್ನು ದೋಚಿಕೊಂಡು 2 ಕಿ.ಮೀ. ಅಂತರದಲ್ಲಿ ಹುಂಡಿಯನ್ನು ಬಿಸಾಡಿ ಹೋಗಿದ್ದರು. ಮಾಳೂರು ಠಾಣಾ ವ್ಯಾಪ್ತಿಯ ಯೋಗಿ ಮಳಲಿ ಈಶ್ವರ ದೇವಸ್ಥಾನದ ಸಿ.ಸಿ. ಟಿವಿ ಕ್ಯಾಮೆರಾವನ್ನು ಮುರಿದು ಕಳ್ಳತನ ಮಾಡಿದ್ದರು.
ಯೋಗಿಮಳಲಿಯಲ್ಲಿ ಒಂಟಿ ಮನೆಯೊಂದರ ಬಾಗಿಲು ಮುರಿದು ಪಾತ್ರೆ ಮತ್ತಿತರ ವಸ್ತುಗಳನ್ನು ಹೊತ್ತುಕೊಂಡು ಹೋಗಿದ್ದಾರೆ. ಕಾನುಕೊಪ್ಪದ ಮನೆಯೊಂದರಲ್ಲಿ ಆಸ್ಪತ್ರೆಗೆ ಹೋಗಲು ತಂದು ಮನೆಯಲ್ಲಿಟ್ಟುಕೊಂಡಿದ್ದ ₹10,000 ಹಣವನ್ನು ಕಳ್ಳರು ದೋಚಿದ್ದಾರೆ. ಮಳಲೀಮಕ್ಕಿ ಸಮೀಪದ ಕಳಸಗುಂಡಿ ಮನೆಯೊಂದರಲ್ಲಿ ಬೆಲೆಬಾಳುವ ಬಂಗಾರ, ನಗದು ದೋಚಿದ್ದಾರೆ. ಜಂಬೆ ಗ್ರಾಮದ ಮನೆಯೊಂದರ ಬೀಗವನ್ನು ಹಗಲಿನಲ್ಲೇ ಕಲ್ಲಿನಿಂದ ಒಡೆದು ಪರಾರಿಯಾಗಿದ್ದಾರೆ.
‘ಪೊಲೀಸ್ ಇಲಾಖೆ ಮಲೆನಾಡು ಭಾಗದಲ್ಲಿ ಜನರಲ್ಲಿ ಮೂಡಿರುವ ಆತಂಕವನ್ನು ನಿವಾರಿಸಬೇಕು. ಅನುಮಾನಾಸ್ಪದ ವ್ಯಕ್ತಿಗಳನ್ನು ಠಾಣೆಗೆ ಕರೆದು ವಿಚಾರಿಸಬೇಕು. ಸುತ್ತಮುತ್ತಲ ಹಳ್ಳಿಗಳಿಗೆ ಪೊಲೀಸ್ ಬೀಟ್ ಹೆಚ್ಚಿಸಬೇಕು’ ಎನ್ನುತ್ತಾರೆ ಕೋಣಂದೂರು ನಿವಾಸಿ ದೇವರಾಜ್ ಶೆಟ್ಟಿ.
ಕೋಣಂದೂರು ಸುತ್ತಮುತ್ತ ನಡೆಯುತ್ತಿರುವ ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದ್ದೇವೆ. ಒಂದೆರಡು ಕುರುಹುಗಳು ಸಿಕ್ಕಿದ್ದು ಇನ್ನಷ್ಟು ಮಾಹಿತಿ ಬರಬೇಕಿದೆ-ಶಿವನಗೌಡ ಪಾಟೀಲ್, ಪಿಎಸ್ಐ ತೀರ್ಥಹಳ್ಳಿ
ಮಾಳೂರು ಪೊಲೀಸ್ ಠಾಣಾ ವ್ಯಾಪ್ತಿಯ ನಡೆದ ಕಳ್ಳತನ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ಇನ್ನುಳಿದ ಕೆಲವು ಪ್ರಕರಣಗಳು ತನಿಖೆ ಹಂತದಲ್ಲಿವೆ. ಜನರಲ್ಲಿ ಜಾಗೃತಿ ಮೂಡಿಸಲು ಹಗಲು ಮತ್ತು ರಾತ್ರಿ ಗಸ್ತು ವ್ಯವಸ್ಥೆ ಮಾಡಲಾಗಿದೆ-ಕುಮಾರ್, ಪಿಎಸ್‌ಐ ಮಾಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.