ತೀರ್ಥಹಳ್ಳಿ: ಅಡಿಕೆ ಕೊನೆ ತೆಗೆಯಲು, ಔಷಧಿ ಸಿಂಪಡಣೆ ಮಾಡುವ ಬಳಕೆಯಾಗುವ ಕಾರ್ಬನ್ ಫೈಬರ್ ದೋಟಿಗೆ ಗರಿಷ್ಟ ₹40,000 ಸಹಾಯಧನ ಬಿಡುಗಡೆ ಮಾಡಲಾಗಿದೆ. ಪರಿಶಿಷ್ಟ ಜಾತಿ, ಪಂಗಡಕ್ಕೆ 50, ಸಾಮಾನ್ಯ ರೈತರಿಗೆ ಶೇ 40ರಷ್ಟು ಸಬ್ಸಿಡಿ ಸಿಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಈಗ ₹4,000 ಮಾತ್ರ ಸಹಾಯಧನ ಸಿಗುತ್ತಿತ್ತು. ಅದನ್ನು ಬದಲಾಯಿಸಿ ಕೇಂದ್ರ ಸರ್ಕಾರ ಹೊಸ ಆದೇಶ ಹೊರಡಿಸಿದೆ ಎಂದು ತಿಳಿಸಿದರು.
ಕೇಂದ್ರದ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರೊಂದಿಗೆ ಚರ್ಚೆ ನಡೆಸಲಾಗಿದೆ. ಈಗಾಗಲೇ ರಾಜ್ಯಕ್ಕೆ ₹57.20 ಕೋಟಿ ಅನುದಾನ ಬಿಡುಗಡೆಯಾಗಲಿದೆ. ಜಿಲ್ಲೆಗೆ ₹5 ಕೋಟಿಗೂ ಹೆಚ್ಚು ಸಹಾಯಧನ ಲಭಿಸಿದೆ. ಈಗಾಗಲೇ ತಜ್ಞರ ಸಮಿತಿ ಅಡಿಕೆ ಎಲೆಚುಕ್ಕಿ, ಕೊಳೆರೋಗದ ಕುರಿತು ಸಂಶೋಧನೆ ನಡೆಸಿದ್ದು ಇನ್ನಷ್ಟು ಸಂಶೋಧನೆ ಅಗತ್ಯವಿದೆ ಎಂದರು.
ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡುವ ಉದ್ದೇಶದಲ್ಲಿ ಕೇಂದ್ರ ಸರ್ಕಾರ ₹1.27 ಲಕ್ಷ ಕೋಟಿ ಅನುದಾನ ಮೀಸಲಿಟ್ಟಿದೆ. ಭತ್ತದ ಕೃಷಿ ಹೆಚ್ಚಿಸಲು ಉತ್ತೇಜನ ನೀಡುವ ಅವಶ್ಯಕತೆ ಇದೆ. ಹವಾಮಾನ ಆಧಾರಿತ ಬೆಳೆ ವಿಮೆ ವಿತರಣೆ ಮಾಡಲಾಗುತ್ತಿದೆ. ಆದರೆ ಮಳೆ ಮಾಪನ ಕೇಂದ್ರಗಳು ಸೂರಿನಡಿಯಲ್ಲಿ ಇದ್ದು ಅವುಗಳನ್ನು ಬದಲಾಯಿಸಿ ಸುಸ್ಥಿತಿಗೆ ತರಬೇಕಾಗಿದೆ. ಪ್ರಧಾನ ಮಂತ್ರಿ ಜನಧಾನ್ಯ ಕೃಷಿ ಯೋಜನೆ ವ್ಯಾಪ್ತಿಗೆ ಒಳಪಡಿಸಲಾಗಿದೆ. ನೆಟ್‌ವರ್ಕ್ ಸಮಸ್ಯೆ ಬಗೆಹರಿಸಲು ಈಗಾಗಲೇ ಟವರ್ ನಿರ್ಮಾಣ ಮಾಡಲಾಗುತ್ತಿದ್ದು ಶೀಘ್ರ ಗ್ರಾಮೀಣ ಭಾಗಗಳಿಗೂ ನೆಟ್‌ವರ್ಕ್ ಸಿಗಲಿದೆ ಎಂದು ತಿಳಿಸಿದರು.
ಶಾಸಕ ಆರಗ ಜ್ಞಾನೇಂದ್ರ, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ನವೀನ್ ಹೆದ್ದೂರು, ಪ್ರಧಾನ ಕಾರ್ಯದರ್ಶಿ ರಕ್ಷಿತ್ ಮೇಗರವಳ್ಳಿ, ಯುವಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಪ್ರಶಾಂತ್ ಕುಕ್ಕೆ, ಮುಖಂಡರಾದ ಸಂದೇಶ ಜವಳಿ, ಸಾಲೇಕೊಪ್ಪ ರಾಮಚಂದ್ರ, ಅಶೋಕ್‌ಮೂರ್ತಿ ಇದ್ದರು.
ಅಧಿಕಾರಿಗಳಿಗೆ ಮುತ್ತು ಕೊಡಬೇಕೇ…?
‘ತೀರ್ಥಹಳ್ಳಿ ತಾಲ್ಲೂಕು ಕಚೇರಿಯಲ್ಲಿ ಅವ್ಯವಹಾರ ನಡೆಸುವ ಭ್ರಷ್ಟ ಅಧಿಕಾರಿಗಳು ಸೇರಿಕೊಂಡಿದ್ದಾರೆ. ಸಾಮಾನ್ಯ ಜನರ ಜೀವ ತಿನ್ನುತ್ತಿದ್ದಾರೆ. ಅವರಿಗೆ ಬೈಯುವ ಬದಲಿಗೆ ಮುತ್ತು ಕೊಡಬೇಕೇ’ ಎಂದು ಶಾಸಕ ಆರಗ ಜ್ಞಾನೇಂದ್ರ ಪ್ರಶ್ನಿಸಿದರು. ‘ರಾಜ್ಯ ಸರ್ಕಾರವೇ ದೊಡ್ಡ ಭ್ರಷ್ಟಾಚಾರದ ಕೂಪವಾಗಿದೆ. ಕೆಲವು ಸರ್ಕಾರಿ ಅಧಿಕಾರಿಗಳನ್ನು ನೋಡಿದರೆ ತೀವ್ರ ಕೋಪ ಬರುತ್ತದೆ. ಮಾಜಿ ಸಚಿವರು ಅಧಿಕಾರಿಗಳ ಪರ ವಕಾಲತ್ತು ವಹಿಸಲು ಬರುತ್ತಾರೆ. ಶೀಘ್ರವೇ ಭ್ರಷ್ಟ ಆಡಳಿತದ ವಿರುದ್ಧ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸುತ್ತೇನೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.