
ಶಿವಮೊಗ್ಗದ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಸಭೆಯಲ್ಲಿ ಮಾಜಿ ಶಾಸಕ ಎಸ್.ರುದ್ರೇಗೌಡ ಮಾತನಾಡಿದರು
ಶಿವಮೊಗ್ಗ: ‘ಶಿವ ಸಂಕಲ್ಪ ಸಂಘಟನೆಯ ಬೆನ್ನ ಹಿಂದೆ ನಿಂತು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಶಿವಮೊಗ್ಗದಲ್ಲಿ ವೀರಶೈವ ಲಿಂಗಾಯತ ಸಮುದಾಯವನ್ನು ಒಡೆಯುತ್ತಿದ್ದಾರೆ’ ಎಂದು ಆರೋಪಿಸಿ ಶನಿವಾರ ಇಲ್ಲಿ ನಡೆದ ಸಮುದಾಯದ ಸಭೆ ಖಂಡನಾ ನಿರ್ಣಯ ಕೈಗೊಂಡಿತು.
‘ಶಿವ ಸಂಕಲ್ಪ ಸಮಾವೇಶದಲ್ಲಿ ನನ್ನನ್ನು ವಿರೋಧಿಸುವವರು ಲಿಂಗಾಯತರೇ ಅಲ್ಲ ಎಂದು ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಬೇರೆ ಬೇರೆ ವೇದಿಕೆಗಳಲ್ಲಿ ವೀರಶೈವ–ಲಿಂಗಾಯತ ಸಮುದಾಯದ ಬಗ್ಗೆ ಮಾತನಾಡಿದ್ದಾರೆ. ಲಿಂಗಾಯತ ಮಠಾಧೀಶರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಸ್ವಾಮೀಜಿಯೊಬ್ಬರನ್ನು ಬೆಂಬಲಿಸಿ ಸಮುದಾಯದ ಶ್ರೀಗಳಿಗೆ ಅಪಮಾನ ಮಾಡಿದ್ದಾರೆ’ ಎಂದು ಸಭೆಯ ಆರಂಭದಲ್ಲಿ ಮುಖಂಡ ಎಸ್.ಪಿ.ದಿನೇಶ್ ಕಿಡಿಕಾರಿದರು.
‘ಈಶ್ವರಪ್ಪ ಅವರಿಂದ ನಮ್ಮ ಸಮಾಜಕ್ಕೆ ಕಂಟಕ ಬರುತ್ತಿದೆ. ಇದನ್ನು ಎಲ್ಲರೂ ಒಗ್ಗಟ್ಟಾಗಿ ಎದುರಿಸಬೇಕಿದೆ. ಚುನಾವಣೆ ಬಂದಾಗ ಸಮಾಜ ಒಡೆಯಲು ಬಿಡಬಾರದು. ನಮ್ಮ ಸಮಾಜದವರು ಯಾರೇ ಚುನಾವಣೆಗೆ ನಿಲ್ಲಲಿ. ಬೇಕಾದವರನ್ನು ಆಯ್ಕೆ ಮಾಡಿಕೊಳ್ಳೋಣ. ನಾವು (ವೀರಶೈವ ಲಿಂಗಾಯತರು) ಬೇರೆಯವರ ಗುಲಾಮರಾಗುವುದು ಬೇಡ. ಸಮುದಾಯ ಈಗಲೇ ಎಚ್ಚೆತ್ತುಕೊಂಡರೆ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಬಹುದು. ಹಣ ಕೊಟ್ಟು ಯಾರನ್ನು ಬೇಕಾದರೂ ಸೆಳೆದುಕೊಳ್ಳಬಹುದು ಎಂಬ ಭಾವನೆ ಬೆಳೆಯಲು ಬಿಡಬಾರದು. ಈ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳಬೇಕು’ ಎಂದು ಸಭೆಯಲ್ಲಿದ್ದ ಹಲವರು ಒತ್ತಾಯಿಸಿದರು.
‘ತುಂಗಾ ಜಲಾಶಯ ಕಟ್ಟಿ ಶಿವಮೊಗ್ಗಕ್ಕೆ ಕುಡಿಯುವ ನೀರು ಕೊಟ್ಟೆ. ಯಾರೂ ನೆನಪಿಸಿಕೊಳ್ಳಲಿಲ್ಲ. ವೀರಶೈವರೇ ಚುನಾವಣೆಯಲ್ಲಿ ಸೋಲಿಸಿದರು. ಆದರೆ ಈಶ್ವರಪ್ಪ ಶಿವಮೊಗ್ಗಕ್ಕೆ ಏನು ಮಾಡಿದ್ದಾರೆ’ ಎಂದು ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ ಪ್ರಶ್ನಿಸಿದರು.
‘ಸಮುದಾಯದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವವರ ವಿರುದ್ಧ ಕೇಸು ದಾಖಲಿಸಿ. ಆಗ ಹೆದರುತ್ತಾರೆ’ ಎಂಬ ಒತ್ತಾಯವೂ ಅವರಿಂದ ಕೇಳಿಬಂದಿತು.
‘ಸಭೆಯಲ್ಲಿ ಹೀಗೆ ಮಾತನಾಡುವುದನ್ನು ಕೇಳಲು ಬಹಳ ಚೆಂದ ಇರುತ್ತದೆ. ಶಿವ ಸಂಕಲ್ಪ ಸಮಾವೇಶಕ್ಕೆ ಯಾಕೆ ಹೋಗಿದ್ದೀರಿ ಎಂದು ನನಗೆ ಕೇಳಿದ್ದೀರಿ. ಸಮಾಜದ ಅಧ್ಯಕ್ಷ ಆಗುವ ಮುನ್ನ 50 ವರ್ಷಗಳಿಂದಲೂ ನಾನೊಬ್ಬ ಉದ್ಯಮಿ. ರಾಜಕೀಯ ಕಾರಣಕ್ಕೆ ಈಶ್ವರಪ್ಪ ಅವರನ್ನು ವಿರೋಧ ಮಾಡಬಹುದು. ಉದ್ಯಮಕ್ಕೆ ನಮಗೆ ಎಲ್ಲರೂ ಬೇಕು. ಹೀಗಾಗಿ ಸಮಾಜದಿಂದ ಏನೂ ನಿರ್ಣಯ ಕೈಗೊಳ್ಳಲು ಆಗುವುದಿಲ್ಲ. ಸಭೆಯ ನಿರ್ಧಾರಕ್ಕೆ ಬದ್ಧ’ ಎಂದು ಬಸವೇಶ್ವರ ವೀರಶೈವ ಸಮಾಜದ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ಹೇಳಿದರು.
‘ಸಮುದಾಯದಿಂದ ಈಶ್ವರಪ್ಪ ಅವರ ವಿರುದ್ಧ ಕ್ರಮದ ನಿರ್ಣಯ ಕೈಗೊಳ್ಳಬೇಕಾದರೆ ನಾಳೆ ಅವರ ಬಳಿ ವಂತಿಗೆ, ಬೇರೆ ರೀತಿಯ ಸಹಾಯ ಕೇಳುವುದನ್ನು ಬಿಡಬೇಕು. ಆಗ ಮಾತ್ರ ಅದಕ್ಕೆ ಬೆಲೆ ಇರಲಿದೆ’ ಎಂದು ಕಾಂಗ್ರೆಸ್ ಮುಖಂಡ ಎಚ್.ಎಂ.ಯೋಗೀಶ್ ತಿಳಿಸಿದರು.
ಸಭೆಯಲ್ಲಿ ಕದಳಿ ವೇದಿಕೆಯ ಅಧ್ಯಕ್ಷೆ ಪಂಕಜಾ, ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ನಾಗರಾಜ್, ಚೇತನ್ ದುಂಬಳ್ಳಿ, ಶಾಂತಾ ಆನಂದ್ ಮತ್ತಿತರರು ಇದ್ದರು.
ರಾಜಕೀಯದಲ್ಲಿ ಧರ್ಮ ಬೆರೆಸುವುದು ಬೇಡ; ರುದ್ರೇಗೌಡ ‘ಶಿವಸಂಕಲ್ಪ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ನನ್ನ ಅನುಮತಿ ಪಡೆಯದೇ ಹೆಸರು ಫ್ಲೆಕ್ಸ್‌ನಲ್ಲಿ ಫೋಟೊ ಹಾಕಿದ್ದರು. ವಿಶ್ವಾಸ್ ಮಹಾಲಿಂಗಶಾಸ್ತ್ರಿ ಇಬ್ಬರನ್ನೂ ಕರೆದು ಫ್ಲೆಕ್ಸ್ ತೆಗೆಯಲು ಹೇಳಿದ್ದೆ. ಕಾರ್ಯಕ್ರಮಕ್ಕೂ ಹೋಗಿಲ್ಲ’ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ತಿಳಿಸಿದರು. ‘ಸ್ವಂತ ಹಿತಕ್ಕೆ ಸಮಾಜದ ಹಿತ ಬಲಿಕೊಡುವುದು ಬಹಳ ದೊಡ್ಡ ಅಪರಾಧ. ರಾಜಕೀಯದಲ್ಲಿ ಧರ್ಮ ಧರ್ಮದಲ್ಲಿ ರಾಜಕೀಯ ಬೆರೆಸುವುದು ಬೇಡ. ನಮ್ಮ ಸಮಾಜದಲ್ಲಿ ಯಾರು ಬೇಕಾದರೂ ಕೈ ಆಡಿಸಬಹುದು ಎಂಬ ಧೋರಣೆ ಬೆಳೆದರೆ ಸಮಾಜ ದುರ್ಬಲ ಆಗಲಿದೆ. ಅವರು ಇವರು ಸರಿ ಆಗುವುದಕ್ಕೂ ಮುನ್ನ ನಾವು (ಸಮಾಜದವರು) ಸರಿ ಆಗಬೇಕು’ ಎಂದು ಕಿವಿಮಾತು ಹೇಳಿದರು.
ಸಭೆಯಲ್ಲಿ ಗಲಾಟೆ ಮಾಡಲು ಫೋನ್ ಬಂತಾ?.. ಸಭೆಯಲ್ಲಿ ಕೆಲವರು ಈಶ್ವರಪ್ಪನವರು ವೀರಶೈವ–ಲಿಂಗಾಯತರ ವಿರುದ್ಧ ಹಾಗೆ ಹೇಳಿಕೆಯೇ ನೀಡಿಲ್ಲ ಎಂದು ಏರು ಧ್ವನಿಯಲ್ಲಿ ಹೇಳಿದರು. ಇದು ಕೆಲ ಕಾಲ ಗೊಂದಲಕ್ಕೆ ಕಾರಣವಾಯಿತು. ಆಗ ಮೊಬೈಲ್ ಫೋನ್‌ನಲ್ಲಿ ಈಶ್ವರಪ್ಪ ಅವರ ಭಾಷಣವನ್ನು ಮಾಜಿ ಸಂಸದ ಆಯನೂರು ಮಂಜುನಾಥ್ ಬಿತ್ತರಿಸಿದರು. ವೀರಶೈವ ಲಿಂಗಾಯತರು ಏನು ಎಂಬುದು ಕೊನೆಗೂ ತೋರಿಸಿಕೊಟ್ಟಿರಿ. ಸಭೆಯಲ್ಲಿ ಗಲಾಟೆ ಮಾಡುವಂತೆ ನಿಮಗೆ ಫೋನ್ ಬಂತಾ? ಎಂದು ಆಕ್ರೋಶ ವ್ಯಕ್ತಪಡಿಸಿದರು. ‘ಚುನಾವಣೆ ಬಂದಾಗ ಮಾತ್ರ ನಮ್ಮ ನಮ್ಮ ರಾಜಕೀಯ ಪಕ್ಷಗಳು ನಮಗೆ ಶ್ರೇಷ್ಠ. ಇಂತಹ ಪ್ರತ್ಯಕ್ಷ ಅಪ್ರತ್ಯಕ್ಷ ದಾಳಿಗಳು ಸಮಾಜದ ಮೇಲೆ ನಡೆದಾಗ ಪಕ್ಷ ರಾಜಕಾರಣ ಬಿಟ್ಟು ವಿರೋಧಿಸಬೇಕು’ ಎಂದು ಹೇಳಿದರು. ‘ಜನಗಣತಿಯಲ್ಲಿ ವೀರಶೈವ-ಲಿಂಗಾಯತರು ಹಿಂದೂಗಳೋ ಅಲ್ಲವೋ ಎಂದು ಬರೆಸುವಂತೆ ಹೇಳಲು ಈಶ್ವರಪ್ಪ ಯಾರು? ಮೊದಲು ಅವರ ಸಮಾಜದ ಒಳಪಂಗಡ ಒಡಕುಗಳನ್ನು ಸರಿಪಡಿಸಿಕೊಳ್ಳಲಿ. ಮಗನ ರಾಜಕೀಯ ಭವಿಷ್ಯಕ್ಕಾಗಿ ಬೇರೆ ಜಾತಿಯೊಳಗೆ ಕೈ ಆಡಿಸುವುದು ಬಿಡಲಿ. ಯಡಿಯೂರಪ್ಪ ಸಿಎಂ ಆಗಿದ್ದಾಗ ಲಿಂಗಾಯತರ ಆಳ್ವಿಕೆ ವಿರೋಧಿಸಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಟ್ಟಿ ಹಿಂದುಳಿದವರನ್ನು ಎತ್ತಿ ಕಟ್ಟಿದ್ದು ಏಕೆ?’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.