ADVERTISEMENT

ಸ್ವಗ್ರಾಮಗಳಿಗೆ ತೆರಳಲು ತುದಿಗಾಲಲ್ಲಿ ನಿಂತ ಕಾರ್ಮಿಕರು

ಬಂಗಾರಪೇಟೆ: 100ಕ್ಕೂ ಹೆಚ್ಚು ವಲಸೆ ಕಾರ್ಮಿಕರ ಹೆಸರು ನೋಂದಣಿ

​ಪ್ರಜಾವಾಣಿ ವಾರ್ತೆ
Published 3 ಮೇ 2020, 15:37 IST
Last Updated 3 ಮೇ 2020, 15:37 IST
ಬಂಗಾರಪೇಟೆ ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಬಿ.ಕೆ.ಚಂದ್ರಮೌಳೇಶ್ವರ ಅವರು ಸೇವಾ ಸಿಂಧು ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿದವರಿಗೆ ಸ್ವೀಕೃತಿ ಪತ್ರ ನೀಡಿದರು 
ಬಂಗಾರಪೇಟೆ ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ಬಿ.ಕೆ.ಚಂದ್ರಮೌಳೇಶ್ವರ ಅವರು ಸೇವಾ ಸಿಂಧು ಪೋರ್ಟಲ್‌ನಲ್ಲಿ ಹೆಸರು ನೋಂದಾಯಿಸಿದವರಿಗೆ ಸ್ವೀಕೃತಿ ಪತ್ರ ನೀಡಿದರು    

ಬಂಗಾರಪೇಟೆ: ತಾಲ್ಲೂಕಿನಲ್ಲಿದ್ದ 100ಕ್ಕೂ ಹೆಚ್ಚು ವಲಸೆ ಕಾರ್ಮಿಕರು ಸ್ವಗ್ರಾಮಗಳಿಗೆ ತೆರಳಲು ಭಾನುವಾರ ತಾಲ್ಲೂಕು ಕಚೇರಿಯಲ್ಲಿ ಹೆಸರು ನೋಂದಾಯಿಸಿದ್ದಾರೆ.

ಪಟ್ಟಣ ಸೇರಿದಂತೆ ತಾಲ್ಲೂಕು ವ್ಯಾಪ್ತಿಯಲ್ಲಿ ಗುತ್ತಿಗೆಯಡಿ, ಅಥವಾ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಬಿಹಾರ, ಪಶ್ಚಿಮಬಂಗಾಳ, ಉತ್ತರಪ್ರದೇಶ ಹಾಗೂ ಒಡಿಶಾ ಮೂಲದ ವಲಸೆ ಕಾರ್ಮಿಕರು ಹೆಸರನ್ನು ನೋಂದಾಯಿಸಿದ್ದಾರೆ. ಜತೆಗೆ ಇಲ್ಲೇ ಕ್ವಾರಂಟೇನ್‌ಗೆ ಒಳಗಾಗಿ 28 ದಿನ ಪೂರೈಸಿದ ಮುಂಬೈ ನಾಗರಿಕರೂ ಹೆಸರು ನೋಂದಾಯಿಸಿದ್ದಾರೆ.

ವಲಸೆ ಕಾರ್ಮಿಕರನ್ನು ಉಚಿತವಾಗಿ ಅವರ ಗ್ರಾಮಗಳಿಗೆ ತಲುಪಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ಇನ್ನೂ ಮೂರು ದಿನ ನೋಂದಣಿ ಪ್ರಕ್ರಿಯೆ ಮುಂದುವರಿಯಲಿದೆ ಎಂದು ತಹಶೀಲ್ದಾರ್ ಬಿ.ಕೆ.ಚಂದ್ರಮೌಳೇಶ್ವರ ತಿಳಿಸಿದ್ದಾರೆ.

ADVERTISEMENT

ಸ್ವಗ್ರಾಮಗಳಿಗೆ ಮರಳಲು ಆಸಕ್ತಿ ಇರುವವರು ಖುದ್ದು ತಾಲ್ಲೂಕು ಕಚೇರಿಗೆ ಬಂದು ಆಧಾರ್‌ ಸಂಖ್ಯೆ ಸೇರಿದಂತೆ ಕೆಲ ವಿವರ ನೀಡಿ ನೋಂದಾಯಿಸಬೇಕು. ನೋಂದಣಿ ಪಟ್ಟಿಯನ್ನು ಜಿಲ್ಲಾಧಿಕಾರಿಗೆ ಕಳುಹಿಸಿ, ಅವರ ಸೂಚನೆಯಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅವಶ್ಯಕತೆಗೆ ಅನುಗುಣವಾಗಿ ಸರ್ಕಾರಿ ಬಸ್‌ಗಳ ಮೂಲಕ ವಲಸೆ ಕಾರ್ಮಿಕರನ್ನು ಬೆಂಗಳೂರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲಿಂದ ರೈಲಿನ ಮೂಲಕ ಅವರವರ ಗ್ರಾಮಗಳಿಗೆ ತೆರಳುವ ವ್ಯವಸ್ಥೆಯಾಗಲಿದೆ.

ರೈಲು ಬೆಂಗಳೂರು ಮೆಜೆಸ್ಟಿಕ್‌ನಿಂದ ನೇರವಾಗಿ ಹೊರ ರಾಜ್ಯಗಳಿಗೆ ತೆರಳಲಿದೆ. ಬಂಗಾರಪೇಟೆ ಜಂಕ್ಷನ್ ಮೂಲಕ ಹಾದು ಹೋದರೂ ನಿಲುಗಡೆ ವ್ಯವಸ್ಥೆ ಇರುವುದಿಲ್ಲ. ಎಲ್ಲ ಅಂತರರಾಜ್ಯ ವಲಸೆ ಕಾರ್ಮಿಕರು ಬೆಂಗಳೂರಿನಿಂದಲೇ ಪ್ರಯಾಣ ಆರಂಭಿಸಬೇಕಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

ಕಂದಾಯ ಇನ್‌ಸ್ಪೆಕ್ಟರ್ ಗೋಪಾಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.