
ತಿಪಟೂರಿನಲ್ಲಿ ನಡೆದ ಪ್ರತಿಭಾ ಪುರಸ್ಕಾರದಲ್ಲಿ ದಾನಿಗಳನ್ನು ಸತ್ಕರಿಸಲಾಯಿತು.
ತಿಪಟೂರು: ಜಾತಿಗಣತಿಯಲ್ಲಿ ಸಾರ್ವಜನಿಕರು ವಸ್ತುನಿಷ್ಠ ವರದಿ ನೀಡಿದಾಗ ಮಾತ್ರ ಸರ್ಕಾರದ ನೈಜ ಸವಲತ್ತುಗಳನ್ನು ಪಡೆಯಲು ಸಾಧ್ಯ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮಿಜಿ ಹೇಳಿದರು.
ನಗರದ ಒಕ್ಕಲಿಗರ ಸಂಘದಿಂದ ಮಂಗಳವಾರ ನಡೆದ ಪ್ರತಿಭಾ ಪುರಸ್ಕಾರ, ದಾನಿಗಳಿಗೆ ಅಭಿನಂದನೆ ಹಾಗೂ ಜಾತಿಗಣತಿ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮೀಕ್ಷೆಯ ಉಪಯೋಗ ಪಡೆದುಕೊಳ್ಳಬೇಕಾದರೆ ವಸ್ತುನಿಷ್ಠ ಹಾಗೂ ನಿಖರವಾಗಿ 60 ಅಂಶಗಳ ವರದಿ ಅಲಿಸಿ, ಗಲಿಬಿಲಿಗೆ ಒಳಗಾಗದೆ ಸರಿಯಾದ ಮಾಹಿತಿ ನೀಡಿ ಎಂದು ತಿಳಿಸಿದರು.
ದೇಶವನ್ನು ಬದಲಾಯಿಸುವ ಶಕ್ತಿ ಯುವಶಕ್ತಿಗೆ ಇರುವುದರಿಂದ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಕಂಡು ಹೆದರುತ್ತಿದ್ದಾರೆ. ಯುವಜನರು ಉತ್ತಮ ವಿದ್ಯಾಭ್ಯಾಸ ಮಾಡಿ ಕೆಳಸ್ತರದಲ್ಲಿರುವ ಕುಟುಂಬಗಳನ್ನು ಮೇಲೆತ್ತಬೇಕು. ಸಮುದಾಯದ ಪ್ರಜ್ಞೆ, ದೇಶ ಕಟ್ಟುವ ಕಾಯಕ, ಮನೆ, ಕತ್ತಲನ್ನು ಹೋಗಲಾಡಿಸಬೇಕು ಎಂದು ಹೇಳಿದರು.
ಶಾಸಕ ಕೆ.ಷಡಕ್ಷರಿ ಮಾತನಾಡಿ, ಕ್ಷೇತ್ರದಲ್ಲಿ ಆರೋಗ್ಯ ಹಾಗೂ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ. ಆದಿಚುಂಚನಗಿರಿ ಸ್ವಾಮೀಜಿ ಕೆರೆಗಳಿಗೆ ನೀರು ತುಂಬಿಸುವುದು, ಆಸ್ವತ್ರೆ, ರಸ್ತೆಗಳನ್ನು ಸರಿಯಾಗಿ ನಿರ್ವಹಣೆ ಮಾಡುವಂತೆ ಆದೇಶ ನೀಡಿದ್ದರು. ಅದರಂತೆ ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎಂದರು.
‘ಮಠ ಮಾನ್ಯಗಳು ಶೈಕ್ಷಣಿಕ ಕ್ಷೇತ್ರಕ್ಕೆ ಪದಾರ್ಪಣೆ ಮಾಡದಿದ್ದರೆ ನಾವು ಜ್ಞಾನವಂತರಾಗಲು ಸಾಧ್ಯವಾಗುತ್ತಿರಲಿಲ್ಲ’ ಎಂದರು.
ವಿದ್ಯಾನಿಧಿ ಯೋಜನೆಯಡಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಸ್ನಾತಕ ಪದವಿಯ ಪ್ರತಿಭಾವಂತ 30 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ 30 ದಾನಿಗಳನ್ನು ಸತ್ಕರಿಸಲಾಯಿತು.
ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮಿಜಿ, ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ದಸರಿಘಟ್ಟದ ಚಂದ್ರಶೇಖರನಾಥ ಸ್ವಾಮೀಜಿ, ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಚಿದಾನಂದ್ ಎನ್., ನಗರಸಭೆ ಅಧ್ಯಕ್ಷ ಯಮುನಾ ಧರಣೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ತಾರಾಮಣಿ, ಡಾ. ಜಿ.ಬಿ.ವಿವೇಚನ, ಕೆ.ಟಿ.ಶಾಂತಕುಮಾರ್, ನಾಗರಾಜು, ದೇವಾನಂದ್, ಚಂದ್ರಶೇಖರ್, ಸ್ವಾಮಿ.ಎಸ್.ಆರ್, ಪ್ರಸನ್ನಕುಮಾರ್, ಬಸವರಾಜ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.