ADVERTISEMENT

ಚಿಕ್ಕನಾಯಕನಹಳ್ಳಿ: ನಿರ್ವಹಣೆ ಇಲ್ಲದೆ ನಿಸ್ತೇಜಗೊಂಡ ಪೊಲೀಸ್ ಸಮುದಾಯ ಭವನ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 5:39 IST
Last Updated 9 ಫೆಬ್ರುವರಿ 2026, 5:39 IST
ಚಿಕ್ಕನಾಯಕನಹಳ್ಳಿ ಪಟ್ಟಣದ ನಾಗರೀಕ ಮತ್ತು ಪೊಲೀಸ್ ಸಮುದಾಯ ಭವನ
ಚಿಕ್ಕನಾಯಕನಹಳ್ಳಿ ಪಟ್ಟಣದ ನಾಗರೀಕ ಮತ್ತು ಪೊಲೀಸ್ ಸಮುದಾಯ ಭವನ   

ಚಿಕ್ಕನಾಯಕನಹಳ್ಳಿ: ಪಟ್ಟಣದ ಪೊಲೀಸ್ ವಸತಿ ಗೃಹದ ಆವರಣದಲ್ಲಿರುವ ಸಾರ್ವಜನಿಕ ಹಾಗೂ ಪೊಲೀಸ್ ಸಮುದಾಯ ಭವನ ಸೂಕ್ತ ನಿರ್ವಹಣೆ ಇಲ್ಲದೆ ನಿಸ್ತೇಜಗೊಂಡಿದೆ.

ಒಂದು ಕಾಲದಲ್ಲಿ ಪಟ್ಟಣದ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಕೇಂದ್ರಬಿಂದುವಾಗಿತ್ತು. ಆದರೆ ಇಂದು ಅದೇ ಭವನವು ಸೂಕ್ತ ನಿರ್ವಹಣೆ ಇಲ್ಲದೆ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವುದು ವಿಷಾದನೀಯ.

ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಕೇವಲ ಕಾಲ್ನಡಿಗೆ ದೂರದಲ್ಲಿರುವ ಈ ಭವನ ದೂರದ ಊರುಗಳಿಂದ ಬರುವ ಅತಿಥಿಗಳಿಗೆ ಸುಲಭವಾಗಿ ತಲುಪಬಹುದಾದ ಸ್ಥಳವಾಗಿದೆ.

ADVERTISEMENT

ವಿಶಾಲವಾದ ಜಾಗ, ಸುಸಜ್ಜಿತ ಸಭಾಂಗಣ ಮತ್ತು ಎಲ್ಲ ರೀತಿಯ ಸೌಕರ್ಯಗಳನ್ನು ಹೊಂದಿದ್ದ ಈ ಭವನ ಪಟ್ಟಣದ ಸಾಮಾನ್ಯ ಜನರಿಗೆ ಕಡಿಮೆ ದರದಲ್ಲಿ ಲಭ್ಯವಿದ್ದ ಅತ್ಯುತ್ತಮ ಕಲ್ಯಾಣ ಮಂಟಪಗಳಲ್ಲಿ ಒಂದಾಗಿತ್ತು.

ಶುಭ ಸಮಾರಂಭಗಳ ಸಂಭ್ರಮಕ್ಕೆ ಸಾಕ್ಷಿಯಾಗುತ್ತಿದ್ದ ಈ ಕಟ್ಟಡವು ಇಂದು ಸ್ತಬ್ಧವಾಗಿದೆ. ದಿನಗಳು ಕಳೆದಂತೆ ಸುಣ್ಣ-ಬಣ್ಣ ಮಾಸಿ, ಆವರಣದಲ್ಲಿ ಗಿಡಗಂಟಿ ಬೆಳೆದು ಹಳೆಯ ಹೊಳಪನ್ನು ಕಳೆದುಕೊಂಡಿದೆ. ನಿರ್ವಹಣೆಯಿಲ್ಲದ ಕಾರಣ ಸಾರ್ವಜನಿಕರು ಈ ಭವನದತ್ತ ಮುಖ ಮಾಡಲು ಹಿಂಜರಿಯುತ್ತಿದ್ದಾರೆ. 

ಖಾಸಗಿ ಕಲ್ಯಾಣ ಮಂಟಪಗಳ ದುಬಾರಿ ವೆಚ್ಚವನ್ನು ಭರಿಸಲಾಗದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಈ ಪೊಲೀಸ್ ಭವನವು ವರದಾನವಾಗಿತ್ತು. ಇದನ್ನು ಪುನಃ ದುರಸ್ತಿಗೊಳಿಸಿ, ಸ್ವಚ್ಛತೆ ಕಾಪಾಡಿ, ಅಗತ್ಯವಿರುವ ತಾಂತ್ರಿಕ ಸೌಲಭ್ಯ ಅಳವಡಿಸಿದರೆ ಮತ್ತೆ ಜನಸ್ನೇಹಿಯಾಗಬಲ್ಲದು ಎಂಬುದು ಸ್ಥಳೀಯರು ಅಭಿಪ್ರಾಯ.

ಪೊಲೀಸ್ ಭವನ ಕೇವಲ ಒಂದು ಕಟ್ಟಡವಲ್ಲ. ಅದು ಹತ್ತಾರು ಕುಟುಂಬಗಳ ಸಂಭ್ರಮಕ್ಕೆ ಆಸರೆಯಾಗಿದ್ದ ವೇದಿಕೆ. ಸಂಬಂಧಪಟ್ಟ ಪೊಲೀಸ್ ಇಲಾಖೆ ಉನ್ನತ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸಬೇಕಿದೆ. ಅಗತ್ಯ ಅನುದಾನ ಬಿಡುಗಡೆ ಮಾಡಿ ಸುಸ್ಥಿತಿಗೆ ತಂದರೆ ಸಾರ್ವಜನಿಕರಿಗೆ ಪ್ರಯೋಜನಕಾರಿ ಎನ್ನುತ್ತಾರೆ ಪಟ್ಟಣದ ನಾಗರೀಕರು.

ಸಣ್ಣಪುಟ್ಟ ಶುಭ ಸಮಾರಂಭಗಳಿಗೂ ದುಬಾರಿ ವೆಚ್ಚದ ಖಾಸಗಿ ಕಲ್ಯಾಣ ಮಂಟಪ ಅವಲಂಬಿಸುವ ಅನಿವಾರ್ಯತೆ ಎದುರಾಗಿದೆ. ಪಟ್ಟಣದ ಈ ಸಮುದಾಯ ಭವನ ಸುರಕ್ಷಿತ ಹಾಗೂ ಆಹ್ಲಾದಕರ ವಾತಾವರಣದಲ್ಲಿದೆ. ಇದನ್ನು ಪುನಶ್ಚೇತನಗೊಳಿಸಿ, ಬಡವರಿಗೂ ಕೈಗೆಟುಕುವ ದರದಲ್ಲಿ ಬಾಡಿಗೆ ನೀಡಿದಲ್ಲಿ ಅನುಕೂಲ ಚಿತ್ರಕಲೆ ಹಾಗೂ ರಂಗಭೂಮಿ ಕಲಾವಿದ ಗಂಗಾಧರ್ ಮಗ್ಗದಮನೆ ಹೆಳಿದರು.

ಪಟ್ಟಣದ ಹೃದಯಭಾಗದಲ್ಲಿರುವ ಭವನ ಸಾರ್ವಜನಿಕ ಸಮಾರಂಭಗಳಿಗೆ ಸೂಕ್ತವಾಗಿದೆ. ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇದೆ. ಸಂಬಂಧಪಟ್ಟವರು ಕಟ್ಟಡದ ವ್ಯವಸ್ಥಿತ ನಿರ್ವಹಣೆಗಾಗಿ ಪ್ರತ್ಯೇಕ ಸಿಬ್ಬಂದಿ ನೇಮಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು ಮಾತಾ ಗಾರ್ಮೆಂಟ್ಸ್‌ನ ಯೋಗೀಶ್ ಹೇಳಿದರು.

ಭವನದ ವಿಶಾಲವಾದ ನೋಟ.
ಭವನವು ಗಿಡ ಗೆಂಟೆಗಳಿಂದ ಆವೃತವಾಗಿರುವುದು.
ಭವನದ ಒಳಗಿನ ವಿಶಾಲವಾದ ಆವರಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.