ADVERTISEMENT

ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆಗೆ ಬೆಂಬಲ; ಎಲ್ಲವೂ ಇಂದು ಸ್ತಬ್ಧ

ಜನತಾ ಕರ್ಫ್ಯೂ ಇಂದು

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2020, 14:11 IST
Last Updated 21 ಮಾರ್ಚ್ 2020, 14:11 IST
ಸದಾ ಜನನಿಬಿಡ ಜಿಲ್ಲಾಧಿಕಾರಿ ಕಚೇರಿ ಎದುರು ಹಾಗೂ ಆಸುಪಾಸಿನ ರಸ್ತೆಗಳು ಜನರಿಲ್ಲದೆ ಭಣಗುಡುತ್ತಿವೆ
ಸದಾ ಜನನಿಬಿಡ ಜಿಲ್ಲಾಧಿಕಾರಿ ಕಚೇರಿ ಎದುರು ಹಾಗೂ ಆಸುಪಾಸಿನ ರಸ್ತೆಗಳು ಜನರಿಲ್ಲದೆ ಭಣಗುಡುತ್ತಿವೆ   

ತುಮಕೂರು: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ದೇಶದಾದ್ಯಂತ ಕರೆ ನೀಡಿರುವ ಜನತಾ ಕರ್ಫ್ಯೂಗೆ ಜಿಲ್ಲೆಯಲ್ಲಿ ವಿವಿಧ ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ. ಪ್ರಧಾನಿ ಕರೆಗೆ ಹೆಚ್ಚು ಸ್ಪಂದನೆ ದೊರೆಯುವುದು ನಿಚ್ಚಳವಾಗಿದೆ.

ಬೆಳಿಗ್ಗೆ 7ರಿಂದ ರಾತ್ರಿ 9ರ ವರೆಗೆ ಜಿಲ್ಲೆಯ ವಾಣಿಜ್ಯ ವಹಿವಾಟು, ಜನಸಂಚಾರ, ಸಾರಿಗೆ ಸಂಪೂರ್ಣ ಸ್ಥಗಿತಗೊಳ್ಳಲಿದೆ. ಜಿಲ್ಲೆಯಲ್ಲಿ 600 ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಬಂದ್ ಆಗಲಿದೆ. ನಗರ ಸಾರಿಗೆ ಬಸ್‌ಗಳೂ ರಸ್ತೆಗೆ ಇಳಿಯುವುದಿಲ್ಲ. ಜಿಲ್ಲೆಯಿಂದ ಹೊರರಾಜ್ಯಗಳಿಗೂ ಬಸ್‌ಗಳು ತೆರಳುವುದಿಲ್ಲ. ಒಂದು ದಿನ ಬಸ್‌ಗಳು ಸಂಚಾರ ಸ್ಥಗಿತಗೊಳ್ಳುವುದರಿಂದ ₹ 62 ಲಕ್ಷ ನಷ್ಟವಾಗಲಿದೆ ಎನ್ನುತ್ತವೆ ಸಾರಿಗೆ ಸಂಸ್ಥೆ ಮೂಲಗಳು.

ಬಸ್ ಸಂಚಾರ ಸ್ಥಗಿತಗೊಂಡರೆ ಸಹಜವಾಗಿ ಜನರ ಓಡಾಟವೂ ತಗ್ಗಲಿದೆ. ಆಟೊಗಳ ಸಂಚಾರವೂ ಬಹುತೇಕ ಸ್ಥಗಿತಗೊಳ್ಳಲಿದೆ. ಆಸ್ಪತ್ರೆ, ಔಷಧಿ ಅಂಗಡಿ, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಅಂಗಡಿ, ಹೋಟೆಲ್, ಮತ್ತಿತರ ವಾಣಿಜ್ಯ ಚಟುವಟಿಕೆಗಳನ್ನು ಕಡ್ಡಾಯವಾಗಿ ಸ್ಥಗಿತಗೊಳಿಸಬೇಕು ಎಂದು ಜಿಲ್ಲಾಡಳಿತ ನಿರ್ದೇಶನ ನೀಡಿದೆ. ಮಹಾನಗರಪಾಲಿಕೆ ವ್ಯಾಪ್ತಿಯ ಎಲ್ಲ ಉದ್ದಿಮೆಗಳನ್ನು ಕಡ್ಡಾಯವಾಗಿ ಬಂದ್ ಮಾಡಬೇಕು ಎಂದು ಪಾಲಿಕೆ ಆಯುಕ್ತ ಟಿ.ಭೂಬಾಲನ್ ಸೂಚಿಸಿದ್ದಾರೆ.

ADVERTISEMENT

ಮದ್ಯ ಮಾರಾಟಗಾರರ ಸಂಘವು ಸಹ ಬಂದ್ ಬೆಂಬಲಿಸಿದೆ. ಇಡೀ ದಿನ ಮದ್ಯದ ಅಂಗಡಿಗಳು ‘ಸ್ವಯಂ ಘೋಷಿತ ಬಂದ್’ ಆಗಲಿವೆ. ಬೆಳಗಿನ ಸಮಯದಲ್ಲಿ ಮಾತ್ರ ಹಾಲು, ತರಕಾರಿ ಸಿಗಬಹುದು. ಅಂತರಸಂತನಹಳ್ಳಿ ಮಾರುಕಟ್ಟೆ ಸೇರಿದಂತೆ ಪ್ರಮುಖ ವಹಿವಾಟು ಕೇಂದ್ರಗಳು ಬಾಗಿಲು ಮುಚ್ಚಲಿವೆ.

ಕೊರೊನಾ ಸೋಂಕಿನ ಭಯದಿಂದ ಈಗಾಗಲೇ ಬಹುತೇಕರು ಅಗತ್ಯ ಕೆಲಸಗಳಿಗೆ ಮಾತ್ರ ಮನೆಯಿಂದ ಹೊರಬರುತ್ತಿದ್ದಾರೆ. ಭಾನುವಾರ ರಜಾ ದಿನವಾದ ಕಾರಣ ಹೆಚ್ಚಿನ ಸಂಖ್ಯೆಯ ಜನರು ಜನತಾ ಕರ್ಫ್ಯೂ ಬೆಂಬಲಿಸುವ ಸಾಧ್ಯತೆ ಇದೆ. ಸಭೆ, ಸಮಾರಂಭಗಳನ್ನು ನಡೆಸದಂತೆ ಜಿಲ್ಲಾಡಳಿತ ನಿರ್ಬಂಧಿಸಿ ನಿಷೇಧಾಜ್ಞೆ ಜಾರಿಗೊಳಿಸಿದೆ.

ನಗರದಲ್ಲಿ ಶನಿವಾರ ಸಂಜೆಯಿಂದಲೇ ಬಂದ್‌ ವಾತಾವರಣ ಇತ್ತು. ಬಹುತೇಕ ಅಂಗಡಿಗಳು, ವಾಣಿಜ್ಯ ಮಳಿಗೆಗಳು, ರಸ್ತೆ ಬದಿ ವ್ಯಾಪಾರಿಗಳು ಅಂಗಡಿಗಳನ್ನು ಬಂದ್‌ ಮಾಡಿದ್ದರು. ವಾಹನ ಸಂಚಾರ, ಜನದಟ್ಟಣೆ ಕಡಿಮೆ ಇತ್ತು. ಸರ್ಕಾರಿ ಕಚೇರಿ ಆವರಣಗಳಲ್ಲಿ ಜನರು ಇರಲಿಲ್ಲ.

ತುರ್ತು ಸಂದರ್ಭ; ಬಸ್ ಸಂಚಾರ

ಬಸ್ ಸಂಚಾರ ಪೂರ್ಣವಾಗಿ ಬಂದ್ ಆಗಲಿದೆ. ತುರ್ತು ಸಂದರ್ಭಕ್ಕಾಗಿ ಪ್ರತಿ ತಾಲ್ಲೂಕು ಕೇಂದ್ರಗಳಲ್ಲಿ ತಲಾ ನಾಲ್ಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಎಂಟರಿಂದ ಒಂಬತ್ತು ಬಸ್‌ಗಳನ್ನು ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದರು ತುಮಕೂರು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರ ಕುಮಾರ್.

ಒಂದೇ ಮಾರ್ಗದಲ್ಲಿ ಸಂಚರಿಸುವ 40ರಿಂದ 50 ಮಂದಿ ಇದ್ದರೆ ಹೀಗೆ ಸಂದರ್ಭಕ್ಕೆ ಅನುಸಾರವಾಗಿ ಈ ತುರ್ತು ಸಂಚಾರ ಒದಗಿಸಲಾಗುವುದು ಎಂದರು.

ಈಗಾಗಲೇ ಸಿಬ್ಬಂದಿಗೆ ಮಾಸ್ಕ್‌ಗಳನ್ನು ನೀಡಲಾಗಿದೆ. ಮತ್ತಷ್ಟು ಸಿಬ್ಬಂದಿಗೆ ಮಾಸ್ಕ್ ನೀಡಲಾಗುವುದು. ಸೋಂಕು ತಡೆಗೆ ನಮ್ಮ ಇಲಾಖೆಯಿಂದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

19 ಕೊರೊನಾ ಸೈನಿಕರ ನೋಂದಣಿ

ತುಮಕೂರಿನಲ್ಲಿ 19 ಮಂದಿ ಸ್ವಯಂ ಸೇವಕರು ಕೊರೊನಾ ಸೈನಿಕರಾಗಲು ಹೆಸರು ನೋಂದಾಯಿಸಿಕೊಂಡಿದ್ದಾರೆ.

ಸೋಂಕು ಕುರಿತು ವಿವಿಧ ಮಾಧ್ಯಮ, ಸಾಮಾಜಿಕ ಮಾಧ್ಯಮ, ಜಾಲತಾಣಗಳಲ್ಲಿನ ವದಂತಿಗಳ ಬಗ್ಗೆ ಪರಿಶೀಲಿಸಿ ವಾಸ್ತವ ಹಾಗೂ ಸ್ಥಳೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡುವುದು ಇವರ ಕೆಲಸವಾಗಿದೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಚೇರಿಯಲ್ಲಿ ಇವರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡಿ. ಸ್ವಯಂಸೇವಕರಿಗೆ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.