ADVERTISEMENT

ತುಮಕೂರು | ಪ್ರತ್ಯೇಕ ಪ್ರಕರಣ: ಅರ್ಧ ಕೋಟಿ ವಂಚನೆ

ಹೆಚ್ಚಿದ ಸೈಬರ್‌ ಪ್ರಕರಣ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 5:22 IST
Last Updated 24 ನವೆಂಬರ್ 2025, 5:22 IST
ಸೈಬರ್ ಅಪರಾಧ
ಸೈಬರ್ ಅಪರಾಧ   

ತುಮಕೂರು: ಸೈಬರ್‌ ಆರೋಪಿಗಳು ನಗರದ ಇಬ್ಬರಿಗೆ ₹64,18,911 ವಂಚಿಸಿದ್ದು, ಸೈಬರ್‌ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ರಿಯಾಯಿತಿ ದರದಲ್ಲಿ ಷೇರು ಕೊಡಿಸುವುದಾಗಿ ನಂಬಿಸಿ ನಗರದ ಎಸ್‌.ಎಸ್‌.ಪುರಂನ ಪಿ.ಎನ್‌.ವಿನಯ್‌ಕುಮಾರ್‌ ಎಂಬುವರಿಗೆ ₹43.99 ಲಕ್ಷ ವಂಚಿಸಲಾಗಿದೆ. ವಾಟ್ಸ್‌ ಆ್ಯಪ್‌ ಮುಖಾಂತರ ಮೆಸೇಜ್‌ ಮಾಡಿ ‘NOMOR’ ಟ್ರೇಡಿಂಗ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಲು ತಿಳಿಸಿದ್ದಾರೆ. ವಿನಯ್‌ ಅದರಂತೆ ಮಾಡಿದ್ದಾರೆ.

ಆರೋಪಿಗಳು ಸದರಿ ಆ್ಯಪ್‌ನಲ್ಲಿ ಹೂಡಿಕೆ ಮಾಡಬೇಕಾದ ಖಾತೆ ವಿವರ ನೀಡುತ್ತಿದ್ದರು. ವಿನಯ್‌ ವಿವಿಧ ಬ್ಯಾಂಕ್‌ ಖಾತೆಗಳಿಗೆ ಹಂತಹಂತವಾಗಿ ಒಟ್ಟು ₹43.99 ಲಕ್ಷ ವರ್ಗಾಯಿಸಿದ್ದಾರೆ. ಹಣ ವಾಪಸ್‌ ಕೇಳಿದಾಗ ಇನ್ನೂ ₹53 ಲಕ್ಷ ಕಟ್ಟಿದರೆ ಮಾತ್ರ ಪೂರ್ತಿ ಹಣ ನೀಡಲಾಗುವುದು ಎಂದಿದ್ದಾರೆ. ವಂಚನೆ ಒಳಗಾದ ವಿಷಯ ಅರಿವಿಗೆ ಬಂದ ನಂತರ ಠಾಣೆಗೆ ದೂರು ನೀಡಿದ್ದಾರೆ.

ADVERTISEMENT

ಟಾಸ್ಕ್‌ ಹೆಸರಲ್ಲಿ ₹20 ಲಕ್ಷ ವಂಚನೆ: ಮನೆಯಲ್ಲಿ ಕುಳಿತುಕೊಂಡು ಆನ್‌ಲೈನ್‌ನಲ್ಲಿ ಕೆಲಸ ಮಾಡುತ್ತಾ ದಿನಕ್ಕೆ ₹5 ಸಾವಿರದಿಂದ ₹6 ಸಾವಿರ ಗಳಿಸಬಹುದು ಎಂಬ ಆಮಿಷಕ್ಕೆ ಒಳಗಾಗಿ ನಗರದ ಮಾರುತಿ ನಗರದ ಎಸ್‌.ರೇವಂತ್‌ ₹20 ಲಕ್ಷ ಕಳೆದುಕೊಂಡಿದ್ದಾರೆ.

‘ವಾಟ್ಸ್‌ ಆ್ಯಪ್‌ ಮೂಲಕ ಪರಿಚಯಿಸಿಕೊಂಡ ಆರೋಪಿಗಳು ಆನ್‌ಲೈನ್‌ ಕೆಲಸದ ಬಗ್ಗೆ ತಿಳಿಸಿದರು. ಒಂದು ಲಿಂಕ್‌ ಕಳುಹಿಸಿ ಟೆಲಿಗ್ರಾಮ್‌ ಗ್ರೂಪ್‌ಗೆ ಸೇರಲು ಹೇಳಿದರು. ಅದರಂತೆ ಮಾಡಿದ ನಂತರ ‘3045 GREEN SEED’ ಗ್ರೂಪ್‌ಗೆ ಸೇರಿಸಿ ಮತ್ತಷ್ಟು ಮಾಹಿತಿ ಹಂಚಿಕೊಂಡರು. ಪ್ರೊಫೈಲ್‌ ಅಪ್‌ಡೇಟ್‌ ಮಾಡಿದ ಬಳಿಕ ನನ್ನ ಖಾತೆಗೆ ₹1,200 ವರ್ಗಾವಣೆ ಮಾಡಿದರು’ ಎಂದು ರೇವಂತ್‌ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಮೊದಲಿಗೆ ಹೋಟೆಲ್‌ ರಿವ್ಯೂ ನೀಡುವಂತೆ ಹೇಳಿದರು. ನಂತರ ನಾವು ಹೇಳಿದಂತೆ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದರು. ಇದನ್ನು ನಂಬಿ ಹಂತ ಹಂತವಾಗಿ ಒಟ್ಟು ₹20,91,911 ವರ್ಗಾವಣೆ ಮಾಡಿದೆ. ವಿತ್‌ ಡ್ರಾ ಮಾಡಿಕೊಳ್ಳಲು ಕೇಳಿದಾಗ ‘ಇನ್ನೂ ₹6 ಲಕ್ಷ ವರ್ಗಾಯಿಸಿದರೆ ಮಾತ್ರ ಪೂರ್ತಿ ಹಣ ನೀಡಲಾಗುವುದು’ ಎಂದು ವಂಚಕರು ತಿಳಿಸಿದರು. ಸ್ನೇಹಿತರ ಬಳಿ ವಿಚಾರಿಸಿದಾಗ ಮೋಸ ಹೋದ ವಿಷಯ ಗೊತ್ತಾಯಿತು’ ಎಂದು ಹೇಳಿದ್ದಾರೆ.

‘ಮೋಸ ಮಾಡಿ ಹಣ ಪಡೆದು ವಂಚಿಸಿದವರನ್ನು ಪತ್ತೆ ಹಚ್ಚಿ, ಕಾನೂನು ಕ್ರಮ ಕೈಗೊಳ್ಳುವಂತೆ’ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.