ADVERTISEMENT

ರೈಲ್ವೆ ಮೇಲ್ಸೇತುವೆ ದುರಸ್ತಿಗೆ ಆಗ್ರಹ: ವಾಹನಗಳ ಸಂಚಾರ ತಡೆದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2024, 6:10 IST
Last Updated 20 ಜುಲೈ 2024, 6:10 IST
ಕುಣಿಗಲ್- ಮದ್ದೂರು ರಸ್ತೆ ರೈಲ್ವೆ ಮೇಲ್ಸೇತುವೆ ದುರಸ್ತಿಗೆ ಆಗ್ರಹಿಸಿದ ರೈತರ ಹಿತರಕ್ಷಣ ವೇದಿಕೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು
ಕುಣಿಗಲ್- ಮದ್ದೂರು ರಸ್ತೆ ರೈಲ್ವೆ ಮೇಲ್ಸೇತುವೆ ದುರಸ್ತಿಗೆ ಆಗ್ರಹಿಸಿದ ರೈತರ ಹಿತರಕ್ಷಣ ವೇದಿಕೆ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು   

ಕುಣಿಗಲ್: ಪಟ್ಟಣದ ಮದ್ದೂರು ರಸ್ತೆಯಲ್ಲಿರುವ ರೈಲ್ವೆ ಮೇಲ್ಸೇತುವೆ ಗುಂಡಿಗಳಿಂದ ಆವೃತ್ತವಾಗಿ ಮೂರು ವರ್ಷ ಕಳೆದಿದ್ದರೂ, ದುರಸ್ತಿಗೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದ ರೈತ ಹಿತರಕ್ಷಣ ವೇದಿಕೆ ಪದಾಧಿಕಾರಿಗಳು ಜನಪರ ಸಂಘಟನೆಗಳೊಂದಿಗೆ ಸೇರಿ ಮೇಲ್ಸೇತುವೆ ವಾಹನಗಳ ಸಂಚಾರ ತಡೆದು ಶುಕ್ರವಾರ ಪ್ರತಿಭಟನೆ ನಡೆಸಿದರು.

ವೇದಿಕೆ ಅಧ್ಯಕ್ಷ ಕರಿಗೌಡ ಮಾತನಾಡಿ, ರಾಜ್ಯ ಹೆದ್ದಾರಿ 33ರ ರೈಲ್ವೆ ಮೇಲ್ಸೇತುವೆ ಸಕಾಲದಲ್ಲಿ ಸೂಕ್ತ ನಿರ್ವಹಣೆ ಇಲ್ಲದೆ ಗುಂಡಿ ಬಿದ್ದಿವೆ. ರಸ್ತೆಗೆ ಹಾಕಲಾಗಿದ್ದ ಕಬ್ಬಿಣದ ಸರಳು ಕಿತ್ತು, ರಸ್ತೆ ಮೇಲ್ಭಾಗದಲ್ಲಿ ಬಂದಿರುವುದಿಂದ ಮೂರು ವರ್ಷಗಳಿಂದ ನೂರಾರು ಅಪಘಾತಗಳು ಸಂಭವಿಸುತ್ತಿವೆ ಎಂದು ದೂರಿದರು.

ಈ ಬಗ್ಗೆ ರೈಲ್ವೆ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ, ಪುರಸಭೆ ಅಧಿಕಾರಿಗಳನ್ನು ಸಂಪರ್ಕಿಸಿದರೆ ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಎನ್ನುತ್ತಾರೆ. ಟೋಲ್ ಸಂಗ್ರಹ ಮಾಡುತ್ತಿರುವ ಕೆಆರ್‌ಡಿಸಿಎಲ್‌ಗೆ ಮನವಿ ಮಾಡಲಾಗಿದೆ. ಶಾಸಕ, ಸಂಸದರಿಗೂ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗದ ಕಾರಣ ಪ್ರತಿಭಟನೆ ಅನಿವಾರ್ಯವಾಗಿದೆ ಎಂದರು.

ADVERTISEMENT

ಪ್ರತಿಭಟನೆ ಪ್ರಾರಂಭವಾಗುತ್ತಿದ್ದಂತೆ ರಾಜ್ಯ ಹೆದ್ದಾರಿ 33ರ ತುಮಕೂರು- ಮದ್ದೂರು ರಸ್ತೆಯಲ್ಲಿ ವಾಹನಗಳು ನಿಂತು ಸಂಚಾರಕ್ಕೆ ಅಡ್ಡಿಯಾಯಿತು. ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ನಿಯಂತ್ರಿಸಿದರು.

ಸ್ಥಳಕ್ಕೆ ಬಂದ ಲೋಕೋಪಯೋಗಿ ಇಲಾಖೆ ಎಇಇ ನಾಗರಾಜು, ‘ದುರಸ್ತಿಕಾರ್ಯ ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಕೆ–ಶಿಫ್ ಅಧಿಕಾರಿ ತನುಜ ಮಾತನಾಡಿ, ಕೆಲ ದಿನಗಳ ಹಿಂದೆ ಅಧಿಕಾರ ಸ್ವೀಕರಿಸಿದ್ದು, ಸದ್ಯಕ್ಕೆ ತಾತ್ಕಾಲಿಕವಾಗಿ ದುರಸ್ತಿ ಮಾಡಿ, ನಂತರ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಕ್ರಮತೆಗೆದುಕೊಳ್ಳುವುದಾಗಿ ತಿಳಿಸಿದರು.

ದುರಸ್ತಿ ಪ್ರಾರಂಭಿಸಿದ ನಂತರ ಪ್ರತಿಭಟನೆ ಹಿಂಪಡೆದರು.

ಅಮ್ ಆದ್ಮಿ ಪಕ್ಷದ ಅಧ್ಯಕ್ಷ ಜಯರಾಮಯ್ಯ, ದಲಿತ ಹಕ್ಕುಗಳ ಸಮಿತಿ ರಾಜುವೆಂಕಟಪ್ಪ, ಕೆಆರ್‌ಎಸ್ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜು, ಶ್ರಮಜೀವಿ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಕೃಷ್ಣರಾಜು, ವೇದಿಕೆಯ ಪದಾಧಿಕಾರಿಗಳಾದ ಸಿಂಗ್ರಿಗೌಡ, ಶಿವಲಿಂಗಯ್ಯ, ರಾಗಿರಂಗಸ್ವಾಮಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.