ADVERTISEMENT

ಡಾ.ಸಿ.ಎನ್.ಮಂಜುನಾಥ್ ಅವರಿಗೆ ‘ಸಿದ್ಧಗಂಗಾಶ್ರೀ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2022, 12:26 IST
Last Updated 13 ಡಿಸೆಂಬರ್ 2022, 12:26 IST
ಡಾ.ಸಿ.ಎನ್.ಮಂಜುನಾಥ್
ಡಾ.ಸಿ.ಎನ್.ಮಂಜುನಾಥ್    

ತುಮಕೂರು: ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘ ಕೊಡ ಮಾಡುವ 2022ನೇ ಸಾಲಿನ ‘ಸಿದ್ಧಗಂಗಾಶ್ರೀ’ ಪ್ರಶಸ್ತಿಗೆ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಆಯ್ಕೆ ಆಗಿದ್ದಾರೆ.

ಪ್ರಶಸ್ತಿಯು ₹1 ಲಕ್ಷ ನಗದು, ಅಭಿನಂದನಾ ಪತ್ರ ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಸಿದ್ಧಗಂಗಾ ಮಠದಲ್ಲಿ ಡಿ. 18ರಂದು ನಡೆಯುವ ಸಂಘದ 66ನೇ ಸರ್ವಸದಸ್ಯರ ವಾರ್ಷಿಕ ಮಹಾಧಿವೇಶನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

2021ನೇ ಸಾಲಿನ ‘ಸಿದ್ಧಗಂಗಾಶ್ರೀ’ ಪ್ರಶಸ್ತಿಗೆ ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಭಾಜನರಾಗಿದ್ದಾರೆ.

ADVERTISEMENT

ಶಿವಕುಮಾರ ಸ್ವಾಮೀಜಿ ಹೆಸರಿನಲ್ಲಿ ನೀಡುವ ‘ಸಿದ್ಧಗಂಗಾ ಶಿವಕುಮಾರಶ್ರೀ’ ಪ್ರಶಸ್ತಿಗೆ ನಾಲ್ವರನ್ನು ಆಯ್ಕೆ ಮಾಡಲಾಗಿದೆ. ಸಾಹಿತ್ಯ, ಸಾಮಾಜಿಕ, ಶೈಕ್ಷಣಿಕ, ಕೃಷಿ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದವರನ್ನು ಆಯ್ಕೆಗೆ ಪರಿಗಣಿಸಲಾಗಿದೆ. ಕಲಬುರಗಿಯ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಭೀಮಾಶಂಕರ ಚಂದ್ರಶೇಖರ ಬಿಲಗುಂದಿ, ಮೈಸೂರಿನ ಸಾಹಿತಿ ಪ್ರೊ.ಎಸ್.ಮಲೆಯೂರು ಗುರುಸ್ವಾಮಿ, ಬೆಂಗಳೂರಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಡಾ.ವೈ.ಸಿ.ಕಮಲ, ರಾಯಚೂರಿನ ಕೃಷಿ ತಜ್ಞರಾದ ಕವಿತಾ ಮಿಶ್ರಾ ಆಯ್ಕೆ ಆಗಿದ್ದಾರೆ. ಪ್ರಶಸ್ತಿಯು ತಲಾ ₹15 ಸಾವಿರ ನಗದು, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ಒಳಗೊಂಡಿದೆ.

‘ಕಾಯಕಯೋಗಿ’ ಪ್ರಶಸ್ತಿಗೆ ಪತ್ರಕರ್ತ ಧಾರವಾಡದ ರಂಜಾನ್ ದರ್ಗಾ ಅವರನ್ನು ಆಯ್ಕೆ ಮಾಡಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ‘ಸಂಘಸಿರಿ’ ಪ್ರಶಸ್ತಿ ನೀಡುತ್ತಿದ್ದು, ತುಮಕೂರಿನ ಎಚ್.ಜಿ.ಈಶ್ವರಯ್ಯ, ಬೆಂಗಳೂರಿನ ತುಳಸೀರಾಮಯ್ಯ, ಲಕ್ಷ್ಮಯ್ಯ, ಆರ್.ಎಸ್.ಹುಚ್ಚಾಚಾರಿ, ಬಳ್ಳಾರಿ ಚನ್ನನಗೌಡ, ಬೀದರ್‌ನ ದೇವೇಂದ್ರ ಕಾರಂಜಿ, ರಾಯಚೂರಿನ ಮಹೇಶ್ ಶಾಸ್ತ್ರಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.