ತುಮಕೂರು: ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಸಮರ್ಪಕವಾಗಿ ಆಗುತ್ತಿಲ್ಲ. ತೂಕದಲ್ಲಿ ಮೋಸ, ಪಡಿತರ ನೀಡಲು ಹಣ ಪಡೆಯಲಾಗುತ್ತಿದೆ ಎಂಬ ಆರೋಪಗಳು ವ್ಯಾಪಕವಾಗಿವೆ. ಇದರ ಮಧ್ಯೆ ಲೋಪ ಕಂಡು ಬಂದ, ನಿಯಮ ಮೀರಿದ 36 ಅಂಗಡಿಗಳ ಪರವಾನಗಿ ಅಮಾನತಿನಲ್ಲಿಟ್ಟಿದ್ದು, 6 ಅಂಗಡಿಗಳ ಪರವಾನಗಿ ರದ್ದು ಮಾಡಲಾಗಿದೆ.
ಜಿಲ್ಲೆಯಾದ್ಯಂತ ಒಟ್ಟು 1,124 ನ್ಯಾಯಬೆಲೆ ಅಂಗಡಿಗಳಿವೆ. 2021ರಿಂದ 2025ರ ಜುಲೈ 15ರ ವರೆಗೆ 6 ಅಂಗಡಿಗಳ ಪರವಾನಗಿ ರದ್ದು ಮಾಡಲಾಗಿದೆ. ಇದೇ ಅವಧಿಯಲ್ಲಿ 36 ಅಂಗಡಿಗಳ ಪರವಾನಗಿ ಅಮಾನತು ಮಾಡಲಾಗಿದೆ. ದೂರು ಬಂದ ನಂತರವಷ್ಟೇ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗುತ್ತಿದ್ದಾರೆ. ಅವರೇ ಸ್ವತಃ ಭೇಟಿ ನೀಡಿ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುತ್ತಿಲ್ಲ ಎಂಬುವುದು ಸಾರ್ವಜನಿಕರ ಆರೋಪ.
ಪಡಿತರ ವಿತರಣೆ ಸಮಯದಲ್ಲಿ ಸಾರ್ವಜನಿಕರಿಂದ ₹1 ಸಹ ತೆಗೆದುಕೊಳ್ಳುವಂತಿಲ್ಲ. ಆದರೆ, ವಿವಿಧ ಕಡೆಗಳಲ್ಲಿ ₹10, ₹20 ವಸೂಲಿ ಮಾಡುತ್ತಿರುವುದು ಸಾಮಾನ್ಯ ಎಂಬಂತಾಗಿದೆ. ತಿಂಗಳು ಪೂರ್ತಿ ಅಂಗಡಿ ತೆರೆದಿರಬೇಕು. ಬಹುತೇಕ ಅಂಗಡಿಗಳು ತಿಂಗಳಿಗೆ 2ರಿಂದ 3 ದಿನ ಮಾತ್ರ ಬಾಗಿಲು ತೆರೆಯಲಾಗುತ್ತದೆ. ನಿಗದಿತ ದಿನದಂದು ಪಡಿತರ ಪಡೆಯದಿದ್ದರೆ ಮುಂದಿನ ತಿಂಗಳು ತನಕ ಕಾಯಬೇಕಾದ ಪರಿಸ್ಥಿತಿ ಇದೆ. ಗ್ರಾಮೀಣ ಭಾಗದಲ್ಲಿ ಇದರ ಬಗ್ಗೆ ಯಾರೂ ಪ್ರಶ್ನಿಸಿದ ಕಾರಣಕ್ಕೆ ಅನಾದಿ ಕಾಲದಿಂದಲೂ ಹೀಗೆ ನಡೆದುಕೊಂಡು ಬಂದಿದೆ.
ಆಹಾರ ಧಾನ್ಯ ದಾಸ್ತಾನಿನಲ್ಲಿ ವ್ಯತ್ಯಾಸ ಕಂಡು ಬಂದ, ಸರ್ಕಾರ ನಿಗದಿ ಪಡಿಸಿದ ಪ್ರಮಾಣದಷ್ಟು ಪಡಿತರ ನೀಡದೆ ಪಡಿತರ ಚೀಟಿದಾರರಿಗೆ ವಂಚಿಸಿದವರ ವಿರುದ್ಧವೂ ಕ್ರಮಕೈಗೊಳ್ಳಲಾಗಿದೆ. ನಿಗದಿತ ವೇಳೆಯಲ್ಲಿ ಬಾಗಿಲು ತೆಗೆದು ವಹಿವಾಟು ನಡೆಸದೆ ಇರುವುದು, ಪಡಿತರ ಚೀಟಿದಾರರೊಂದಿಗೆ ಸೌಜನ್ಯಯುತವಾಗಿ ನಡೆದುಕೊಳ್ಳದ, ಸರಿಯಾದ ಸಮಯಕ್ಕೆ ಪಡಿತರ ನೀಡದೆ ವಿಳಂಬ ತೋರಿದ ಅಂಗಡಿಗಳ ಪರವಾನಗಿ ರದ್ದು ಮಾಡಲಾಗಿದೆ.
2024ರಲ್ಲಿ 16 ಅಂಗಡಿಗಳ ಪರವಾನಗಿ ಅಮಾನತಿನಲ್ಲಿ ಇಡಲಾಗಿದೆ. ಕಳೆದ ಕೆಲ ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಕ್ರಮ ಎದುರಿಸಿದ ಅಂಗಡಿಗಳ ಸಂಖ್ಯೆ ಎರಡಂಕಿ ದಾಟಿದೆ. ಇದರ ಜತೆಗೆ 2 ಅಂಗಡಿಗಳ ಪರವಾನಗಿ ಶಾಶ್ವತವಾಗಿ ರದ್ದುಗೊಳಿಸಲಾಗಿದೆ.
‘ತಿಂಗಳು ಪ್ರಾರಂಭದ ಮೂರು ದಿನದಲ್ಲಿ ಪಡಿತರ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಆ ತಿಂಗಳ ಆಹಾರ ಧಾನ್ಯ ಸಿಗುವುದಿಲ್ಲ. ಮತ್ತೆ ಮುಂದಿನ ಸರದಿ ಬರುವ ತನಕ ಕಾಯಬೇಕು. ಅಧಿಕಾರಿಗಳು ಕೇವಲ ನಗರಕ್ಕೆ ಸೀಮಿತವಾಗಿದ್ದಾರೆ. ಗ್ರಾಮೀಣ ಭಾಗದ ಜನರ ಕಷ್ಟ ಕೇಳಲು ಅವರು ಸಿದ್ಧರಿಲ್ಲ’ ಎಂದು ಅಂಚಿಹಳ್ಳಿಯ ನವೀನ್‌ಕುಮಾರ್ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.