
ತಿಪಟೂರು: ಜನವರಿ ಅಂತ್ಯಕ್ಕೆ ಸಂಬಂಧಿಸಿದಂತೆ ತಾಲ್ಲೂಕು ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಯೋಜನೆಗಳ ಅಧ್ಯಕ್ಷ ಎಂ.ಎನ್.ಕಾಂತರಾಜು ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.
ಸಭೆಯಲ್ಲಿ ಶಿಶು ಯೋಜನಾಧಿಕಾರಿ ಮಾತನಾಡಿ, 2023ರ ಆಗಸ್ಟ್‌ನಲ್ಲಿ ಆರಂಭವಾದ ಗೃಹಲಕ್ಷ್ಮಿ ಯೋಜನೆ ಮೂಲಕ ಆರಂಭದಲ್ಲಿ 49,408 ಫಲಾನುಭವಿಗಳಿದ್ದು, ಪ್ರಸ್ತುತ 53,625 ಫಲಾನುಭವಿಗಳಿಗೆ ಪ್ರತಿ ತಿಂಗಳು ಸರಾಸರಿ ₹10.73 ಲಕ್ಷ ಮೊತ್ತ ವಿತರಿಸಲಾಗುತ್ತಿದೆ. ಇದುವರೆಗೆ ತಾಲ್ಲೂಕಿಗೆ ಒಟ್ಟು ₹253.84 ಕೋಟಿ ಅನುದಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಗೃಹಲಕ್ಷ್ಮಿ ಯೋಜನೆಯಡಿ ನೋಂದಾಯಿತ 788 ಸದಸ್ಯರು ಮರಣ ಹೊಂದಿರುವ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಪಂಚ ಗ್ಯಾರಂಟಿ ಯೋಜನೆಯಡಿ ಹೋಬಳಿ ಮಟ್ಟದಲ್ಲಿ ಶಿಬಿರ ಆಯೋಜಿಸಿ ಬಂದ ಅರ್ಜಿಗಳ ಪರಿಶೀಲನೆ ಕಾರ್ಯ ನಡೆಯುತ್ತಿದೆ. 58,267 ಮಹಿಳಾ ಪ್ರಧಾನ ಮತ್ತು 2,528 ಪುರುಷ ಪ್ರಧಾನ ಪಡಿತರ ಚೀಟಿಗಳು ಸೇರಿ ಒಟ್ಟು 61,016 ಪಡಿತರ ಚೀಟಿಗಳು ಇದೆ ಎಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿಯ ಇಒ ಸುದರ್ಶನ್ ಮಾತನಾಡಿ, ತಾಲ್ಲೂಕಿನ 376 ಅಂಗನವಾಡಿಗಳಲ್ಲಿ ಬಾಣಂತಿ ಹಾಗೂ ಗರ್ಭಿಣಿಯರಿಗೆ ನೀಡುವ ಪಡಿತರ ಮಾಹಿತಿಯನ್ನು ಕಡ್ಡಾಯವಾಗಿ ಸೂಚನಾ ಫಲಕದಲ್ಲಿ ನಮೂದಿಸಬೇಕು. ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ವಿಶೇಷ ಎಚ್ಚರಿಕೆ ವಹಿಸಿ ಕಾರ್ಯನಿರ್ವಹಿಸಬೇಕು. ಸರ್ಕಾರದ ವಿವಿಧ ಯೋಜನೆಗಳ ಮಾಹಿತಿಯನ್ನು ಸಾರ್ವಜನಿಕರಿಗೆ ಸಮರ್ಪಕವಾಗಿ ತಲುಪಿಸಬೇಕು ಎಂದು ಸೂಚಿಸಿದರು.
ಅಧ್ಯಕ್ಷ ಎಂ.ಎನ್. ಕಾಂತರಾಜು ಮಾತನಾಡಿ, ಗೃಹಲಕ್ಷ್ಮಿ ಸೇರಿದಂತೆ ಸರ್ಕಾರದ ಎಲ್ಲ ಗ್ಯಾರಂಟಿ ಯೋಜನೆಗಳಲ್ಲಿ ಯಾವುದೇ ರೀತಿಯ ತಪ್ಪು ಅಂಕಿ-ಅಂಶಗಳನ್ನು ನೀಡದೆ ನಿಖರ ಮಾಹಿತಿ ನೀಡುವುದು ಅಧಿಕಾರಿಗಳ ಕರ್ತವ್ಯ ಎಂದು ಎಚ್ಚರಿಸಿದರು.
ಯುವನಿಧಿ ಯೋಜನೆ ಕುರಿತು ಮಾತನಾಡಿ, ಯೋಜನೆಯಡಿ 1,080 ಜನ ನೋಂದಣಿಯಾಗಿದೆ. 835 ನಿರುದ್ಯೋಗಿ ಯುವಜನರಿಗೆ ಯೋಜನೆಯ ಸೌಲಭ್ಯ ನೀಡಲಾಗುತ್ತಿದೆ. ಪ್ರತಿ ತಿಂಗಳ 5ರಿಂದ 25ನೇ ತಾರೀಕಿನವರೆಗೆ ಫಲಾನುಭವಿಗಳು ಸ್ವಯಂ ಘೋಷಣಾ ಪತ್ರ ಸಲ್ಲಿಸಬೇಕು. ಸರ್ಕಾರದಿಂದ ಉದ್ಯೋಗ ತರಬೇತಿ ಶಿಬಿರ ಆಯೋಜಿಸಲಾಗುತ್ತಿದ್ದು, ಯುವನಿಧಿ ಪಡೆಯುತ್ತಿರುವವರು ತರಬೇತಿಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ತಿಪಟೂರು ಘಟಕದಲ್ಲಿ 93 ವಾಹನಗಳು ಕಾರ್ಯನಿರ್ವಹಿಸುತ್ತಿದ್ದು, ಒಟ್ಟು 326 ಜನ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 89 ಚಾಲಕರು, 16 ನಿರ್ವಾಹಕರು, 156 ಚಾಲಕ ಕಂ ನಿರ್ವಾಹಕರು, 33 ತಾಂತ್ರಿಕ ಸಿಬ್ಬಂದಿ ಹಾಗೂ 32 ಆಡಳಿತ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.
ಶಕ್ತಿ ಯೋಜನೆಯಡಿ ಜನವರಿ ಅಂತ್ಯಕ್ಕೆ 7 ಲಕ್ಷಕ್ಕೂ ಹೆಚ್ಚು ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿದ್ದು, ಒಟ್ಟು 2.70 ಕೋಟಿಗೂ ಹೆಚ್ಚು ಮಹಿಳಾ ಪ್ರಯಾಣಿಕರ ಟಿಕೆಟ್‌ಗಳು ದಾಖಲಾಗಿವೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿ ಮಾಹಿತಿ ನೀಡಿದರು.
ಆಹಾರ ಇಲಾಖೆ ಅಧಿಕಾರಿ ಮಾತನಾಡಿ, 77 ನ್ಯಾಯಬೆಲೆ ಅಂಗಡಿ ಹಾಗೂ ಒಂದು ಆಹಾರ ಧಾನ್ಯ ಸಗಟು ಮಳಿಗೆ ವ್ಯವಸ್ಥೆ ಇದೆ. 3,416 ಅಂತ್ಯೋದಯ, 51,613 ಬಿಪಿಎಲ್ ಹಾಗೂ 6,234 ಎಪಿಎಲ್ ಪಡಿತರ ಚೀಟಿಗಳು ಜತೆ ಆದಾಯ ತೆರಿಗೆ ಸಂಬಂಧಿತ ಕಾರಣಗಳಿಂದ ಈಗಾಗಲೇ 1,300 ಪಡಿತರ ಚೀಟಿ ರದ್ದುಪಡಿಸಲಾಗಿದೆ ಎಂದು ತಿಳಿಸಿದರು.
ಪಂಚ ಗ್ಯಾರಂಟಿ ಯೋಜನೆ ಸದಸ್ಯರು, ತಾಲ್ಲೂಕು ಪಂಚಾಯಿತಿ ಸಿಬ್ಬಂದಿ, ನರೇಗಾ ಯೋಜನೆಯ ಅಧಿಕಾರಿ ಶಿವಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.