ADVERTISEMENT

ರಾಷ್ಟ್ರಧ್ವಜದ ಋಣ ಹೇಗೆ ತೀರಿಸಲಿ?–ಉಕ್ರೇನ್‌ನಲ್ಲಿ ಜೀವ ಕಾಪಾಡಿದ ತ್ರಿವರ್ಣ ಧ್ವಜ

ಹೆತ್ತವರ ಮಡಿಲು ಸೇರಿದ ನಂದಿನಿ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2022, 4:46 IST
Last Updated 8 ಮಾರ್ಚ್ 2022, 4:46 IST
ಉಕ್ರೇನ್ ದೇಶದಿಂದ ಭಾರತಕ್ಕೆ ಮರಳಿದ ವಿದ್ಯಾರ್ಥಿನಿ ನಂದಿನಿ ಅವರನ್ನು ಅವರ ತಂದೆ, ತಾಯಿ, ಅಣ್ಣ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು
ಉಕ್ರೇನ್ ದೇಶದಿಂದ ಭಾರತಕ್ಕೆ ಮರಳಿದ ವಿದ್ಯಾರ್ಥಿನಿ ನಂದಿನಿ ಅವರನ್ನು ಅವರ ತಂದೆ, ತಾಯಿ, ಅಣ್ಣ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು   

ಕೋರ‌ (ತುಮಕೂರು): ‘ಯುದ್ಧ ಪೀಡಿತ ಉಕ್ರೇನ್‌ನಲ್ಲಿ ನಮ್ಮ ಜೀವ ಕಾಪಾಡಿದ ರಾಷ್ಟ್ರಧ್ವಜದ ಋಣವನ್ನು ತೀರಿಸುವುದಾದರೂ ಹೇಗೆ. ಈ ಋಣ ಎಂದಿಗೂ ತೀರಿಸಲು ಸಾಧ್ಯವಿಲ್ಲ’

ಉಕ್ರೇನ್‌ನಲ್ಲಿ ಸಿಲುಕಿದ್ದ ತುಮಕೂರು ತಾಲ್ಲೂಕಿನ ಅರಕೆರೆ ಗ್ರಾಮದ ವೈದ್ಯಕೀಯ ವಿದ್ಯಾರ್ಥಿನಿ ನಂದಿನಿ ಸೋಮವಾರ ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿದ ನಂತರ ಭಾವುಕರಾಗಿ ಆಡಿದ ಮಾತುಗಳಿವು.

ಅರಕೆರೆ ಚಂದ್ರಪ್ಪ ಹಾಗೂ ವಿದ್ಯಾ ದಂಪತಿಯ ಪುತ್ರಿಯಾದ ಅವರು ಉಕ್ರೇನ್‌ಗೆ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ತೆರಳಿದ್ದರು. ಯುದ್ಧ ಘೋಷಣೆಯಾದ ಬಳಿಕ ಭಾರತಕ್ಕೆ ಬರಲಾಗದೆ ಕಾಲೇಜಿನಲ್ಲಿದ್ದ ಕರ್ನಾಟಕದ ಸ್ನೇಹಿತರ ಜೊತೆ ಬಂಕರ್‌ನಲ್ಲಿ ಉಳಿದಿದ್ದರು.

ADVERTISEMENT

‘ಯುದ್ಧದ ಸನ್ನಿವೇಶಗಳನ್ನು ಚಲನಚಿತ್ರದಲ್ಲಿ ನೋಡಿದ್ದೆ. ಆದರೆ, ಎಷ್ಟು ಭೀಕರವಾಗಿರುತ್ತದೆ ಎಂದು ಕಣ್ಣಾರೆ ನೋಡಿ ತಿಳಿಯಿತು. ಸೈರನ್, ರಾಕೆಟ್ ದಾಳಿ ಶಬ್ದ ಕೇಳಿ ನಾವು ಜೀವಂತವಾಗಿ ಊರು ಸೇರುವುದಿಲ್ಲ ವೆಂದು ಭಾವಿಸಿದ್ದೆವು’ ಎಂದು ಅವರು ‘ಪ್ರಜಾವಾಣಿ’ ಜೊತೆ ಮಾತಿಗಿಳಿದರು.

ಯುದ್ಧದ ತೀವ್ರತೆ ಹೆಚ್ಚಾದಂತೆ ದಿನಸಿ ಖರೀದಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ನಂದಿನಿ ಅನುಭವ ಹಂಚಿಕೊಂಡರು.

‘ಉಕ್ರೇನ್ ರಾಯಭಾರಿ ಕಚೇರಿ ಅಧಿಕಾರಿಗಳು ನಮಗೆ ಸ್ಪಂದಿಸಲಿಲ್ಲ. ನಾವೇ ಧೈರ್ಯ ಮಾಡಿ ಭಾರತದ ರಾಷ್ಟ್ರಧ್ವಜ ಹಿಡಿದು ಉಕ್ರೇನ್
ರೈಲು ಹತ್ತಿ ಲಿವಿ ಪ್ರಾಂತ್ಯ, ಅಲ್ಲಿಂದ ಬುಡಾಪೆಸ್ಟ್‌ ನಂತರ ರೊಮೇನಿಯಾ ತಲುಪಿದೆವು. ಬುಡಾಪೆಸ್ಟ್‌ನಲ್ಲಿ ಸ್ವಯಂಸೇವಕರು ಚರ್ಚ್‌ನಲ್ಲಿ ಉಳಿಯಲು ಅವಕಾಶ ಕಲ್ಪಿಸಿ, ಊಟದ ವ್ಯವಸ್ಥೆ ಮಾಡಿದ್ದರು. ನಂತರ ಸ್ವಂತ ಖರ್ಚಿನಲ್ಲಿ ರೊಮೇನಿಯಾ ತಲುಪಿದೆವು. ಅಲ್ಲಿ ಭಾರತೀಯ ರಾಯಭಾರ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅವರು ತಕ್ಷಣ ಸ್ಪಂದಿಸಿ ವಿಮಾನದಲ್ಲಿ ಆಸನದ ವ್ಯವಸ್ಥೆ ಕಲ್ಪಿಸಲು ಸಹಕರಿಸಿ ದರು’ ಎಂದು ಅವರು ವಿವರಿಸಿದರು.

‘ಯುದ್ಧದ ಭೀಕರತೆ ನೆನಪಿಸಿಕೊಂಡರೆ ಭಯವಾಗುತ್ತದೆ. ನಮ್ಮ ನೆರವಿಗೆ ನಿಂತ ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತೇನೆ. ನಮ್ಮ ಜೀವ ಕಾಪಾಡಿದ ರಾಷ್ಟ್ರಧ್ವಜದ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ’ ಎಂದು ನಂದಿನಿ ಅವರು ಭಾವುಕರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.