ತುಮಕೂರು: ಪರಿಶಿಷ್ಟ ಜಾತಿಯಲ್ಲಿನ ಒಳ ಮೀಸಲಾತಿ ಜಾರಿಗೆ ಆ. 10ರ ವರೆಗೆ ಅಂತಿಮ ಗಡುವು ನೀಡಿದ್ದು, ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ರಾಜ್ಯ ಬಂದ್ ಮಾಡಲಾಗುವುದು ಎಂದು ಮಾದಿಗ ಸಮುದಾಯದ ಜನಪ್ರತಿನಿಧಿಗಳು, ಮುಖಂಡರು ಎಚ್ಚರಿಸಿದ್ದಾರೆ.
ನಗರದಲ್ಲಿ ಶನಿವಾರ ಸಂಸದ ಗೋವಿಂದ ಕಾರಜೋಳ, ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾ ಘಟಕದ ಉಪಾಧ್ಯಕ್ಷ ವೈ.ಎಚ್.ಹುಚ್ಚಯ್ಯ, ಮುಖಂಡರಾದ ಬಿ.ಎಚ್.ಅನಿಲ್‌ಕುಮಾರ್, ಡಾ.ಲಕ್ಷ್ಮಿಕಾಂತ್, ಮೂಡಿಗೆರೆ ದೀಪಕ್ ಜಂಟಿ ಸುದ್ದಿಗೋಷ್ಠಿ ನಡೆಸಿ ಸರ್ಕಾರಕ್ಕೆ ಅಂತಿಮ ಗಡುವು ನೀಡಿದರು.
‘ಆ. 1ರಂದು ರಾಜ್ಯದ ಎಲ್ಲ ಜಿಲ್ಲಾಧಿಕಾರಿ ಕಚೇರಿ ಮುಂದೆ ಮಾದಿಗ ಸಮುದಾಯದಿಂದ ಪ್ರತಿಭಟನೆ, ಅಸಹಕಾರ ಚಳವಳಿ ನಡೆಸಲಾಗುವುದು. ಆ. 10ರ ಒಳಗೆ ಮೀಸಲಾತಿ ಹಂಚಿಕೆ ಮಾಡಬೇಕು. ಇಲ್ಲದಿದ್ದರೆ ಕರ್ನಾಟಕ ಬಂದ್ ಮಾಡಿ, ಆಡಳಿತ ನಡೆಸಲು ಸರ್ಕಾರಕ್ಕೆ ಬಿಡುವುದಿಲ್ಲ. ಸುಪ್ರೀಂ ಕೋರ್ಟ್ ಆದೇಶ ನೀಡಿ ವರ್ಷ ಕಳೆಯುತ್ತಿದೆ. ಸರ್ಕಾರ ಐದು ತಿಂಗಳಾದರೂ ಸಮೀಕ್ಷೆ ಕಾರ್ಯ ಮುಗಿಸಿಲ್ಲ’ ಎಂದು ಎ.ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ದತ್ತಾಂಶ ಅಗತ್ಯ ಇದೆ ಎಂದು ಸಮಿತಿ ರಚಿಸಿ ಆರು ತಿಂಗಳಾಗಿದೆ. ರಾಜ್ಯದಲ್ಲಿ ಶೇ 91, ಬೆಂಗಳೂರಿನಲ್ಲಿ ಶೇ 56ರಷ್ಟು ಸರ್ವೆ ಆಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಿತಿಯ ವರದಿ ಬರಲಿ ಎನ್ನುತ್ತಿದ್ದಾರೆ. ಗೊಂದಲ ಮುಂದುವರಿದಿದ್ದು, 35 ವರ್ಷ ಹೋರಾಟ ಮಾಡಿದ ಮಾದಿಗರು ಸಹನೆ ಕಳೆದುಕೊಂಡಿದ್ದಾರೆ. ಇದು ಸರ್ಕಾರಕ್ಕೆ ಕೊನೆಯ ಎಚ್ಚರಿಕೆ ಎಂದರು.
ಗೋವಿಂದ ಕಾರಜೋಳ, ‘ಕಾಂಗ್ರೆಸ್ ಚುನಾವಣೆಗೂ ಮುನ್ನ ಒಳ ಮೀಸಲಾತಿ ಜಾರಿಯ ಭರವಸೆ ನೀಡಿತ್ತು. ಮೊದಲ ಸಚಿವ ಸಂಪುಟದಲ್ಲಿಯೇ ಅನುಮೋದನೆ ನೀಡಲಾಗುವುದು ಎಂದು ತಿಳಿಸಿತ್ತು. ಅಧಿಕಾರಕ್ಕೆ ಬಂದು 2 ವರ್ಷ ಕಳೆದರು ಜಾರಿಗೆ ಆಸಕ್ತಿ ತೋರುತ್ತಿಲ್ಲ. ಕಾಲಹರಣ, ಕಣ್ಣೊರೆಸುವ ತಂತ್ರ ಮಾಡುತ್ತಿದೆ. ವಿಳಂಬ ನೀತಿ ಖಂಡಿಸಿ ಕಾವೇರಿಯಿಂದ ಭೀಮಾನದಿ ವರೆಗೆ ಅಸಹಕಾರ ಚಳವಳಿ ನಡೆಸಲಾಗುವುದು’ ಎಂದು ಹೇಳಿದರು.
ಮುಖಂಡರಾದ ಆಂಜಿನಪ್ಪ, ಕೇಶವಮೂರ್ತಿ, ಪಾವಗಡ ಶ್ರೀರಾಮ್, ರಂಜನ್, ನರಸಿಂಹಮೂರ್ತಿ ಹಾಜರಿದ್ದರು.
ಖರ್ಗೆ ವಿರೋಧ
‘ಒಳ ಮೀಸಲಾತಿ ಜಾರಿ ಮಾಡುವ ಸಾರ್ವಭೌಮತ್ವ ಆಯಾ ರಾಜ್ಯಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಲ್ಲ ರಾಜ್ಯಗಳ ಕಾಂಗ್ರೆಸ್ ಅಧ್ಯಕ್ಷರ ಜತೆ ಸಭೆ ನಡೆಸಿದರು. ನಾನು ಹೇಳುವ ತನಕ ಒಳ ಮೀಸಲಾತಿ ಜಾರಿ ಮಾಡಬಾರದು ಎಂದು ಸೂಚನೆ ಕೊಟ್ಟಿದ್ದಾರೆ’ ಎಂದು ಮಾಜಿ ಸಂಸದ ಎ.ನಾರಾಯಣಸ್ವಾಮಿ ಆರೋಪಿಸಿದರು.
ಒಳ ಮೀಸಲಾತಿಗಾಗಿ ಕೇವಲ ಮಾದಿಗರು ಮಾತ್ರ ಹೋರಾಟ ಮಾಡುತ್ತಿದ್ದಾರೆ. ಪರಿಶಿಷ್ಟ ಜಾತಿಯ ಇತರರು ಧ್ವನಿ ಎತ್ತುತ್ತಿಲ್ಲ. ಈಗಲೂ ಅವರೇ ಅಡ್ಡಿ ಪಡಿಸುತ್ತಿದ್ದಾರೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.