ADVERTISEMENT

ಶಿರಾ ಕ್ಷೇತ್ರಕ್ಕೆ ಘೋಷಣೆಯಾಗದ ಜೆಡಿಎಸ್ ಅಭ್ಯರ್ಥಿ: ಕಾರ್ಯಕರ್ತರಲ್ಲಿ ಗೊಂದಲ

ಶಿರಾ ವಿಧಾನಸಭಾ ಕ್ಷೇತ್ರ: ಪಕ್ಷದ ಕಾರ್ಯಕರ್ತರಲ್ಲಿ ಮುಂದುವರಿದ ಗೊಂದಲ

​ಪ್ರಜಾವಾಣಿ ವಾರ್ತೆ
Published 20 ಜನವರಿ 2023, 11:52 IST
Last Updated 20 ಜನವರಿ 2023, 11:52 IST
   

ಶಿರಾ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಶಿರಾ ಕ್ಷೇತ್ರಕ್ಕೆ ಜೆಡಿಎಸ್ ಪಕ್ಷದ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆಗೆ ಉತ್ತರ ದೊರೆಯದೆ ಕಾರ್ಯಕರ್ತರಲ್ಲಿ ಆತಂಕ ಮನೆ ಮಾಡುವಂತಾಗಿದೆ. ಜಿಲ್ಲೆಯ ಇತರೆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ್ದರೂ ಶಿರಾ ಕ್ಷೇತ್ರಕ್ಕೆ ಯಾರು ಎಂಬುದು ಇನ್ನೂ ನಿರ್ಧಾರವಾಗಿಲ್ಲ.

ಬಿ. ಸತ್ಯನಾರಾಯಣ ಅವಧಿಯಲ್ಲಿ ಪ್ರಬಲವಾಗಿದ್ದ ಜೆಡಿಎಸ್, ಅವರ ನಿಧನದ ನಂತರ ನಾಯಕನಿಲ್ಲದ ನೌಕೆಯಂತಾಗಿದೆ. ಮುಂದಿನ ನಾಯಕತ್ವ ಯಾರಿಗೆ ಎನ್ನುವ ಪ್ರಶ್ನೆಗೆ ಇನ್ನು ಉತ್ತರ ದೊರೆಯದಂತಾಗಿದೆ.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಪಂಚರತ್ನ ಯಾತ್ರೆ ಕ್ಷೇತ್ರಕ್ಕೆ ಆಗಮಿಸಿದ ಸಮಯದಲ್ಲಿ ನಿರೀಕ್ಷೆಗೂ ಮೀರಿ ಜನ ಬೆಂಬಲ ವ್ಯಕ್ತವಾಗಿದ್ದು, ಕಾರ್ಯಕರ್ತರಲ್ಲಿ ನವಚೈತನ್ಯ ಮೂಡಿತ್ತು. ಆದರೆ, ಅಭ್ಯರ್ಥಿಯ ಆಯ್ಕೆಯಲ್ಲಿ ಉಂಟಾಗಿರುವ ಗೊಂದಲ ಕಾರ್ಯಕರ್ತರ ಹುಮ್ಮಸ್ಸಿಗೆ ತಡೆಯೊಡ್ಡಿದೆ.

ADVERTISEMENT

ಆಕಾಂಕ್ಷಿಗಳ ಸಂಖ್ಯೆ ಹೆಚ್ಚು

ವಿಧಾನಸಭೆ ಚುನಾವಣೆಗಾಗಿ ಜೆಡಿಎಸ್ ಪಕ್ಷದಲ್ಲಿ ಆಕಾಂಕ್ಷಿಗಳ ದೊಡ್ಡ ಪಟ್ಟಿಯೇ ಬೆಳೆಯುತ್ತಿದೆ. ತಾಲ್ಲೂಕು ಘಟಕದ ಅಧ್ಯಕ್ಷ ಆರ್. ಉಗ್ರೇಶ್, ಬಿ. ಸತ್ಯನಾರಾಯಣ ಪುತ್ರ ಬಿ.ಎಸ್. ಸತ್ಯಪ್ರಕಾಶ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಸಿ.ಆರ್. ಉಮೇಶ್, ಎಸ್. ರಾಮಕೃಷ್ಣ ಸಹ ಟಿಕೆಟ್‌ಗೆ ಪೈಪೋಟಿ ನಡೆಸಿದ್ದಾರೆ. ಜೊತೆಗೆ ಇತ್ತೀಚೆಗೆ ಪಕ್ಷಕ್ಕೆ ಸೇರ್ಪಡೆಯಾಗಿರುವ ತುಮುಲ್ ನಿರ್ದೇಶಕ ಎಸ್.ಆರ್. ಗೌಡ, ಕಲ್ಕೆರೆ ರವಿಕುಮಾರ್ ಹಾಗೂ ಶ್ರೀರಾಮೇಗೌಡ ಸಹ ಇದೇ ಪ್ರಯತ್ನದಲ್ಲಿ ಇದ್ದಾರೆ.

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಬೆಂಗಳೂರಿನಲ್ಲಿ ಹಲವಾರು ಬಾರಿ ಆಕಾಂಕ್ಷಿಗಳ ಸಭೆ ನಡೆಸಿದ್ದರೂ ಸ್ವಷ್ಟ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ.

ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷರಾಗಿ ಕಳೆದ ಹತ್ತು ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ಆರ್. ಉಗ್ರೇಶ್ ಗ್ರಾಮಾಂತರ ಪ್ರದೇಶಕ್ಕೆ ತೆರಳಿ ಪಕ್ಷವನ್ನು ಸಂಘಟಿಸುವ ಕೆಲಸ ಮಾಡುತ್ತಿದ್ದಾರೆ. ಬಿ‌. ಸತ್ಯನಾರಾಯಣ ಎರಡು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಪರಾಜಿತರಾದ ಸಮಯದಲ್ಲಿ ಪಕ್ಷದ ಕಚೇರಿ ಬಾಗಿಲು ತೆಗೆದುಕೊಂಡು ಸಂಘಟಿಸಿದ್ದಾರೆ. ತಳಮಟ್ಟದಿಂದ ಪಕ್ಷ ಸಂಘಟಿಸಿ ಎಲ್ಲರನ್ನು ಜೊತೆಯಾಗಿ ಕರೆದುಕೊಂಡು ಹೋಗುವ ಅನುಭವ ಇದೆ. ಕಾಂಗ್ರೆಸ್, ಬಿಜೆಪಿಗೆ ಸ್ಪರ್ಧೆ ನೀಡುವ ಶಕ್ತಿ ಇದೆ ಎನ್ನುವುದು ಅವರ ಬೆಂಬಲಿಗರ ವಾದವಾಗಿದೆ.

ಸತ್ಯನಾರಾಯಣ ಅಧಿಕಾರಾವಧಿ ಯಲ್ಲಿ ಕೈಗೊಂಡಿರುವ ಜನಪರ ಕೆಲಸಗಳಿಂದ ಪಕ್ಷ ಹೆಚ್ಚು ಸದೃಢಗೊಂಡಿದೆ. ಅವರ ಪುತ್ರ ಬಿ.ಎಸ್. ಸತ್ಯಪ್ರಕಾಶ್ ಅವರಿಗೆ ಟಿಕೇಟ್ ನೀಡಿದರೆ ಪಕ್ಷಕ್ಕೆ ಅನುಕೂಲವಾಗುವುದು ಎನ್ನುವುದು ಅವರ ಬೆಂಬಲಿಗರ ಅನಿಸಿಕೆಯಾಗಿದೆ. ಆದರೆ, ಉಪ ಚುನಾವಣೆ ಫಲಿತಾಂಶ ಇವರಿಗೆ ಸಮಸ್ಯೆ ತಂದೊಡ್ಡಬಹುದು.

ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಎಚ್.ಡಿ. ಕುಮಾರಸ್ವಾಮಿ, ಎಚ್.ಡಿ. ದೇವೇಗೌಡ ಅವರು ‘ಸತ್ಯನಾರಾಯಣ ಅವರನ್ನು ಗೆಲ್ಲಿಸಿಕೊಂಡು ಬಾ ಮುಂದೆ ನಿನಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದರು. ಅವರ ಮಾತಿನಂತೆ ಸತ್ಯನಾರಾಯಣ ಗೆಲುವಿಗೆ ಶ್ರಮಿಸಿದ್ದು ಈಗ ಅವರ ಕೊಟ್ಟ ಮಾತು ಉಳಿಸಿಕೊಳ್ಳಬೇಕು’ ಎನ್ನುವುದು ಜಿ.ಪಂ ಮಾಜಿ ಸದಸ್ಯ ಸಿ.ಆರ್. ಉಮೇಶ್ ನಿಲುವಾಗಿದೆ.

ಇದರ ಜೊತೆಗೆ ಕಾಂಗ್ರೆಸ್ ಪಕ್ಷದಲ್ಲಿ ಮಾಜಿ ಸಚಿವ ಟಿ.ಬಿ. ಜಯಚಂದ್ರ ಅವರಿಗೆ ಟಿಕೆಟ್ ದೊರೆಯದಿದ್ದರೆ ಜೆಡಿಎಸ್ ಅಭ್ಯರ್ಥಿಯಾಗಬಹುದು ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ನಿಷ್ಠಾವಂತರಿಗೆ ನೀಡಿ

ಒಂದು ಕಡೆ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದವರಿಗೆ ಅವಕಾಶ ನೀಡಬೇಕು. ಯಾವುದೇ ಕಾರಣಕ್ಕೂ ಹೊಸದಾಗಿ ಪಕ್ಷಕ್ಕೆ ಸೇರ್ಪಡೆಯಾದವರಿಗೆ ಟಿಕೇಟ್ ನೀಡುವುದು ಬೇಡ ಎನ್ನುವ ಕೂಗು ಪಕ್ಷದಲ್ಲಿ ಪ್ರಬಲವಾಗಿ ಕೇಳಿಬರುತ್ತಿದೆ.

ಪಕ್ಷದಲ್ಲಿ ನಾಯಕರ ಸಂಖ್ಯೆ ಹೆಚ್ಚುತ್ತಿರುವುದು ಕಾರ್ಯಕರ್ತರಲ್ಲಿ ಗೊಂದಲ‌ ಮೂಡಿಸುತ್ತಿದೆ. ಚುನಾವಣೆ ಯಲ್ಲಿ ಟಿಕೇಟ್ ವಂಚಿತರಾ ದವರು ಪಕ್ಷದ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುವರೆ? ಎನ್ನುವ ಅನುಮಾನ ಕಾರ್ಯಕರ್ತರಲ್ಲಿ ಮೂಡಿದೆ. ಜೊತೆಗೆ ಈಗ ಒಬ್ಬರ ಜೊತೆಯಲ್ಲಿ ಗುರುತಿಸಿಕೊಂಡರೆ ಮತ್ತೊಬ್ಬರಿಗೆ ಅಸಮಾಧಾನ ಮೂಡುವುದರಿಂದ ಕಾರ್ಯಕರ್ತರು ನಾಯಕರಿಂದ ಅಂತರ ಕಾಯ್ದುಕೊಂಡಿರುವುದು ಕಂಡುಬರುತ್ತಿದೆ.

ಜೆಡಿಎಸ್ ಪ್ರಬಲ ಆಗುತ್ತಿರುವುದರಿಂದ ದಳಪತಿಗಳು ಯಾರಿಗೆ ಮಣೆ ಹಾಕಲಿದ್ದಾರೆ ಎನ್ನುವ ಪ್ರಶ್ನೆ ಪಕ್ಷದವರ ಜೊತೆಗೆ ಕಾಂಗ್ರೆಸ್, ಬಿಜೆಪಿ ವಲಯದಲ್ಲೂ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.