ADVERTISEMENT

ಜೆಡಿಎಸ್‍ ಪಕ್ಷ ಸ್ಥಾಪನೆಯಾಗಿ 25 ವರ್ಷ: ಜೆ.ಪಿ.ಭವನದಲ್ಲಿ ಬೆಳ್ಳಿಹಬ್ಬದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 2:17 IST
Last Updated 20 ನವೆಂಬರ್ 2025, 2:17 IST
ಆರ್.ಸಿ.ಆಂಜನಪ್ಪ
ಆರ್.ಸಿ.ಆಂಜನಪ್ಪ   

ತುಮಕೂರು: ಜನತಾ ದಳ (ಜಾತ್ಯತೀತ) ಪಕ್ಷ ಸ್ಥಾಪನೆಯಾಗಿ 25 ವರ್ಷ ತುಂಬಿದ್ದು, ಬೆಂಗಳೂರಿನ ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಬೆಳ್ಳಿಹಬ್ಬದ ಆಚರಣೆಯನ್ನು ನ.21 ಹಾಗೂ 22ರಂದು ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸಿ.ಆಂಜನಪ್ಪ ಇಲ್ಲಿ ಬುಧವಾರ ತಿಳಿಸಿದರು.

ರಾಜ್ಯದಲ್ಲಿ ಪ್ರಾದೇಶಿಕ ಪಕ್ಷವೊಂದು ಬೆಳ್ಳಿ ಹಬ್ಬ ಆಚರಿಸುತ್ತಿರುವುದು ಇದೇ ಮೊದಲು. ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷವನ್ನು ಮತ್ತಷ್ಟು ಬಲಪಡಿಸಿ ಸಂಘಟಿಸಲು ಕಾರ್ಯಕರ್ತರು ಸಂಕಲ್ಪ ಮಾಡಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಬೆಳ್ಳಿಹಬ್ಬ ಆಚರಣೆ ಅಂಗವಾಗಿ ಸಭೆ, ಸಮಾವೇಶಗಳು, ‍ಪಕ್ಷದ ಪ್ರತಿನಿಧಿಗಳ ಸಭೆ ನಡೆಯಲಿದೆ. ಈ ಸಂದರ್ಭದಲ್ಲಿ ಬೆಳ್ಳಿಹಬ್ಬದ ಲಾಂಛನ ಬಿಡುಗಡೆ, ಪಕ್ಷ ಬೆಳೆದು ಬಂದ ಹಾದಿಯ ಕಿರುಚಿತ್ರ ಪ್ರದರ್ಶನ ನಡೆಯಲಿದೆ ಎಂದರು.

ADVERTISEMENT

ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ‘ಜೆಡಿಎಸ್‍ ಬೆಳ್ಳಿಹಬ್ಬ ಆಚರಣೆ ಅಂಗವಾಗಿ ಡಿ. 1ರಿಂದ 15ರ ವರೆಗೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳು, ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರದರ್ಶನ, ಕಾರ್ಯಕರ್ತರ ಸಭೆ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನದಲ್ಲಿ ಕಾರ್ಯಕರ್ತರ ಸಮಾವೇಶ ಏರ್ಪಡಿಸಲು ಉದ್ದೇಶಿಸಲಾಗಿದೆ’ ಎಂದು ತಿಳಿಸಿದರು.

ಗುಬ್ಬಿ ಮುಖಂಡ ನಾಗರಾಜು, ‘ಜಿಲ್ಲೆಯಿಂದ ಸಾವಿರಾರು ಕಾರ್ಯಕರ್ತರು ಬೆಳ್ಳಿಹಬ್ಬ ಆಚರಣೆ ಸಮಾರಂಭದಲ್ಲಿ ಭಾಗವಹಿಸುವರು’ ಎಂದರು.

ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಮುಖಂಡರಾದ ಸೋಲಾರ್ ಕೃಷ್ಣಮೂರ್ತಿ, ಆರ್.ಉಗ್ರೇಶ್, ಮುದಿಮಡು ರಂಗಶಾಮಯ್ಯ, ಹೆಬ್ಬೂರು ರಾಮಣ್ಣ, ಯೋಗಾನಂದಕುಮಾರ್, ಗಂಗಣ್ಣ, ಭೈರೇಶ್, ಎಸ್.ಡಿ.ಕೃಷ್ಣಪ್ಪ, ಲೀಲಾವತಿ, ರಂಗನಾಥ್, ಸೊಗಡು ವೆಂಕಟೇಶ್, ಕೆಂಪರಾಜು, ಲಕ್ಷ್ಮಮ್ಮ, ಮಧುಗೌಡ, ಆಂಜನಪ್ಪ, ರಾಧಾ, ಯಶೋದ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.