
ಕೊರಟಗೆರೆ: ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಭಕ್ತಿಭಾವ, ಸಂಸ್ಕೃತಿಯ ಘೋಷಣೆ ಮತ್ತು ಶಿಸ್ತಿನ ಶೋಭಾಯಾತ್ರೆಯೊಂದಿಗೆ ನೆರವೇರಿತು.
ಪಟ್ಟಣದ ಕಣ್ಣಪ್ಪ ದೇವಸ್ಥಾನದಿಂದ ಮಧ್ಯಾಹ್ನ 2.30ಕ್ಕೆ ಆರಂಭವಾದ ಶೋಭಾಯಾತ್ರೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಗಮನ ಸೆಳೆಯಿತು.
ಶೋಭಾಯಾತ್ರೆಯಲ್ಲಿ ಕೇಸರಿ ಧ್ವಜಗಳನ್ನು ಹಿಡಿದು ಧರ್ಮರಕ್ಷಣೆ, ಸಂಸ್ಕೃತಿ ಉಳಿವಿನ ಘೋಷಣೆ ಕೂಗಿದರು. ವಾದ್ಯಘೋಷ, ಭಜನೆ ಧಾರ್ಮಿಕ ಮೆರುಗನ್ನು ಪಡೆದುಕೊಂಡಿತು.
ಸಂಜೆ ಪಟ್ಟಣದ ಕಾಳಿದಾಸ ಪ್ರೌಢಶಾಲೆ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹಿಂದೂ ಸಮಾಜ ಒಂದಾಗಿ ನಿಂತಾಗ ಮಾತ್ರ ಸಂಸ್ಕೃತಿ ಉಳಿಯುತ್ತದೆ. ನಮ್ಮ ಧರ್ಮವು ಸಹಿಷ್ಣುತೆ, ಶಾಂತಿ ಮತ್ತು ಮಾನವೀಯ ಮೌಲ್ಯ ಸಾರುತ್ತದೆ. ಇವುಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಹೊಣೆ ಪ್ರತಿಯೊಬ್ಬರ ಮೇಲಿದೆ. ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ಭೇದಭಾವ ಸೃಷ್ಟಿಸುವ ಪ್ರಯತ್ನಗಳನ್ನು ಹಿಂದೂ ಸಮಾಜ ತಳ್ಳಿಹಾಕಬೇಕು ಎಂದರು.
ಉಪನ್ಯಾಸಕ ಕೊಟ್ರೇಶ್ ಮಾತನಾಡಿ, ಹಿಂದೂ ಸಂಸ್ಕೃತಿ ಕೇವಲ ಆಚರಣೆಗಳಿಗೆ ಸೀಮಿತವಲ್ಲ, ಅದು ಜೀವನ ಶೈಲಿ. ಕುಟುಂಬ ವ್ಯವಸ್ಥೆ, ನೈತಿಕತೆ, ಪ್ರಕೃತಿ ಪೂಜೆ ಎಲ್ಲವೂ ನಮ್ಮ ಸಂಸ್ಕೃತಿಯ ವೈಶಿಷ್ಟ್ಯ. ಇವುಗಳ ಅರಿವು ಯುವಜನರಲ್ಲಿ ಹೆಚ್ಚಬೇಕು ಎಂದರು.
ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಯೋಗ ಗುಚ್ಚ, ಚಾಣಕ್ಯ ಶಾಲೆ, ಕನ್ನಿಕಾ ವಿದ್ಯಾಪೀಠ ಶಾಲೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಡಾ. ಮಲ್ಲಿಕಾರ್ಜುನ್, ಎಸ್.ಪವನ್ ಕುಮಾರ್, ಬದ್ರಿನಾಥ್, ಎಸ್.ಜೆ.ಉಮೇಶ, ನವೀನ್, ಪ್ರದೀಪ್ ಕುಮಾರ್, ಜಿ.ಬಿ.ಮಂಜುನಾಥ್, ಸಿ.ಎಸ್.ಹನುಮಂತರಾಜು, ರುದ್ರೇಶ್, ದರ್ಶನ್, ಅರುಣ್ ಕುಮಾರ್, ಮಲ್ಲೇಶಯ್ಯ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.