
ತುಮಕೂರು: ಕೊರಟಗೆರೆ ತಾಲ್ಲೂಕಿನ ಗಂಗೇನಹಳ್ಳಿ, ಲಿಂಗದವೀರನಹಳ್ಳಿ, ಮಾದೇನಹಳ್ಳಿ ಗ್ರಾಮಸ್ಥರು ಕೆಎಸ್‌ಆರ್‌ಟಿಸಿ ಬಸ್ ಹತ್ತಲು ತಮ್ಮೂರಿನಿಂದ 10ಕ್ಕೂ ಹೆಚ್ಚು ಕಿಲೊ ಮೀಟರ್ ದೂರದಲ್ಲಿರುವ ಹೋಬಳಿ ಕೇಂದ್ರಕ್ಕೆ ಬರಬೇಕು. ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿಯ ವೆಂಗಳಮ್ಮನಹಳ್ಳಿ, ತಿಮ್ಮಸಂದ್ರ ಜನರ ಸ್ಥಿತಿಯೂ ಹೀಗೆ ಇದೆ. ಆಟೊ ಹತ್ತಿಕೊಂಡು 10 ಕಿ.ಮೀ ಸಾಗಿದರೆ ಮಾತ್ರ ಬಸ್ ಸಿಗುತ್ತದೆ...
ಇದು ಕೆಲ ಹಳ್ಳಿಗಳ ಉದಾಹರಣೆಯಷ್ಟೇ... ಜಿಲ್ಲೆಯಲ್ಲಿ ಇಂತಹ ನೂರಾರು ಹಳ್ಳಿಗಳು ಕಾಣ ಸಿಗುತ್ತವೆ. ಗ್ರಾಮೀಣ ಪ್ರದೇಶದ ರಸ್ತೆಗಳು ಇಂದಿಗೂ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಕಂಡಿಲ್ಲ. ಈ ಭಾಗದ ಜನರಿಗೆ ಸರ್ಕಾರಿ ಬಸ್ ಕನಸಾಗಿಯೇ ಉಳಿದಿದೆ. ಹಳ್ಳಿಯ ಜನರು ನಗರದ ಕಡೆಗೆ ಬರಬೇಕಾದರೆ ಹತ್ತಾರು ಕಿ.ಮೀ ಆಟೊದಲ್ಲಿ ಪ್ರಯಾಣಿಸಬೇಕು.
ಜಿಲ್ಲೆಯಲ್ಲಿ ಇವತ್ತಿಗೂ 126 ಗ್ರಾಮಗಳಿಗೆ ಕೆಎಸ್‌ಆರ್‌ಟಿಸಿ ಬಸ್ ಹೋಗುವುದಿಲ್ಲ. ಜಿಲ್ಲಾ ಕೇಂದ್ರದಿಂದ 25 ಕಿ.ಮೀ ದೂರದಲ್ಲಿರುವ ಕೊರಟಗೆರೆ ತಾಲ್ಲೂಕಿನ 44 ಹಳ್ಳಿಗಳಿಗೆ ಬಸ್ ಸಂಚಾರವಿಲ್ಲ. ಗೃಹ ಸಚಿವರ ಸ್ವಕ್ಷೇತ್ರದ ಸ್ಥಿತಿ ಹೀಗಿದೆ. ಚಿಕ್ಕನಾಯಕನಹಳ್ಳಿಯ 22, ಮಧುಗಿರಿಯ 21 ಗ್ರಾಮಗಳಿಗೆ ಸಂಪರ್ಕ ಕಲ್ಪಿಸಿಲ್ಲ.
ಈ ಗ್ರಾಮಗಳ ಪೈಕಿ ಬಹುತೇಕ ಕಡೆಗಳಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ಅಗತ್ಯ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ. ಇಲ್ಲಿಂದ ನಿತ್ಯ ನೂರಾರು ಮಂದಿ ಶಾಲಾ–ಕಾಲೇಜು ವಿದ್ಯಾರ್ಥಿಗಳು ನಗರದ ಕಡೆಗೆ ಹೆಜ್ಜೆ ಹಾಕುತ್ತಾರೆ. ನಾನಾ ಕಾರ್ಯದ ನಿಮಿತ್ತ ನಗರ ಸೇರಿ ವಿವಿಧ ಕಡೆಗಳಿಗೆ ಹೋಗುವವರ ಸಂಖ್ಯೆಯೂ ಹೆಚ್ಚಿದೆ. ಬಸ್‌ಗಳು ಮಾತ್ರ ಇತ್ತ ಸುಳಿಯುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಬಸ್ ಮಾಲೀಕರು ಹಳ್ಳಿ ಹಳ್ಳಿಗೂ ಬಸ್‌ಗಳನ್ನು ತಲುಪಿಸುತ್ತಿದ್ದಾರೆ.
2,443 ಹಳ್ಳಿಯಲ್ಲಿ ಬಸ್ ಓಡಾಟ: ಪ್ರಸ್ತುತ ಜಿಲ್ಲೆಯ 2,443 ಗ್ರಾಮಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಓಡಾಡುತ್ತಿವೆ. 7 ಡಿಪೊಗಳು ತುಮಕೂರು ವಿಭಾಗದ ವ್ಯಾಪ್ತಿಗೆ ಸೇರುತ್ತವೆ. ತುಮಕೂರು 1 ಮತ್ತು 2, ತಿಪಟೂರು, ತುರುವೇಕೆರೆ, ಕುಣಿಗಲ್, ಮಧುಗಿರಿ ಮತ್ತು ಶಿರಾ ಡಿಪೊ. ಒಟ್ಟು 711 ಕೆಎಸ್‌ಆರ್‌ಟಿಸಿ ಬಸ್‌ಗಳಿವೆ. ಕಳೆದ ವರ್ಷ ಹೊಸದಾಗಿ 95 ಬಸ್‌ಗಳು ಸೇರ್ಪಡೆಯಾಗಿವೆ. ಈ ಪೈಕಿ 65 ಅಶ್ವಮೇಧ ಬಸ್.
ನಗರದಲ್ಲಿ 60 ಬಸ್‌ಗಳು ಸಂಚರಿಸುತ್ತಿವೆ. ಬೆಳಿಗ್ಗೆ ಮತ್ತು ಸಂಜೆಯ ಸಮಯದಲ್ಲಿ ವಿದ್ಯಾರ್ಥಿಗಳ, ಪ್ರಯಾಣಿಕರ ಸಂಖ್ಯೆ ಜಾಸ್ತಿ ಇರುತ್ತದೆ. ಅತಿವೇಗವಾಗಿ ಬೆಳೆಯುತ್ತಿರುವ ನಗರಕ್ಕೆ ಇಷ್ಟು ಬಸ್‌ಗಳು ಸಾಲುತ್ತಿಲ್ಲ. ತುಂಬಿದ ಬಸ್‌ನಲ್ಲಿ ವಿದ್ಯಾರ್ಥಿಗಳು ಬಾಗಿಲು ಬಳಿ ಜೋತಾಡಿಕೊಂಡು ಹೋಗಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.
ರಸ್ತೆ ಸಂಪರ್ಕ ಸಮರ್ಪಕವಾಗಿ ಇಲ್ಲದ ಬೇಡಿಕೆ ಕಡಿಮೆ ಇರುವ ಭಾಗದಲ್ಲಿ ಬಸ್ ಓಡಾಟ ಸಾಧ್ಯವಿಲ್ಲ. ಬಹುತೇಕ ಗ್ರಾಮಗಳಿಗೆ ಸಂಚಾರದ ವ್ಯವಸ್ಥೆ ಇದೆಎಸ್.ಚಂದ್ರಶೇಖರ್ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ
ಶಕ್ತಿ ನಂತರ ಬೇಡಿಕೆ
ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿದ ನಂತರ ಬಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಬಸ್‌ಗಳು ಸದಾ ಪ್ರಯಾಣಿಕರಿಂದ ತುಂಬಿರುತ್ತವೆ. ಸರ್ಕಾರ ಬೇಡಿಕೆಗೆ ಅನುಗುಣವಾಗಿ ಬಸ್ ಸಂಖ್ಯೆ ಹೆಚ್ಚಿಸಿಲ್ಲ. ಕೋವಿಡ್ ಸಮಯದಲ್ಲಿ ಒಂದಷ್ಟು ಮಾರ್ಗದ ಬಸ್ ಸಂಪರ್ಕ ಕಡಿತಗೊಳಿಸಲಾಯಿತು. ಜನರ ಓಡಾಟ ಕಡಿಮೆ ಇರುವ ಕಡೆ ಬಸ್ ಸಂಚಾರ ನಿಲ್ಲಿಸಲಾಯಿತು. ಮತ್ತೆ ಈ ಮಾರ್ಗದ ರಸ್ತೆಗಳಲ್ಲಿ ಬಸ್ ಸಂಚರಿಸಲಿಲ್ಲ. ವಿದ್ಯಾರ್ಥಿಗಳು ಸಾರ್ವಜನಿಕರು ಆಟೊ ಖಾಸಗಿ ಬಸ್‌ಗಳನ್ನೇ ನೆಚ್ಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.