
ಪಾವಗಡ: ತಾಲ್ಲೂಕಿನ ಕೆ.ಟಿ. ಹಳ್ಳಿ ಗ್ರಾಮದಲ್ಲಿ ಅನಗತ್ಯವಾಗಿ ಗ್ರಾಮಸ್ಥರ ಮೇಲೆ ಪೊಲೀಸರು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಬುಧವಾರ ತಡರಾತ್ರಿ ಅರಸೀಕೆರೆ ಪೊಲೀಸ್ ಠಾಣೆ ಮುಂಭಾಗ ಧರಣಿ ನಡೆಸಿದರು.
ಬುಧವಾರ ರಾತ್ರಿ ಹೊಸ ವರ್ಷದ ಪ್ರಯುಕ್ತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಏಕಾಏಕಿ ಗ್ರಾಮಕ್ಕೆ ಬಂದ ಸಬ್‌ಇನ್‌ಸ್ಪೆಕ್ಟರ್ ಯುವ ಜನತೆ, ಗ್ರಾಮಸ್ಥರನ್ನು ಏಕ ವಚನದಿಂದ ನಿಂದಿಸಿದ್ದಾರೆ. ಪ್ರಕರಣ ದಾಖಲಿಸಿ ಒಳಗೆ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಗ್ರಾಮದ ದಿನೇಶ್ ಮಾತನಾಡಿ, ಹಲವು ದಿನಗಳಿಂದ ಕೆ.ಟಿ. ಹಳ್ಳಿ ಗ್ರಾಮವನ್ನು ಅರಸೀಕೆರೆ ಠಾಣಾ ಪೊಲೀಸ್ ಅಧಿಕಾರಿಗಳು ಗುರಿಯಾಗಿಸಿಕೊಂಡು ಹಿಂಸೆ ನೀಡುತ್ತಿದ್ದಾರೆ. ಇವರಿಗೆ ಈ ರೀತಿ ಮಾಡಿ ಎಂದು ಯಾರಾದರೂ ಹೇಳಿದ್ದಾರೆಯೇ ಅಥವಾ ಇವರೇ ಗ್ರಾಮಸ್ಥರನ್ನು ಗುರಿಯಾಗಿಸಿಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದರು.
ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ರಂಗಸ್ವಾಮಿ, ಕೆಂಪೇಗೌಡ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮದ ಹಿನ್ನೆಲೆ ಅಂದು ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ತಡೆದು ಠಾಣೆಗೆ ಕರೆತರಲಾಗಿತ್ತು. ಎಲ್ಲ ಸಮುದಾಯದವರು ಒಗ್ಗಟ್ಟಿನಿಂದ ಯಾರಿಗೂ ತೊಂದರೆಯಾಗದಂತೆ ಕಾರ್ಯಕ್ರಮ ನಡೆಸುತ್ತೇವೆ. ಆದರೆ ಪದೇ ಪದೇ ಗ್ರಾಮಸ್ಥರಿಗೆ ಪೊಲೀಸರು ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಕೆಂಪೇಗೌಡ ಯುವಕರ ಸಂಘದ ಸದಸ್ಯ ಸಿದ್ದೇಶ್, ಯಾವುದೇ ಕಾರ್ಯಕ್ರಮ ನಡೆಸಲು ಪೊಲೀಸರು ಬಿಡುತ್ತಿಲ್ಲ. ನೆರೆ ಹೊರೆಯ ಗ್ರಾಮಗಳಿಗೆ ಅವಕಾಶ ನೀಡಿದರೂ ನಮ್ಮ ಗ್ರಾಮದಲ್ಲಿ ಯಾವುದೇ ಕಾರ್ಯಕ್ರಮ ನಡೆಯಲು ಬಿಡುತ್ತಿಲ್ಲ. ಹೀಗಾಗಿ ತಡ ರಾತ್ರಿಯಿಂದ ಪೊಲೀಸ್ ಠಾಣೆ ಮುಂಭಾಗ ಶಾಂತಿಯುತ ಧರಣಿ ನಡೆಸಲಾಗುತ್ತಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.