ADVERTISEMENT

ತುಮಕೂರು | ಸಕ್ಕರೆ, ತೊಗರಿ ಬೇಳೆ ದುಬಾರಿ; ಇಳಿಯುತ್ತಲೇ ಇದೆ ತರಕಾರಿ, ಸೊಪ್ಪು

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2025, 6:01 IST
Last Updated 9 ಫೆಬ್ರುವರಿ 2025, 6:01 IST
ಸಕ್ಕರೆ
ಸಕ್ಕರೆ   

ತುಮಕೂರು: ಸೊಪ್ಪಿನ ಬೆಲೆ ಪಾತಾಳ ಕಂಡಿದ್ದರೆ, ತರಕಾರಿ ಮತ್ತಷ್ಟು ಅಗ್ಗವಾಗಿದೆ. ಸಕ್ಕರೆ, ತೊಗರಿ ಬೇಳೆ, ಹಣ್ಣು ಇನ್ನಷ್ಟು ದುಬಾರಿಯಾಗಿದ್ದು, ಕೋಳಿ ಮಾಂಸದ ದರ ಇಳಿಕೆಯಾಗಿದೆ.

ಕಳೆದ ಒಂದು ತಿಂಗಳಿಂದ ಇಳಿಕೆಯತ್ತ ಮುಖ ಮಾಡಿರುವ ತರಕಾರಿ, ಈ ವಾರವೂ ಅದೇ ದಾರಿಯಲ್ಲಿ ಸಾಗಿದೆ. ಬೀನ್ಸ್, ಬೀಟ್ರೂಟ್, ಗಡ್ಡೆಕೋಸು, ಬೆಂಡೆಕಾಯಿ, ಬದನೆಕಾಯಿ, ಮೆಣಸಿನ ಕಾಯಿ, ಕ್ಯಾಪ್ಸಿಕಂ ಇಳಿಕೆಯಾಗಿದೆ. ಆಲೂಗಡ್ಡೆ, ಎಲೆಕೋಸು, ತೊಂಡೆಕಾಯಿ ತುಸು ಹೆಚ್ಚಳ ಕಂಡಿದೆ.

ಬೆಳ್ಳುಳ್ಳಿ ಮತ್ತೆ ಕೆ.ಜಿಗೆ ₹20ರಿಂದ 30ರ ವರೆಗೆ ತಗ್ಗಿದೆ. ಬಹುತೇಕ ಯಥಾಸ್ಥಿತಿ ಕಾಯ್ದುಕೊಂಡಿದ್ದ ಈರುಳ್ಳಿ ಕೆ.ಜಿಗೆ ₹10 ದುಬಾರಿಯಾಗಿದೆ. ಸೌತೆಕಾಯಿ ಸಾಕಷ್ಟು ಅಗ್ಗವಾಗಿದ್ದು, ನಿಂಬೆಹಣ್ಣು ಏರಿಕೆಯತ್ತ ಮುಖ ಮಾಡಿದೆ.

ADVERTISEMENT

ಸೊಪ್ಪು ಮತ್ತಷ್ಟು ಅಗ್ಗ: ಪಾತಾಳ ಕಂಡಿರುವ ಸೊಪ್ಪಿನ ದರ ಮೇಲೇಳುತ್ತಿಲ್ಲ. ಕಳೆದ ಎರಡು ತಿಂಗಳಿಂದಲೂ ಇದೇ ಸ್ಥಿತಿಯಲ್ಲಿ ಮುಂದುವರಿದಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹15–20, ಸಬ್ಬಕ್ಕಿ ಸೊಪ್ಪು ಕೆ.ಜಿ ₹15–20, ಮೆಂತ್ಯ ಸೊಪ್ಪು ಕೆ.ಜಿ ₹20–25, ಪಾಲಕ್ ಸೊಪ್ಪು (ಕಟ್ಟು) ₹30ಕ್ಕೆ ಮಾರಾಟವಾಗುತ್ತಿದೆ.

ಸೇಬು ಅಲ್ಪ ಇಳಿಕೆ: ಹಣ್ಣುಗಳು ದುಬಾರಿಯಾಗಿದ್ದರೂ ಈ ವಾರ ಸೇಬು ಕೆ.ಜಿಗೆ ₹50 ಕಡಿಮೆಯಾಗಿದೆ. ಕಿತ್ತಳೆ, ಸೀಬೆ, ಕಲ್ಲಂಗಡಿ ಹಣ್ಣು ಕೊಂಚ ಇಳಿದಿದೆ. ಉಳಿದ ಹಣ್ಣುಗಳ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸ ಕಾಣುತ್ತಿಲ್ಲ.

ಅಡುಗೆ ಎಣ್ಣೆ: ಅಡುಗೆ ಎಣ್ಣೆ ಧಾರಣೆಯಲ್ಲಿ ಕೆಲವು ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಗೋಲ್ಡ್‌ವಿನ್ನರ್ ಒಮ್ಮೆಲೆ ಕೆ.ಜಿಗೆ 15ರ ವರೆಗೂ ಏರಿಕೆ ದಾಖಲಿಸಿದ್ದು, ಕೆ.ಜಿ ₹158–160ಕ್ಕೆ ಜಿಗಿದಿದೆ. ಪಾಮಾಯಿಲ್ ಕೆ.ಜಿ ₹126–128, ಕಡಲೆಕಾಯಿ ಎಣ್ಣೆ ಕೆ.ಜಿ ₹160–162ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಸಿಗುತ್ತಿದೆ.

ಸಕ್ಕರೆ ದುಬಾರಿ: ಮೂರು ವಾರಗಳಿಂದ ಏರಿಕೆಯತ್ತ ಮುಖ ಮಾಡಿರುವ ಸಕ್ಕರೆ, ಮತ್ತೆ ದುಬಾರಿಯಾಗಿದ್ದು, ಕೆ.ಜಿ 43ಕ್ಕೆ ತಲುಪಿದೆ. ಹಿಂದಿನ ವಾರ ಇಳಿಕೆಯಾಗಿದ್ದ ತೊಗರಿ ಬೇಳೆ ಒಮ್ಮೆಲೆ ಕೆ.ಜಿಗೆ ₹10–15 ಹೆಚ್ಚಳವಾಗಿದೆ. ಬಟಾಣಿ ಕೆ.ಜಿ ₹210ಕ್ಕೆ ಮುಟ್ಟಿದ್ದು, ಹುರಿಗಡಲೆಯೂ ಏರಿಕೆಯಾಗಿದೆ. ಕಡಲೆ ಬೇಳೆ, ಉದ್ದಿನ ಬೇಳೆ, ಕಡಲೆ ಕಾಳು, ಅಲಸಂದೆ ಅಗ್ಗವಾಗಿದೆ.

ಮಸಾಲೆ ಪದಾರ್ಥ: ಕೆಲವು ಮಸಾಲೆ ಪದಾರ್ಥಗಳ ಧಾರಣೆ ತುಸು ತಗ್ಗಿದ್ದು, ಜೀರಿಗೆ, ಚಕ್ಕೆ, ಲವಂಗ ಅಲ್ಪ ಇಳಿಕೆಯಾಗಿದೆ. ಏಲಕ್ಕಿ ಮತ್ತಷ್ಟು ದುಬಾರಿಯಾಗಿದೆ.

ದನಿಯಾ ಕೆ.ಜಿ ₹110–125, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹200–220, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹160–170, ಹುಣಸೆಹಣ್ಣು ₹120–130, ಬೆಲ್ಲ ಕೆ.ಜಿ ₹45–55, ಕಾಳುಮೆಣಸು ಕೆ.ಜಿ ₹700–720, ಜೀರಿಗೆ ಕೆ.ಜಿ ₹280–290, ಚಕ್ಕೆ ಕೆ.ಜಿ ₹250–260, ಲವಂಗ ಕೆ.ಜಿ ₹780–820, ಗುಣಮಟ್ಟದ ಗಸಗಸೆ ಕೆ.ಜಿ ₹1,250–1,300, ಏಲಕ್ಕಿ ಕೆ.ಜಿ ₹3,400–3,600, ಬಾದಾಮಿ ಕೆ.ಜಿ ₹800–840, ಗೋಡಂಬಿ ಕೆ.ಜಿ ₹820–950, ಒಣದ್ರಾಕ್ಷಿ ಕೆ.ಜಿ ₹230–250ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ಇಳಿಕೆ: ಕೋಳಿ ಮಾಂಸದ ಬೆಲೆ ಮತ್ತೆ ಇಳಿಕೆಯಾಗಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹110, ರೆಡಿ ಚಿಕನ್ ಕೆ.ಜಿ ₹180, ಸ್ಕಿನ್‌ಲೆಸ್ ಕೆ.ಜಿ ₹200, ಮೊಟ್ಟೆಕೋಳಿ (ಫಾರಂ) ಕೆ.ಜಿ ₹110ಕ್ಕೆ ಸಿಗುತ್ತಿದೆ.

ಮೀನು: ಈ ವಾರ ಮೀನಿನ ದರವೂ ಕಡಿಮೆಯಾಗಿದೆ. ಬಂಗುಡೆ ಕೆ.ಜಿ ₹230, ಬೊಳಿಂಜರ್ ಕೆ.ಜಿ ₹220, ಅಂಜಲ್ ಕೆ.ಜಿ ₹740, ಬಿಳಿಮಾಂಜಿ ಕೆ.ಜಿ ₹1,260, ಕಪ್ಪುಮಾಂಜಿ ಕೆ.ಜಿ ₹720, ಇಂಡಿಯನ್ ಸಾಲ್ಮನ್ ಕೆ.ಜಿ ₹940, ಸೀಗಡಿ ಕೆ.ಜಿ ₹510–780, ಏಡಿ ಕೆ.ಜಿ ₹680ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.