ADVERTISEMENT

ತುಮಕೂರು | ಆರೈಕೆ ಮಾಡದ ಮಕ್ಕಳು: ಆಸ್ತಿ ಹಿಂಪಡೆದ ತಾಯಿ

ದಾನಪತ್ರ ರದ್ದು ಪಡಿಸಿ ನ್ಯಾಯಾಲಯ ಆದೇಶ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 5:25 IST
Last Updated 24 ನವೆಂಬರ್ 2025, 5:25 IST
<div class="paragraphs"><p>ನ್ಯಾಯಾಲಯ</p></div>

ನ್ಯಾಯಾಲಯ

   

(ಸಾಂದರ್ಭಿಕ ಚಿತ್ರ)

ತುಮಕೂರು: ವೃದ್ಧಾಪ್ಯದಲ್ಲಿ ಆರೈಕೆ ಮಾಡದೆ, ನಿರ್ಲಕ್ಷ್ಯ ತೋರಿದ ಮಕ್ಕಳಿಂದ ತಾಯಿ ಆಸ್ತಿ ವಾಪಸ್‌ ಪಡೆದಿದ್ದಾರೆ. ಕಾನೂನು ಹೋರಾಟದ ಮೂಲಕ ಜಮೀನು ಹಿಂಪಡೆದಿದ್ದಾರೆ.

ADVERTISEMENT

ಪೋಷಕರ ಆರೈಕೆ ಮಾಡದ, ಕನಿಷ್ಠ ಸೌಲಭ್ಯ ಕಲ್ಪಿಸದ ಮಕ್ಕಳಿಗೆ ನೀಡಿದ್ದ ದಾನಪತ್ರ ರದ್ದು ಪಡಿಸಿ ಉಪವಿಭಾಗಾಧಿಕಾರಿ ನ್ಯಾಯಾಲಯ ಈಚೆಗೆ ಆದೇಶ ಹೊರಡಿಸಿದೆ.

ಗುಬ್ಬಿ ತಾಲ್ಲೂಕಿನ ಹಾಗಲವಾಡಿ ಹೋಬಳಿ ಮಠ ಗ್ರಾಮದ ರಂಗಮ್ಮ ತಮ್ಮ ಹೆಸರಿನಲ್ಲಿದ್ದ 3 ಎಕರೆ 26 ಗುಂಟೆ ಜಮೀನನ್ನು ಮಕ್ಕಳಾದ ಗುಜ್ಜಾರಪ್ಪ, ಶಿವಣ್ಣ ಮತ್ತು ಹನುಮಂತಯ್ಯ ಅವರಿಗೆ ನೋಂದಣಿ ದಾನಪತ್ರದ ಮೂಲಕ ವರ್ಗಾವಣೆ ಮಾಡಿದ್ದರು.

‘ಆಸ್ತಿ ಪಡೆದ ನಂತರ ಮಕ್ಕಳು ನನ್ನ ಮತ್ತು ನಮ್ಮ ಯಜಮಾನರನ್ನು ಆರೈಕೆ ಮಾಡುತ್ತಿಲ್ಲ. ವೃದ್ಧಾಪ್ಯದಿಂದ ನರಳುತ್ತಿರುವ ನಮಗೆ ಆಹಾರ, ಚಿಕಿತ್ಸಾ ನೆರವು, ಮೂಲಭೂತ ಸೌಲಭ್ಯ ಕಲ್ಪಿಸುತ್ತಿಲ್ಲ. ಮಾನಸಿಕ ಹಿಂಸೆ ನೀಡುತ್ತಿದ್ದು, ದಾನಪತ್ರ ರದ್ದು ಪಡಿಸಬೇಕು’ ಎಂದು ರಂಗಮ್ಮ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಕಚೇರಿಯಲ್ಲಿ ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣಾ ಕಾಯ್ದೆಯಡಿ ಮನವಿ ಸಲ್ಲಿಸಿದ್ದರು.

‘ಮಕ್ಕಳು ನನ್ನ ಕಷ್ಟ–ಸುಖಗಳಿಗೆ ಸ್ಪಂದಿಸುತ್ತಿದ್ದು, ನಿರಂತರ ಆರೈಕೆಯ ನಂಬಿಕೆಯಿಂದ ದಾನ ಮಾಡಲಾಗಿದೆ’ ಎಂದು ದಾನಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಆಸ್ತಿ ಪಡೆದ ನಂತರ ಮಕ್ಕಳು ಈ ಷರತ್ತು ಪಾಲಿಸದಿರುವುದು ಪರಿಶೀಲನೆ ವೇಳೆ ದೃಢಪಟ್ಟಿತ್ತು. ಸಹಾಯವಾಣಿ ಕೇಂದ್ರದ ಹಿರಿಯ ಸಮನ್ವಯಾಧಿಕಾರಿ ತುಮಕೂರು ಉಪವಿಭಾಗಾಧಿಕಾರಿ ಮತ್ತು ನಿರ್ವಹಣಾ ನ್ಯಾಯ ಮಂಡಳಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು.

ಉಪವಿಭಾಗಾಧಿಕಾರಿ, ನ್ಯಾಯ ಮಂಡಳಿಯ ಅಧ್ಯಕ್ಷೆ ನಾಹಿದಾ ಜಮ್ ಜಮ್‌ ಅವರು ಪ್ರಕರಣದ ವಿಚಾರಣೆ ನಡೆಸಿದರು. ಮೂವರು ಮಕ್ಕಳು ಪೋಷಕರನ್ನು ಆರೈಕೆ ಮಾಡದಿರುವುದು ಖಚಿತ ಪಟ್ಟಿದ್ದು, ದಾನಪತ್ರ ರದ್ದು ಪಡಿಸಿ ಆದೇಶಿಸಿದ್ದಾರೆ. 2021ರ ಡಿ. 23ರಂದು ನೀಡಿರುವ ದಾನಪತ್ರ ಶೂನ್ಯ ಹಾಗೂ ನಿರರ್ಥಕ ಎಂದು ಆದೇಶದಲ್ಲಿ ತಿಳಿಸಿದ್ದಾರೆ. ರಂಗಮ್ಮ ಹೆಸರಿಗೆ ಜಮೀನಿನ ಪಹಣಿ ಬದಲಿಸುವಂತೆ ಗುಬ್ಬಿ ತಹಶೀಲ್ದಾರರಿಗೆ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.