
ತುಮಕೂರು: ರಾಜ್ಯ ಸರ್ಕಾರವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದು, ಅಂತಹ ಶಾಲೆಗಳಲ್ಲಿ ಕನ್ನಡ ಭಾಷೆಯ ಅನುಷ್ಠಾನ ಕಷ್ಟಕರವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಇಲ್ಲಿ ಶುಕ್ರವಾರ ವಿಷಾದಿಸಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರಕ್ಕೆ ಹಿಡಿತ ಇಲ್ಲವಾಗಿದೆ. ಸರ್ಕಾರದ ಹಿಡಿತದಲ್ಲಿ ಇರಬೇಕಾದ ಸಂಸ್ಥೆಗಳು ಸರ್ಕಾರವನ್ನು ನಿಯಂತ್ರಿಸುತ್ತಿವೆ. ಹಾಗಾಗಿ ಖಾಸಗಿ ಶಾಲೆಗಳಲ್ಲಿ ಕನ್ನಡ ಭಾಷೆ ಅನುಷ್ಠಾನ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಿಶ್ವವಿದ್ಯಾಲಯಗಳ ಹಂತದಲ್ಲಿ ಹಾಗೂ ಉನ್ನತ ಶಿಕ್ಷಣಕ್ಕೆ ಪೂರಕವಾದ ಪಠ್ಯವನ್ನು ಕನ್ನಡದಲ್ಲಿ ರಚಿಸಿದರೆ ಅದನ್ನು ಪ್ರಾಧಿಕಾರ ಅಥವಾ ಇತರ ಸಂಸ್ಥೆಗಳ ಮೂಲಕ ಮುದ್ರಿಸಲಾಗುವುದು. ₹500 ಕೋಟಿ ಇಡುಗಂಟು ನೀಡಿ, ಅದರಲ್ಲಿ ಬರುವ ಬಡ್ಡಿ ಹಣವನ್ನು ಬಳಸಿಕೊಂಡು ನಿರ್ವಹಣೆ ಮಾಡುವ ‘ಅನುದಾನ ಕೇಂದ್ರ’ ಆರಂಭಿಸಬೇಕು. ಈ ಕೇಂದ್ರದ ಮೂಲಕ ಜಗತ್ತಿನ ಇತರೆ ಭಾಷೆಗಳ ಜ್ಞಾನ ಭಂಡಾರವನ್ನು ಕನ್ನಡಕ್ಕೆ ಅನುವಾದಿಸುವ ಕೆಲಸ ಮಾಡುವಂತೆ ಸರ್ಕಾರಕ್ಕೆ ಸಲಹೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಕನ್ನಡಪರ ಸಂಘಟನೆಗಳ ಪ್ರಮುಖರು, ಹೋರಾಟಗಾರರ ಜತೆ ಸಮಾಲೋಚನೆ ನಡೆಸಲಾಯಿತು. ಜಿಲ್ಲಾಧಿಕಾರಿ, ವಿಶ್ವವಿದ್ಯಾಲಯದಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ಪರಿಶೀಲನೆ ನಡೆಸಲಾಯಿತು. ಜಿಲ್ಲೆಯಲ್ಲಿ ಕನ್ನಡ ಅನುಷ್ಠಾನಕ್ಕೆ ಅಧಿಕಾರಿಗಳು ಆಸಕ್ತಿಯಿಂದ ಕೆಲಸ ಮಾಡಿದಂತೆ ಕಂಡುಬರಲಿಲ್ಲ. ತಮಗೆ ಶಿಕ್ಷೆ ನೀಡುವ ಅಧಿಕಾರ ಇಲ್ಲ. ಆದರೆ ಈ ಬಗ್ಗೆ ಸೂಚನೆ ನೀಡಲಾಗಿದೆ ಎಂದರು.
2022 ಸಮಗ್ರ ಕನ್ನಡ ಅನುಷ್ಠಾನ ಅಧಿನಿಯಮ ಕೆಲವೇ ತಿಂಗಳಲ್ಲಿ ಜಾರಿಗೆ ಬರಲಿದೆ. ಇದು ಜಾರಿಯಾದರೆ ನಿಯಮ ಉಲ್ಲಂಘಿಸುವ ಹಾಗೂ ಕನ್ನಡ ಅನುಷ್ಠಾನ ಮಾಡದ ಅಧಿಕಾರಿ, ನೌಕರರಿಗೆ ಶಿಕ್ಷೆ ವಿಧಿಸಬಹುದಾಗಿದೆ. ಈಗ ಶಿಕ್ಷೆಯ ಭಯವಿಲ್ಲದೆ ಕನ್ನಡ ಅನುಷ್ಠಾನದಲ್ಲಿ ತಾತ್ಸಾರ ತೋರುತ್ತಾರೆ ಎಂದು ಹೇಳಿದರು.
ಕನ್ನಡಪರ ಹೋರಾಟಗಾರರು ಹಾಗೂ ಜಿಲ್ಲಾಧಿಕಾರಿ ನಡುವೆ ಅಂತರ ಇರುವುದು, ಹೋರಾಟಗಾರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಸಭೆ ನಡೆದ ಸಮಯದಲ್ಲಿ ಕಂಡು ಬಂತು. ಜಿಲ್ಲಾಧಿಕಾರಿ ವಿರುದ್ಧ ಹೋರಾಟಗಾರರು ದೂರು ಸಲ್ಲಿಸಿದ್ದಾರೆ. ಈ ವಿಚಾರವನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದಿದ್ದು, ಸರಿಪಡಿಸಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಕನ್ನಡದ ಪರವಾಗಿ ಹೋರಾಟ ನಡೆಸಿದವರ ಮೇಲೆ ದಾಖಲಾಗಿರುವ ದೂರಿನ ವಿವರಗಳನ್ನು ನೀಡುವಂತೆ ನಿರ್ದೇಶಿಸಲಾಗಿದೆ ಎಂದು ತಿಳಿಸಿದರು.
ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ, ಸದಸ್ಯ ರವಿಕುಮಾರ್ ನೀಹ ಇತರರು ಉಪಸ್ಥಿತರಿದ್ದರು.
ಬ್ಯಾಂಕ್‌ಗೆ ಕನ್ನಡ ಬಲ್ಲವರ ನೇಮಕ
ರಾಷ್ಟ್ರೀಕೃತ ಬ್ಯಾಂಕ್‌ಗಳ ಎಲ್ಲ ಶಾಖೆಯಲ್ಲಿ ಕನ್ನಡ ಭಾಷೆ ಗೊತ್ತಿರುವ ಒಬ್ಬರನ್ನು ಕಡ್ಡಾಯವಾಗಿ ನೇಮಕ ಮಾಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ ಎಂದು ಪುರುಷೋತ್ತಮ ಬಿಳಿಮಲೆ ಹೇಳಿದರು. ಈ ಸಂಬಂಧ ಲೀಡ್ ಬ್ಯಾಂಕ್ (ಎಸ್‌ಬಿಐ) ಅಧಿಕಾರಿಗೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಇದು ಜಾರಿಗೆ ಬರಲಿದೆ. ಇದರಿಂದ ಬ್ಯಾಂಕ್‌ಗಳಲ್ಲಿ ನಡೆಯುವ ಸಂಘರ್ಷ ಕಡಿಮೆಯಾಗಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.