ADVERTISEMENT

ರಾಜಣ್ಣ ವಿರುದ್ಧದ ಪ್ರತಿಭಟನೆ: ಚಲವಾದಿ ಮಹಾಸಭಾ ಬೆಂಬಲ

12ರಂದು ಡಾ.ಜಿ.ಪರಮೇಶ್ವರ ಅಭಿಮಾನಿ ಬಳಗ ನಡೆಸಲಿರುವ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2019, 13:58 IST
Last Updated 8 ಜೂನ್ 2019, 13:58 IST
ಶನಿವಾರ ತುಮಕೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆದ ಚಲವಾದಿ ಮಹಾಸಭಾ ಸಭೆಯಲ್ಲಿ ಪಾಲ್ಗೊಂಡಿದ್ದ ಸಮುದಾಯದ ಮುಖಂಡರು
ಶನಿವಾರ ತುಮಕೂರಿನ ಖಾಸಗಿ ಹೊಟೇಲ್‌ನಲ್ಲಿ ನಡೆದ ಚಲವಾದಿ ಮಹಾಸಭಾ ಸಭೆಯಲ್ಲಿ ಪಾಲ್ಗೊಂಡಿದ್ದ ಸಮುದಾಯದ ಮುಖಂಡರು   

ತುಮಕೂರು: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅಭಿಮಾನಿ ಬಳಗವು ಜೂನ್ 12ರಂದು ನಡೆಸಲುದ್ದೇಶಿಸಿದ ಹಿರಿಯ ಕಾಂಗ್ರೆಸ್ ಮುಖಂಡ, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರ ವಿರುದ್ಧದ ಪ್ರತಿಭಟನೆಗೆ ತುಮಕೂರು ಜಿಲ್ಲಾ ಚಲವಾದಿ ಮಹಾಸಭಾ ಬೆಂಬಲ ವ್ಯಕ್ತಪಡಿಸಿದೆ.

ಶನಿವಾರ ನಗರದ ಹೊಟೇಲ್‌ವೊಂದರಲ್ಲಿ ಪೂರ್ವಭಾವಿ ಸಭೆ ಸೇರಿದ್ದ ಸಮುದಾಯದ ಮುಖಂಡರು ರಾಜಣ್ಣ ಅವರ ಮೇಲೆ ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಸಮುದಾಯದ ನಾಯಕರಾದ ಡಾ.ಜಿ.ಪರಮೇಶ್ವರ ಅವರ ಬಗ್ಗೆ ಅವಹೇಳನಕಾರಿಯಾಗಿ ರಾಜಣ್ಣ ಮಾತನಾಡಿದ್ದಾರೆ. ಇದು ಇಡೀ ಸಮುದಾಯಕ್ಕೆ ಅಪಮಾನವಾಗಿದೆ. ಇದು ಯಾವುದೇ ಸಮುದಾಯದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯಲ್ಲ. ಬದಲಾಗಿ ಸರ್ವಾಧಿಕಾರಿ ಧೋರಣೆಯಿಂದ ಅತ್ಯಂತ ಹೇಯವಾಗಿ ಹೇಳಿಕೆ ನೀಡಿರುವ ಕೆ.ಎನ್.ರಾಜಣ್ಣ ಅವರ ವಿರುದ್ಧ ಮಾತ್ರ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ADVERTISEMENT

ಕೆ.ಎನ್.ರಾಜಣ್ಣ ಮತ್ತು ಡಾ.ಜಿ.ಪರಮೇಶ್ವರ ಅವರು ಅಪ್ತ ಸ್ನೇಹಿತರಿರಬಹುದು. ಅಂದ ಮಾತ್ರಕ್ಕೆ ಪರಮೇಶ್ವರ ಅವರ ಕುಟುಂಬದ ಬಗ್ಗೆ ಅದರಲ್ಲಿಯೂ ಅವರ ತಾಯಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಇಡೀ ಮನುಕುಲಕ್ಕೆ ಅಪಮಾನ ಮಾಡಿದಂತಾಗಿದೆ ಎಂದು ಹೇಳಿದರು.

ಈ ಹಿಂದೆ ಪ್ರತಿಭಟನೆಗೆ ಮುಂದಾಗಿದ್ದ ಕೆಲವರನ್ನು ಬೆದರಿಸಿದ್ದ ರಾಜಣ್ಣ ತಮ್ಮ ವಿರುದ್ಧ ಧಿಕ್ಕಾರ ಕೂಗಿದರೆ ನಾಲಿಗೆ ಸೀಳುವ ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲರೂ ಒಗ್ಗೂಡಿ, ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಮೂಲಕ ಡಾ.ಜಿ.ಪರಮೇಶ್ವರ್ ಅವರಿಗೆ ನೈತಿಕ ಬೆಂಬಲ ನೀಡಬೇಕಿದೆ ಎಂದು ಚಲವಾದಿ ಮಹಾಸಭಾ ಮುಖಂಡರು ಹೇಳಿದರು.

ಚಲವಾದಿ ಮಹಾಸಭಾ ಕಾರ್ಯದರ್ಶಿ ಸಿ.ಭಾನುಪ್ರಕಾಶ್, ಟಿ.ಆರ್.ನಾಗೇಶ್, ಬಿ.ಜಿ.ಲಿಂಗರಾಜು, ದಿನೇಶ್, ಪಿ.ಶಿವಾಜಿ, ಹೆಚ್.ಬಿ.ದೇವರಾಜು, ಪಿ.ಚಂದ್ರಪ್ಪ, ಎನ್.ಮೂರ್ತಿ, ವಕೀಲರಾದ ಕೃಷ್ಣಮೂರ್ತಿ, ರಘು, ಹೆಗ್ಗೆರೆ ಕೃಷ್ಣಪ್ಪ, ಇರಕಸಂದ್ರ ಜಗನ್ನಾಥ್, ನಾಗರಾಜು, ಮಾರುತಿ, ಎನ್.ಕೆ.ನಿಧಿಕುಮಾರ್‌, ಜಿ.ಆರ್.ಸುರೇಶ್,ಚಲವಾದಿಶೇಖರ್, ಜಿ.ಆರ್.ಗಿರೀಶ್, ಗೋವಿಂದರಾಜು, ಸಿದ್ದಲಿಂಗಪ್ಪ, ಪುಟ್ಟರಾಜು, ಚಿಕ್ಕ ಕೊರಟಗೆರೆ ಕುಮಾರ್, ಶಿವು, ಮಹದೇವು, ಶಂಕರಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.