ADVERTISEMENT

ತುಮಕೂರು: ಮೇಲ್ಮನೆಗೆ ರಾಜೇಂದ್ರ ಪ್ರವೇಶ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2021, 4:43 IST
Last Updated 15 ಡಿಸೆಂಬರ್ 2021, 4:43 IST
ತುಮಕೂರಿನಲ್ಲಿ ಮಂಗಳವಾರ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಕಾಂಗ್ರೆಸ್‌ನ ಆರ್. ರಾಜೇಂದ್ರ ಕಾರ್ಯಕರ್ತರಿಗೆ ನಮಿಸಿದರು
ತುಮಕೂರಿನಲ್ಲಿ ಮಂಗಳವಾರ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಕಾಂಗ್ರೆಸ್‌ನ ಆರ್. ರಾಜೇಂದ್ರ ಕಾರ್ಯಕರ್ತರಿಗೆ ನಮಿಸಿದರು   

ತುಮಕೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಆರ್. ರಾಜೇಂದ್ರ ಆಯ್ಕೆಯಾಗಿದ್ದು, ಮೇಲ್ಮನೆ ಪ್ರವೇಶಿಸಿದ್ದಾರೆ. ಮಂಗಳವಾರ ನಡೆದ ಮತ ಎಣಿಕೆಯಲ್ಲಿ ಗೆಲುವು ಸಾಧಿಸಿದ್ದಾರೆ.

ಸತತ ಎರಡನೇ ಪ್ರಯತ್ನದಲ್ಲಿ ರಾಜೇಂದ್ರ ಯಶಸ್ಸು ಕಂಡಿದ್ದಾರೆ. ಬಿಜೆಪಿಯ ಎನ್. ಲೋಕೇಶ್‌ಗೌಡ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರೆ, ಜೆಡಿಎಸ್‌ನ ಆರ್. ಅನಿಲ್ ಕುಮಾರ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.

ಕಳೆದ ಬಾರಿ ರಾಜೇಂದ್ರ ಸೋತ ನಂತರವೂ ಜನರ ಸಂಪರ್ಕದಲ್ಲಿದ್ದರು. ಒಂದು ವರ್ಷದಿಂದಲೇ ಪ್ರಚಾರ ಕಾರ್ಯ ಆರಂಭಿಸಿದ್ದು, ಅದರಲ್ಲಿ ಯಶಸ್ವಿಯಾಗಿದ್ದಾರೆ. ಬಿಬಿಎಂಪಿ ಮಾಜಿ ಸದಸ್ಯ ಲೋಕೇಶ್‌ಗೌಡ ಅವರನ್ನು ಬಿಜೆಪಿ ಮುಖಂಡರು ಕೊನೆ ಕ್ಷಣದಲ್ಲಿ ಅಭ್ಯರ್ಥಿಯನ್ನಾಗಿ ಮಾಡಿ ಕಣಕ್ಕಿಳಿಸಿದ್ದರು. ಜಿಲ್ಲೆಯ ರಾಜಕಾರಣಕ್ಕೆ ಹೊಸ ಮುಖ ಪರಿಚಯಿಸಿದರೂ ಆಡಳಿತಾರೂಢ ಬಿಜೆಪಿಗೆ ಅಧಿಕಾರದಕ್ಕಿಸಿಕೊಳ್ಳಲು ಸಾಧ್ಯವಾಗಿಲ್ಲ.

ADVERTISEMENT

ಕೆಎಎಸ್ ಅಧಿಕಾರಿಯಾಗಿದ್ದ ಅನಿಲ್ ಕುಮಾರ್, ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ವಿಧಾನ ಪರಿಷತ್ ಮೂಲಕ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಮುಂದಾಗಿದ್ದರು. ಕಳೆದ ಕೆಲ ತಿಂಗಳ ಹಿಂದೆಯೇ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿದ್ದರೂ, ಭ್ರಷ್ಟಾಚಾರ ಪ್ರಕರಣಗಳು ವಿಚಾರಣೆ ಹಂತದಲ್ಲಿ ಇದುದ್ದರಿಂದ ಅಂಗೀಕಾರ ಆಗಿರಲಿಲ್ಲ.

ದಳಪತಿಗಳು ಒತ್ತಡ ತಂದು ರಾಜೀನಾಮೆ ಅಂಗೀಕರಿಸುವಂತೆ ಮಾಡಿ ಕೊನೆ ಕ್ಷಣದಲ್ಲಿ ಚುನಾವಣೆಗೆ ನಿಲ್ಲಿಸಿದ್ದರು. ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ ತಂತ್ರಗಾರಿಕೆ ಫಲಿಸಿಲ್ಲ. ಸ್ಥಾನ ಉಳಿಸಿಕೊಳ್ಳಲು ಸಾಧ್ಯವಾಗದೆ, ಮೂರನೇ ಸ್ಥಾನಕ್ಕೆ ಪಕ್ಷ ಕುಸಿದಿದೆ.

ಕಾಂಗ್ರೆಸ್ ಸತತ ಮುನ್ನಡೆ: ಕಾಂಗ್ರೆಸ್ ಆರಂಭದಿಂದಲೇ ಮುನ್ನಡೆ ಕಾಯ್ದು ಕೊಂಡಿತ್ತು. ಒಟ್ಟು 5,547 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಅದರಲ್ಲಿ 227 ಮತಗಳು ತಿರಸ್ಕೃತಗೊಂಡಿದ್ದವು. ಕ್ರಮಬದ್ಧ ಮತಗಳ ಸಂಖ್ಯೆ 5,320. ಇದರಲ್ಲಿ ಅರ್ಧದಷ್ಟು ಮತಗಳ ಜತೆಗೆ ಹೆಚ್ಚುವರಿಯಾಗಿ ಒಂದು ಮತ ಪಡೆದವರು ಆಯ್ಕೆಯಾಗಬೇಕು. ಈ ಲೆಕ್ಕಾಚಾರದಲ್ಲಿ ಗೆಲುವಿಗೆ 2,661 ಮತಗಳ ಗುರಿಯನ್ನು ನಿಗದಿಪಡಿಸಲಾಯಿತು.

ಮೊದಲಪ್ರಾಶಸ್ತ್ಯದ ಮತಗಳ ಎಣಿಕೆ ಪೂರ್ಣಗೊಂಡ ಸಮಯದಲ್ಲಿ ರಾಜೇಂದ್ರ 2,250, ಲೋಕೇಶಗೌಡ 1,757, ಅನಿಲ್ ಕುಮಾರ್ 1,296 ಮತಗಳನ್ನು ಪಡೆದುಕೊಂಡಿದ್ದರು. ಪ್ರಥಮ ಪ್ರಾಶಸ್ತ್ಯದಲ್ಲಿ ಗೆಲುವಿಗೆ ಅಗತ್ಯದಷ್ಟು ಮತಗಳನ್ನು ಯಾರೊಬ್ಬರೂ ಪಡೆದುಕೊಂಡಿರಲಿಲ್ಲ. ಎರಡನೇ ಸುತ್ತಿನಲ್ಲಿ ಎರಡನೇ ಪ್ರಾಶಸ್ತ್ಯದ ಮತಗಳನ್ನು ಎಣಿಕೆ ಮಾಡಲಾಯಿತು. ಅತಿ ಕಡಿಮೆ ಮತಗಳನ್ನು ಪಡೆದಿದ್ದವರಲ್ಲಿ ಎರಡನೇ ಪ್ರಾಶಸ್ತ್ಯದ ಮತಗಳು ಯಾರಿಗೆ ಬಿದ್ದಿವೆ ಎಂಬುದನ್ನು ಎಣಿಕೆ ಮಾಡುತ್ತಾ ಬರಲಾಯಿತು. ಆಗಲೂ ಯಾರಿಗೂ ಗೆಲ್ಲುವಷ್ಟು ಮತಗಳು ಸಿಗಲಿಲ್ಲ.

ಜೆಡಿಎಸ್ ಅಭ್ಯರ್ಥಿ ಅನಿಲ್ ಕುಮಾರ್‌ ಮತಪತ್ರಗಳಲ್ಲಿ ಇದ್ದ ಎರಡನೇ ಪ್ರಾಶಸ್ತ್ಯದ ಮತಗಳನ್ನು ಎಣಿಕೆ ಮಾಡಿದ ಸಮಯದಲ್ಲೂ ಗೆಲುವು ಸಾಧ್ಯವಾಗಲಿಲ್ಲ. ಕೊನೆಯದಾಗಿ ಲೋಕೇಶ್ ಮತಪತ್ರಗಳಲ್ಲಿ ರಾಜೇಂದ್ರ ಅವರಿಗೆ ಬಿದ್ದಿದ್ದ ಎರಡನೇ ಪ್ರಾಶಸ್ತ್ಯದ ಮತಗಳನ್ನು ರಾಜೇಂದ್ರಗೆ ವರ್ಗಾವಣೆ ಮಾಡಲಾಯಿತು. ಅಂತಿಮವಾಗಿ ರಾಜೇಂದ್ರ 3,135, ಲೋಕೇಶ್‌ಗೌಡ 2,050, ಅನಿಲ್ ಕುಮಾರ್‌ 1,298 ಮತಗಳನ್ನು ಪಡೆದುಕೊಂಡರು. ಹಾಗಾಗಿ, ಹೆಚ್ಚು ಮತಗಳನ್ನು ಪಡೆದ ರಾಜೇಂದ್ರ ಆಯ್ಕೆಯನ್ನು ಘೋಷಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.