ADVERTISEMENT

ಶಿರಾ | ಜುಂಜಪ್ಪನ ಕಾವ್ಯ ಒಂದು ಸಮುದಾಯಕ್ಕೆ ಸೀಮಿತವಲ್ಲ: ಡಾ.ರಹಮತ್ ತರೀಕೆರೆ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2026, 5:32 IST
Last Updated 17 ಫೆಬ್ರುವರಿ 2026, 5:32 IST
ಶಿರಾ ತಾಲ್ಲೂಕಿನ ಭೂತಪ್ಪನ ದೇವಸ್ಥಾನದ ಬಳಿ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಭಾನುವಾರ ರಾತ್ರಿ ನಡೆದ ಶಿವೋತ್ಸವದಲ್ಲಿ ಸಾಹಿತಿ ಡಾ.ರಹಮತ್ ತರೀಕೆರೆ ಗಣೆ ಗೌರವ ಸ್ವೀಕರಿಸಿ ಮಾತನಾಡಿದರು
ಶಿರಾ ತಾಲ್ಲೂಕಿನ ಭೂತಪ್ಪನ ದೇವಸ್ಥಾನದ ಬಳಿ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಭಾನುವಾರ ರಾತ್ರಿ ನಡೆದ ಶಿವೋತ್ಸವದಲ್ಲಿ ಸಾಹಿತಿ ಡಾ.ರಹಮತ್ ತರೀಕೆರೆ ಗಣೆ ಗೌರವ ಸ್ವೀಕರಿಸಿ ಮಾತನಾಡಿದರು   

ಶಿರಾ: ‘ಜುಂಜಪ್ಪನ ಮಹಾಕಾವ್ಯ ಕೇವಲ ಮಧ್ಯ ಕರ್ನಾಟಕ ಅಥವಾ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ. ಅದು ಜಗತ್ತಿನ ಮಹಾ ಕಾವ್ಯವಾಗಿದ್ದು ಮನುಷ್ಯ, ನಿಸರ್ಗ, ಪ್ರಾಣಿ ಪಕ್ಷಿಗಳು ಒಂದಾಗಿ ಬಾಳಬೇಕು. ಸಣ್ಣ ಇರುವೆಗೂ ಸಹ ಬದುಕುವ ಹಕ್ಕಿದೆ ಎನ್ನುವ ಸಂದೇಶ ನೀಡಿದ ಮಹಾಕಾವ್ಯ’ ಎಂದು ಸಾಹಿತಿ ಡಾ.ರಹಮತ್ ತರೀಕೆರೆ ಹೇಳಿದರು.

ತಾಲ್ಲೂಕಿನ ಭೂತಪ್ಪನ ದೇವಸ್ಥಾನದ ಬಳಿ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಭಾನುವಾರ ರಾತ್ರಿ ಶಿರಾ ಸೀಮೆ ಸಾಂಸ್ಕೃತಿಕ ವೇದಿಕೆಯಿಂದ ಹುಲ್ಲು ನೀರಿಗಾಗಿ ಪ್ರಾರ್ಥಿಸಿ ಹಮ್ಮಿಕೊಂಡಿದ್ದ ಶಿವೋತ್ಸವದಲ್ಲಿ ಗಣೆ ಗೌರವ ಸ್ವೀಕರಿಸಿ ಮಾತನಾಡಿದರು.

‘ಜಗತ್ತಿನಲ್ಲಿ ಪ್ರಸ್ತುತ ಹುಲ್ಲು ನೀರಿನ ಕೊರತೆಗಿಂತ ಪ್ರೀತಿ ಮತ್ತು ವಿಶ್ವಾಸದ ಕೊರತೆ ಎದ್ದು ಕಾಣುತ್ತಿದೆ. ಭಾರತೀಯರು ಮನಸ್ಸಿನಲ್ಲಿನ ವಿಷ ತೆಗೆದುಹಾಕಿ, ಪ್ರೀತಿ ಮತ್ತು ವಿಶ್ವಾಸದ ಸಂಗೀತ ಹಾಡಬೇಕು. ವಿವಿಧ ನಾದಗಳ ಮೂಲಕ ಉತ್ತಮ ಸಂಗೀತ ಹೊರಬರುವಂತೆ ದೇಶದಲ್ಲಿನ ವಿವಿಧ ಧರ್ಮ, ಜಾತಿ, ಆಚಾರ ವಿಚಾರಗಳ ಜನ ಒಂದೇ ಎಂಬ ಭಾವನೆಯಿಂದ ಸಮಾಜವನ್ನು ಕಟ್ಟಬೇಕು’ ಎಂದರು.

ADVERTISEMENT

‘ನನಗೆ ರಾಷ್ಟ್ರ ಮಟ್ಟದ ಅನೇಕ ಪ್ರಶಸ್ತಿ ಬಂದಿವೆ. ಅವುಗಳಿಗೆ ಪ್ರತಿಷ್ಠೆ ಇದೆ, ಆದರೆ ಈ ಗಣೆ ಗೌರವ ಪ್ರಶಸ್ತಿಗೆ ಪಾವಿತ್ರ್ಯ ಹಾಗೂ ದೈವಿಕತೆ ಇದೆ’ ಎಂದರು.

ಚಿಂತಕ ನಟರಾಜ್ ಬೂದಾಳ್ ಮಾತನಾಡಿ, ‘ರಹಮತ್ ತರೀಕೆರೆ ಮಾನವೀಯ ಮನಸುಳ್ಳವರು. ದೇಶ ವಿದೇಶಗಳಲ್ಲಿ ಜಾನಪದ ನೆಲೆಗಳನ್ನು ಹುಡುಕುತ್ತಾ, ಅಲೆದವರು. ನೆಲಮೂಲ ಸಂಸ್ಕೃತಿಯನ್ನು ತನ್ನದೇ ಆದ ಶೈಲಿಯಲ್ಲಿ ವಿಶಿಷ್ಟವಾಗಿ ಕಟ್ಟಿಕೊಟ್ಟಿರುವ ರಹಮತ್ ಅವರಿಗೆ ಗಣೆ ಗೌರವ ನೀಡಿರುವುದು ನೊಬೆಲ್ ಪ್ರಶಸ್ತಿಗಿಂತ ಹೆಚ್ಚು ಮೌಲ್ಯವುಳ್ಳದ್ದು’ ಎಂದರು.

ಜುಂಜಪ್ಪನ ಮಾನವೀಯತೆ ಕುರಿತು ಮಾತನಾಡಿದ ಜಾನಪದ ವಿದ್ವಾಂಸ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ, ‘ದನಗಳನ್ನು ಅತಿಯಾಗಿ ಪ್ರೀತಿಸುತ್ತಿದ್ದ ಜುಂಜಪ್ಪ ಒಮ್ಮೆ ಹೋರಾಟದ ಮೂಲಕ ರಾಜ್ಯ ಗೆದ್ದರೂ ಸಹ ಸುಖ ಜೀವನ ಅನುಭವಿಸದೆ, ಜಾನುವಾರುಗಳ ಏಳಿಗೆಗೆ ಶ್ರಮಿಸಿದನು. ಮಾಟ-ಮಂತ್ರ ಹಾಗೂ ವೈದಿಕ ನೆಲೆಯ ಕೆಲಸಗಳಿಗೆ ಕಂಟಕನಾಗಿದ್ದನು’ ಎಂದರು.

ರಾಜ್ಯ ಅಲೆಮಾರಿ ಬುಡಕಟ್ಟು ಸಮುದಾಯದ ಉಪಾಧ್ಯಕ್ಷ ಉಜ್ಜಜ್ಜಿ ರಾಜಣ್ಣ, ‘ಪಶುಪಾಲನಾ ವೃತ್ತಿಯೇ ಮುಖ್ಯವಾಗಿದ್ದ ಜುಂಜಪ್ಪನ ಕಾಲದಲ್ಲಿ ವ್ಯಕ್ತಿಯ ಸಂಪತ್ತನ್ನು ಜಾನುವಾರುಗಳ ಆಧಾರದಲ್ಲಿ ಅಳೆಯುತ್ತಿದ್ದರು. ಅಂತಹ ಸಂದರ್ಭದಲ್ಲಿ ಪಶುಪಾಲಕ ಬುಡಕಟ್ಟು ಸಮುದಾಯಗಳು ಸಮೃದ್ಧವಾಗಿದ್ದವು’ ಎಂದರು.

ಕೆ.ರಂಗನಹಳ್ಳಿ ಜುಂಜಣ್ಣ, ಯಲಪೇನಹಳ್ಳಿ ಮಂಜುನಾಥ್ ಅವರ ಕಥನ ಗಾಯನ ಹಾಗೂ ಕುಂಬಾರಹಳ್ಳಿ ಚಿತ್ತಯ್ಯನವರ ಗಣೆವಾದನ, ಕುಂಬಾರಹಳ್ಳಿಯ ಅರೆ ಕಲಾವಿದರು ನಡೆಸಿದ ಅರೆವಾದ್ಯ ಹಾಗೂ ಯಲಪೇನಹಳ್ಳಿ ಮಡಪ್ಪ ಸ್ವಾಮಿ ಕೋಲಾಟ ಕಲಾ ತಂಡದ ಮಕ್ಕಳು ನಡೆಸಿಕೊಟ್ಟ ಕೋಲಾಟ, ಧಾರವಾಡ ರಂಗಾಯಣದ ಕಲಾವಿದರು ಅಭಿನಯಿಸಿದ ಕಂದಗಲ್ಲರಿಗೆ ನಮಸ್ಕಾರ ನಾಟಕ ಪ್ರೇಕ್ಷಕರ ವಿಶೇಷ ಗಮನ ಸೆಳೆದವು.

ಪ್ರಾಂಶುಪಾಲ ಹೊನ್ನಗೊಂಡನಹಳ್ಳಿ ಕರಿಯಣ್ಣ ಜುಂಜಪ್ಪನ ಕುರಿತ ಹಾಡುಗಳನ್ನು ಹಾಡಿದರು. ಶಿರಾ ಸೀಮೆ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಗೋಮಾರದಹಳ್ಳಿ ಮಂಜುನಾಥ್, ಕಾರ್ಯದರ್ಶಿ ಆರ್.ತಿಪ್ಪೇಸ್ವಾಮಿ, ರಂಗ ಸಂಘಟಕ ಅಂಕಸಂದ್ರ ಪ್ರೇಮ್ ಕುಮಾರ್, ಕಳುವರಹಳ್ಳಿ ಸತೀಶ್, ಡಿ ವಿವೇಕಾನಂದ ಹಾಜರಿದ್ದರು.

ಶಿರಾ ತಾಲ್ಲೂಕಿನ ಭೂತಪ್ಪನ ದೇವಸ್ಥಾನದ ಬಳಿ ಮಹಾಶಿವರಾತ್ರಿ ಹಬ್ಬದ ಅಂಗವಾಗಿ ಭಾನುವಾರ ರಾತ್ರಿ ನಡೆದ ಶಿವೋತ್ಸವದಲ್ಲಿ ಸಾಹಿತಿ ಡಾ.ರಹಮತ್ ತರೀಕೆರೆ ಗಣೆ ಗೌರವ ನೀಡಿ ಗೌರವಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.