
ತುಮಕೂರು: ರಾಜ್ಯ ಒಲಿಂಪಿಕ್ಸ್ ಪ್ರಯುಕ್ತ ನಗರದ ಅಮಾನಿಕೆರೆ ಅಂಗಳದಲ್ಲಿ ವಿವಿಧ ಸ್ಪರ್ಧೆಗಳು ನಡೆಯುತ್ತಿವೆ. ಶನಿವಾರ ಕಯಾಕಿಂಗ್ ಮತ್ತು ಕೆನೊಯಿಂಗ್ ಸ್ಪರ್ಧೆ ಆಯೋಜಿಸಲಾಗಿತ್ತು.
ರಾಜ್ಯದ ವಿವಿಧ ಜಿಲ್ಲೆಗಳಿಂದ 9 ತಂಡಗಳು ಭಾಗವಹಿಸಿದ್ದು, 128 ಕ್ರೀಡಾಪಟುಗಳು ಸ್ಪರ್ಧೆಯಲ್ಲಿ ತಮ್ಮ ಸಾಮರ್ಥ್ಯ ತೋರಿದರು. ಕೆರೆಯಲ್ಲಿ ದೋಣಿ ಹತ್ತಿ ಸ್ಪರ್ಧೆಗೆ ಇಳಿದರು. 500 ಮೀಟರ್, 200 ಮೀಟರ್ ದೂರ ಕ್ರಮಿಸಿದರು. ಅಮಾನಿಕೆರೆಗೆ ಭೇಟಿ ನೀಡಿದ ಪ್ರವಾಸಿಗರು ಸ್ಪರ್ಧೆಗಳನ್ನು ಬೆರಗು ಕಣ್ಣುಗಳಿಂದ ನೋಡಿದರು.
ನಾಳೆ ಫೈನಲ್: ಫುಟ್‌ಬಾಲ್ ಪಂದ್ಯಾವಳಿಯಲ್ಲಿ ತಲಾ ಎರಡು ಪಂದ್ಯ ಗೆಲ್ಲುವ ಮೂಲಕ ಕೊಡಗು ಮತ್ತು ಉತ್ತರ ಕನ್ನಡ ತಂಡಗಳು ಸೆಮಿಫೈನಲ್‌ಗೆ ಲಗ್ಗೆ ಇಟ್ಟವು. ನಾಲ್ಕರ ಘಟ್ಟದಲ್ಲಿ ಸ್ಥಾನ ಖಚಿತ ಪಡಿಸಿಕೊಂಡವು. ಸತತವಾಗಿ ಎರಡು ಪಂದ್ಯಗಳಲ್ಲಿ ಸೋತ ಮಂಡ್ಯ, ಹಾಸನ ತಂಡಗಳು ಟೂರ್ನಿಯಿಂದ ನಿರ್ಗಮಿಸಿದವು.
ಕೊಡಗು ತಂಡ ಮಂಡ್ಯದ ವಿರುದ್ಧ 2–0, ಹಾಸನದ ಎದುರು 2–0 ಗೋಲುಗಳ ಮೂಲಕ ಗೆಲುವು ಸಾಧಿಸಿತು. ಬಲಿಷ್ಠ ರಕ್ಷಣಾ ಪಡೆಯ ಕಾರ್ಯತಂತ್ರ ಫಲ ನೀಡಿತು. ಎರಡೂ ಪಂದ್ಯಗಳಲ್ಲಿ ಎದುರಾಳಿಗಳು ಒಂದು ಗೋಲು ಪಡೆಯಲು ಸಾಧ್ಯವಾಗಲಿಲ್ಲ. ಶನಿವಾರ ನಡೆದ ಪಂದ್ಯದಲ್ಲಿ ಉತ್ತರ ಕನ್ನಡ ತಂಡವು 4–1 ರಿಂದ ಹಾಸನ ತಂಡಕ್ಕೆ ಸೋಲುಣಿಸಿತು.
ಬಿ–ಗುಂಪಿನಲ್ಲಿ ಮೈಸೂರು ತಂಡವು ದಾವಣಗೆರೆ ವಿರುದ್ಧ 8-0 ಗೋಲು ಗಳಿಸಿ ದಾಖಲೆ ಗೆಲುವು ಪಡೆಯಿತು. ಮೈಸೂರು ತಂಡದ ಆಟಗಾರರು ವೇಗವಾಗಿ ಗೋಲುಗಳನ್ನು ಗಳಿಸಿದರು. ದಾವಣಗೆರೆ ತಂಡಕ್ಕೆ ಖಾತೆ ತೆರೆಯಲು ಬಿಡಲಿಲ್ಲ. ಜ. 19ರಂದು ಸೆಮಿಫೈನಲ್, ಫೈನಲ್ ಪಂದ್ಯಗಳು ನಡೆಯಲಿವೆ.
ತುಮಕೂರು ತಂಡ ಸೆಮಿಫೈನಲ್‌ಗೆ ನೆಟ್‌ಬಾಲ್ ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ ತುಮಕೂರು ತಂಡ ಸೆಮಿಫೈನಲ್ ಪ್ರವೇಶಿಸಿತು. ಭಾನುವಾರ ದಕ್ಷಿಣ ಕನ್ನಡ ತಂಡವನ್ನು ಎದುರಿಸಲಿದೆ. ಮೈಸೂರು ಮತ್ತು ಹಾಸನದ ಮಧ್ಯೆ ಮತ್ತೊಂದು ಸೆಮಿಫೈನಲ್ ಪಂದ್ಯ ನಡೆಯಲಿದೆ. ಮಹಿಳೆಯರ ವಿಭಾಗದಲ್ಲಿ ದಕ್ಷಿಣ ಕನ್ನಡ ಮತ್ತು ಹಾಸನ ಬೆಂಗಳೂರು ನಗರ ಮತ್ತು ಬೆಂಗಳೂರು ದಕ್ಷಿಣ ತಂಡಗಳು ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಕಬಡ್ಡಿ ಲೀಗ್ ಪಂದ್ಯದಲ್ಲಿ ತುಮಕೂರಿನ ಮಹಿಳಾ ತಂಡವು 43-29 ಅಂಕಗಳಿಂದ ಹಾವೇರಿ ತಂಡವನ್ನು ಮಣಿಸಿ ಶುಭಾರಂಭ ಮಾಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.