ADVERTISEMENT

ತುಮಕೂರು ವಿ.ವಿ ಗ್ರಂಥಾಲಯ ನಾಮಕಾವಸ್ತೆ: ಪುಸ್ತಕ ಸಂಗ್ರಹಕ್ಕೆ ಜಾಗವೇ ಇಲ್ಲ!

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 4:19 IST
Last Updated 6 ನವೆಂಬರ್ 2025, 4:19 IST
ತುಮಕೂರು ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಪುಸ್ತಕದ ರಾಶಿ
ತುಮಕೂರು ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಪುಸ್ತಕದ ರಾಶಿ   

ತುಮಕೂರು: ಜಾಗದ ಕೊರತೆಯಿಂದ ಸಿಬ್ಬಂದಿ ಕಚೇರಿಯಲ್ಲೇ ಉಳಿದ ಪುಸ್ತಕ, ಹೊರಗಡೆ ಕುಳಿತು ಪತ್ರಿಕೆ ಓದುವುದರಲ್ಲಿ ನಿರತರಾಗಿದ್ದ ವಿದ್ಯಾರ್ಥಿಗಳು, ಈಚೆಗೆ ಸುರಿದ ಮಳೆಗೆ ಕಿತ್ತು ಬಂದ ಛಾವಣಿ.... ಇದು ತುಮಕೂರು ವಿಶ್ವವಿದ್ಯಾಲಯ ಆವರಣದಲ್ಲಿರುವ ಮೂರು ಗ್ರಂಥಾಲಯಗಳ ಸದ್ಯದ ಪರಿಸ್ಥಿತಿ...

ಪದವಿ, ಸ್ನಾತಕೋತ್ತರ ಪದವಿ, ಸಂಶೋಧನಾರ್ಥಿಗಳು ಸೇರಿದಂತೆ ಸುಮಾರು 7 ಸಾವಿರ ಮಂದಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಜ್ಞಾನ ಪ್ರಸರಣದ ಕೇಂದ್ರವಾಗಿರುವ ವಿಶ್ವವಿದ್ಯಾಲಯದಲ್ಲಿ ಗ್ರಂಥಾಲಯ ನಾಮಕಾವಸ್ತೆ ಎಂಬಂತೆ ನಡೆಯುತ್ತಿದೆ. ಗ್ರಂಥಪಾಲಕರು, ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದೆ. ಆದರೆ ವಿದ್ಯಾರ್ಥಿಗಳ ಕಲಿಕೆಗೆ ಪೂರಕ ವಾತಾವರಣ ಮಾಯವಾಗಿದೆ. ಮೂರು ಕಡೆಯೂ ಅಗತ್ಯ ಪುಸ್ತಕಗಳಿಲ್ಲ.

ವಿ.ಎಸ್‌.ಆಚಾರ್ಯ ಬ್ಲಾಕ್‌ನಲ್ಲಿ ಸ್ನಾತಕೋತ್ತರ ಪದವಿ ಮತ್ತು ಸಂಶೋಧನಾರ್ಥಿಗಳಿಗೆ ಪ್ರತ್ಯೇಕ ಗ್ರಂಥಾಲಯವಿದೆ. ಇಲ್ಲಿ ಪುಸ್ತಕ ಸಂಗ್ರಹಕ್ಕೆ ಖಾಲಿ ಸ್ಥಳವೇ ಇಲ್ಲ. ಹೊಸದಾಗಿ ಬಂದ ಪುಸ್ತಕಗಳನ್ನು ಎಲ್ಲಿ ಸಂಗ್ರಹಿಸಿಡಬೇಕು ಎಂಬುವುದು ತಿಳಿಯದೆ ಸಿಬ್ಬಂದಿ ಕಚೇರಿಯಲ್ಲಿಯೇ ಗುಡ್ಡೆ ಹಾಕಿದ್ದಾರೆ.

ADVERTISEMENT

‘ಇಲ್ಲಿ 50 ಸಾವಿರಕ್ಕೂ ಹೆಚ್ಚು ಪುಸ್ತಕಗಳಿವೆ’ ಎಂದು ಗ್ರಂಥಪಾಲಕರು ಉತ್ತರಿಸುತ್ತಾರೆ. ಗ್ರಂಥಾಲಯದ ನಾಮಫಲಕದಲ್ಲಿ ಮಾತ್ರ ‘48,709 ಪುಸ್ತಕ ಲಭ್ಯವಿದೆ’ ಎಂಬ ಅಕ್ಷರಗಳು ಕಾಣಿಸುತ್ತವೆ. ಇದರಲ್ಲಿ ಯಾವುದು ಸತ್ಯ ಎಂಬುವುದು ಗ್ರಂಥಪಾಲಕರಿಗೆ ತಿಳಿಯಬೇಕು.

ಡಿಜಿಟಲ್ ಲೈಬ್ರರಿಗೆ ಬೀಗ: ಪಿ.ಜಿ ವಿದ್ಯಾರ್ಥಿಗಳಿಗಾಗಿ 2019ರಲ್ಲಿ ಆರಂಭಿಸಿದ್ದ ಡಿಜಿಟಲ್‌ ಗ್ರಂಥಾಲಯಕ್ಕೆ ಕಳೆದ ಕೆಲ ದಿನಗಳಿಂದ ಬೀಗ ಹಾಕಲಾಗಿದೆ. ಪುಸ್ತಕ ಸಂಗ್ರಹ ಉದ್ದೇಶದಿಂದ ವಿದ್ಯಾರ್ಥಿಗಳ ಬಳಕೆಗೆ ನೀಡುತ್ತಿಲ್ಲ ಎಂಬುದು ಗ್ರಂಥಾಲಯದ ಸಿಬ್ಬಂದಿಯ ಸಿದ್ಧ ಉತ್ತರ. 30ಕ್ಕೂ ಹೆಚ್ಚು ಕಂಪ್ಯೂಟರ್‌ ವ್ಯವಸ್ಥೆ ಮಾಡಿದ್ದು, ಬಳಕೆಗೆ ಸಿಗದಂತಾಗಿದೆ.

‘ಒಂದು ಕಡೆ ಗ್ರಂಥಾಲಯದಲ್ಲಿ ಅಗ‌ತ್ಯ ಪುಸ್ತಕ ಇಲ್ಲ. ಮತ್ತೊಂದು ಕಡೆ ಡಿಜಿಟಲ್‌ ಲೈಬ್ರರಿ ಬಾಗಿಲು ತೆಗೆಯುತ್ತಿಲ್ಲ. ಹೀಗಾದರೆ ಅಧ್ಯಯನ ನಡೆಸುವುದು ಹೇಗೆ? ಸಾವಿರಾರು ರೂಪಾಯಿ ಶುಲ್ಕ ಪಾವತಿಸಿ ವಿಶ್ವವಿದ್ಯಾಲಯಕ್ಕೆ ಪ್ರವೇಶ ಪಡೆದಿದ್ದೇವೆ. ಅಭ್ಯಾಸಕ್ಕೆ ಕನಿಷ್ಠ ಗ್ರಂಥಾಲಯ ಇಲ್ಲದಿದ್ದರೆ ಏನು ಮಾಡುವುದು?’ ಎಂದು ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಯೊಬ್ಬರು ಪ್ರಶ್ನಿಸಿದರು.

ಕಿತ್ತು ಬಂದ ಛಾವಣಿ: ವಿಜ್ಞಾನ ಕಾಲೇಜಿನಲ್ಲಿ ತುಂಬಾ ಹಳೆಯ ಕಟ್ಟಡದಲ್ಲಿ ಗ್ರಂಥಾಲಯ ನಡೆಯುತ್ತಿದೆ. ಕಳೆದ ಬಾರಿ ಸುರಿದ ಮಳೆಗೆ ಕಟ್ಟಡದ ಕೆಲವು ಕಡೆಗಳಲ್ಲಿ ಛಾವಣಿ ಕಿತ್ತು ಬಂದಿದೆ. ಇಲ್ಲಿ ಸುಮಾರು 2 ಸಾವಿರ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಗ್ರಂಥಾಲಯದಲ್ಲಿ 50 ಜನ ಕುಳಿತು ಅಭ್ಯಾಸದಲ್ಲಿ ತೊಡಗಿಸಿಕೊಳ್ಳಲು ಬೇಕಾದ ಸ್ಥಳಾವಕಾಶವೇ ಇಲ್ಲವಾಗಿದೆ ಎಂಬುದು ವಿದ್ಯಾರ್ಥಿಗಳ ಅಳಲು.

ವಿ.ವಿ ಡಿಜಿಟಲ್‌ ಗ್ರಂಥಾಲಯಕ್ಕೆ ಬೀಗ ಹಾಕಿರುವುದು
ತುಮಕೂರು ಕಲಾ ಕಾಲೇಜಿನ ಗ್ರಂಥಾಲಯದ ಹೊರಗೆ ವಿದ್ಯಾರ್ಥಿಗಳ ಅಭ್ಯಾಸ

ಗ್ರಂಥಾಲಯದಲ್ಲಿ ತರಗತಿ

ಕಲಾ ಕಾಲೇಜಿನ ಸ್ಥಿತಿ ಉಳಿದ ಎರಡು ಗ್ರಂಥಾಲಯಕ್ಕಿಂತ ಶೋಚನೀಯವಾಗಿದೆ. ಗ್ರಂಥಾಲಯದ ಮುಂಭಾಗ ಚಪ್ಪಲಿ ಬಿಡುವ ಜಾಗದಲ್ಲಿ ವಿದ್ಯಾರ್ಥಿಗಳು ಅಭ್ಯಾಸ ನಡೆಸುತ್ತಿದ್ದಾರೆ. ಕೊಠಡಿಗಳ ಕೊರತೆಯಿಂದ ಗ್ರಂಥಾಲಯದ ಒಂದು ಕಡೆ ತರಗತಿ ನಡೆಸಲಾಗುತ್ತಿದೆ. ಉಳಿದಿರುವ ತುಂಬಾ ಕಿರಿದಾದ ಜಾಗದಲ್ಲಿ ಪುಸ್ತಕಗಳನ್ನು ಜೋಡಿಸಲಾಗಿದೆ. ಹಲವು ವರ್ಷಗಳಿಂದ ಇದೇ ಸ್ಥಿತಿ ಇದ್ದರೂ ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಕಾಲೇಜಿನಲ್ಲಿ ಪ್ರಸ್ತುತ 2500ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕವಿಲ್ಲ

ವಿ.ವಿ ಮೂರು ಗ್ರಂಥಾಲಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗೆ ಬೇಕಾದ ಪುಸ್ತಕಗಳಿಲ್ಲ. ದಿನ ಪತ್ರಿಕೆ ಹೊರತುಪಡಿಸಿದರೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸಲು ಅಗತ್ಯ ಪುಸ್ತಕಗಳು ಇಲ್ಲ. ‘ಯಾವ ಪುಸ್ತಕ ಯಾವ ರ್‍ಯಾಕ್‌ನಲ್ಲಿದೆ ಎಂಬ ಮಾಹಿತಿ ಇಲ್ಲಿನ ಸಿಬ್ಬಂದಿಗೆ ಇಲ್ಲ. ವಿದ್ಯಾರ್ಥಿಗಳು ಕೇಳಿದರೆ ‘ಗೊತ್ತಿಲ್ಲ ಹೋಗಿ ಹುಡುಕಿಕೊಳ್ಳಿ’ ಎನ್ನುತ್ತಾರೆ. ನಿರ್ವಹಣೆಯೂ ಸರಿಯಾಗಿಲ್ಲ ಹೆಸರಿಗೆ ಮಾತ್ರ ಲೈಬ್ರರಿ’ ಎಂದು ವಿದ್ಯಾರ್ಥಿಯೊಬ್ಬರು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.