ADVERTISEMENT

ತುಮಕೂರಿನಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹಿನ್ನಡೆ: ಶೈಕ್ಷಣಿಕ ‘ಕೋಡಿಗೆ ಮುಕ್ಕು’

ಮೊದಲ ಹತ್ತು ಜಿಲ್ಲೆಗಳಲ್ಲಿ ಸ್ಥಾನ ಪಡೆಯಲು ತಿಣುಕಾಟ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2020, 10:59 IST
Last Updated 12 ಆಗಸ್ಟ್ 2020, 10:59 IST

ತುಮಕೂರು: ಶಿಕ್ಷಣಕ್ಕೆ ಹೆಸರಾಗಿರುವ ಜಿಲ್ಲೆಯು ಈ ಬಾರಿಯೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಿರೀಕ್ಷೆಯಂತೆ ಫಲಿತಾಂಶ ಪಡೆದಿಲ್ಲ. ಫಲಿತಾಂಶದಲ್ಲಿ ‘ಬಿ’ ಶ್ರೇಣಿಗೆ ಕುಸಿದಿರುವುದು ಶೈಕ್ಷಣಿಕ ಜಿಲ್ಲೆಯ ಖ್ಯಾತಿಗೆ ಮುಕ್ಕಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಪ್ರತಿ ವರ್ಷವೂ ತುಮಕೂರು ಮತ್ತು ಮಧುಗಿರಿ ಎರಡು ಶೈಕ್ಷಣಿಕ ಜಿಲ್ಲೆಗಳು ಪೈಪೋಟಿಗೆ ಬಿದ್ದಂತೆ ಫಲಿತಾಂಶದಲ್ಲಿ ಮುಂದಿರುತ್ತಿದ್ದವು. ಈ ಬಾರಿ ಮಧುಗಿರಿ ಶೈಕ್ಷಣಿಕ ಜಿಲ್ಲೆ ನಿರೀಕ್ಷೆಗೂ ಮೀರಿ ಫಲಿತಾಂಶ ಪಡೆದರೆ, ತುಮಕೂರು ಸ್ವಲ್ಪ ಮಟ್ಟಿಗೆ ಮುಗ್ಗರಿಸಿದೆ.

ಈ ಬಾರಿಯೂ ಫಲಿತಾಂಶದ ಹೆಚ್ಚಳಕ್ಕೆ ಇನ್ನಿಲ್ಲದ ಪ್ರಯತ್ನ ನಡೆದಿತ್ತು. ಶಿಕ್ಷಣ ಇಲಾಖೆ ಹತ್ತು, ಹಲವು ಕಾರ್ಯಕ್ರಮಗಳನ್ನು ರೂಪಿಸಿತ್ತು. ಫಲಿತಾಂಶದ ಹಿನ್ನಡೆಗೆ ಎಲ್ಲಿ ಲೋಪವಾಯಿತು ಎಂಬುದು ಗೊತ್ತಾಗುತ್ತಿಲ್ಲ. ಈ ಬಗ್ಗೆ ಶಿಕ್ಷಕರು, ಶಿಕ್ಷಣ ಇಲಾಖೆ ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದಾರೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ADVERTISEMENT

ಒಮ್ಮೆ 4ನೇ ಸ್ಥಾನ: ತುಮಕೂರು ಜಿಲ್ಲೆ ಶೈಕ್ಷಣಿಕವಾಗಿ ಪ್ರಾಬಲ್ಯ ಸಾಧಿಸಿದ್ದರೂ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಮೊದಲ ಹತ್ತು ಜಿಲ್ಲೆಗಳಲ್ಲಿ ಸ್ಥಾನ ಪಡೆಯಲು ತಿಣುಕಾಡುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ 2012ರಲ್ಲಿ ಮಾತ್ರವೇ 4ನೇ ಸ್ಥಾನ ಪಡೆದಿತ್ತು. 2013 ಹಾಗೂ 2018ರಲ್ಲಿ 10ನೇ ಸ್ಥಾನ ಕಾಪಾಡಿಕೊಂಡಿತ್ತು. ಉಳಿದಂತೆ 2014ರಲ್ಲಿ 13ನೇ ಸ್ಥಾನ, 2015ರಲ್ಲಿ 12ನೇ, 2016ರಲ್ಲಿ 23ನೇ, 2017ರಲ್ಲಿ 32ನೇ, 2019ರಲ್ಲಿ 18ನೇ, ಹಾಗೂ 2020ರಲ್ಲಿ 14ನೇ ಸ್ಥಾನ (ಬಿ ಶ್ರೇಣಿ) ಪಡೆದುಕೊಂಡಿದೆ.

ತುಮಕೂರು ಶೈಕ್ಷಣಿಕ ಜಿಲ್ಲೆಯಲ್ಲಿ ಈ ಬಾರಿ 23,783 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಆದರೆ, ಎಷ್ಟು ಮಂದಿ ಅನುತ್ತೀರ್ಣರಾಗಿದ್ದಾರೆ ಎಂಬ ಮಾಹಿತಿ ಇನ್ನೂ ಡಿಡಿಪಿಐ ಕಚೇರಿಗೆ ತಲುಪಿಲ್ಲ. ಜಿಲ್ಲೆಯಲ್ಲಿ 190 ಶಾಲೆಗಳಿಗೆ ‘ಎ’ ಶ್ರೇಣಿ, 167 ಶಾಲೆಗಳಿಗೆ ‘ಬಿ’ ಶ್ರೇಣಿ ಹಾಗೂ 101 ಶಾಲೆಗಳಿಗೆ ‘ಸಿ’ ಶ್ರೇಣಿ ಬಂದಿರುವುದು ಮಾತ್ರವೇ ತಿಳಿದುಬಂದಿದೆ.

‘ಎ’ ಶ್ರೇಣಿ ನಿರೀಕ್ಷೆ ಇತ್ತು

ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ‘ಎ’ ಶ್ರೇಣಿ ನಿರೀಕ್ಷೆಯಲ್ಲಿದ್ದೆವು. ‘ಬಿ’ ಶ್ರೇಣಿ ಬಂದಿರುವುದು ಸಹಜವಾಗಿ ಬೇಸರ ತರಿಸಿದೆ. ಮುಂದಿನ ದಿನಗಳಲ್ಲಿ ‘ಎ’ ಶ್ರೇಣಿ ಫಲಿತಾಂಶ ಪಡೆಯಲು ಶ್ರಮಿಸಲಾಗುವುದು. ನ್ಯೂನ್ಯತೆಗಳನ್ನು ಸರಿಪಡಿಸಿಕೊಂಡು ಪರಿಹಾರಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುವುದು. ಶಿಕ್ಷಕರು, ಮಕ್ಕಳು, ಪೋಷಕರು ಹಾಗೂ ಇಲಾಖೆ ನಿರ್ದೇಶನ ಪಡೆದುಕೊಂಡು ಫಲಿತಾಂಶ ವೃದ್ಧಿಗೆ ಕ್ರಮ ವಹಿಸಲಾಗುವುದು ಎಂದು ಡಿಡಿಪಿಐ ಸಿ.ನಂಜಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.