ADVERTISEMENT

ಕೊರಟಗೆರೆ | ಪಾಲನೆಯಾಗದ ಸಂಚಾರ ನಿಯಮ: ದಟ್ಟ ಹೊಗೆ ಸೂಸುವ ವಾಹನ

ಎ.ಆರ್.ಚಿದಂಬರ
Published 15 ಜುಲೈ 2024, 7:38 IST
Last Updated 15 ಜುಲೈ 2024, 7:38 IST
ಹೊಗೆ ಸೂಸುವ ಸರ್ಕಾರಿ ಬಸ್‌
ಹೊಗೆ ಸೂಸುವ ಸರ್ಕಾರಿ ಬಸ್‌   

ಕೊರಟಗೆರೆ: ತಾಲ್ಲೂಕಿನಲ್ಲಿ ಸಂಚರಿಸುವ ಬಹುತೇಕ ಕೆಎಸ್‌ಆರ್‌ಟಿಸಿ ಬಸ್‌ಗಳು ಅತಿಹೆಚ್ಚು ಹೊಗೆ ಹೊರ ಸೂಸುತ್ತವೆ ಎಂದು ಸಾರ್ವಜನಿಕರು ದೂರಿದ್ದಾರೆ.

ಹೊಗೆ ತಪಾಸಣೆ ಮಾಡಿಸದ ಸಾರ್ವಜನಿಕರ ದ್ವಿಚಕ್ರ ವಾಹನಗಳಿಗೆ ದಂಡ ವಿಧಿಸುವ ಪೊಲೀಸ್ ಹಾಗೂ ಸಾರಿಗೆ ಅಧಿಕಾರಿಗಳು ಸರ್ಕಾರಿ ಬಸ್‌ಗಳು ಹೊಗೆ ಸೂಸಿಕೊಂಡು ಓಡಾಡುತ್ತಿದ್ದರೂ ಯಾವುದೇ ಕ್ರಮ ವಹಿಸುತ್ತಿಲ್ಲ. ಸರ್ಕಾರಿ ವಾಹನಗಳಿಗೆ ಒಂದು ನಿಯಮ, ಜನರ ವಾಹನಗಳಿಗೆ ಒಂದು ನಿಯಮ ಇದೆಯೇ ಎಂದು ಜನರು ಪ್ರಶ್ನಿಸಿದ್ದಾರೆ.

ಇಂತಹ ನೂರಾರು ವಾಹನಗಳು ನಿತ್ಯ ತಾಲ್ಲೂಕಿನಲ್ಲಿ ಸಂಚರಿಸುತ್ತಿವೆ. ತುಮಕೂರು, ಮಧುಗಿರಿ, ಪಾವಗಡ, ಗೌರಿಬಿದನೂರು, ನೆಲಮಂಗಲ ಹಾಗೂ ಬೆಂಗಳೂರು ಕೇಂದ್ರ ಡಿಪೊಗೆ ಸೇರಿದ ಬಸ್‌ಗಳು ಬಹುತೇಕವಾಗಿ ತಾಲ್ಲೂಕಿನಲ್ಲಿ ಸಂಚರಿಸುತ್ತವೆ. ಅವುಗಳಲ್ಲಿ ಶೇ 80ರಿಂದ 90ರಷ್ಟು ಬಸ್‌ಗಳು ಪ್ರತಿ ದಿನ ಹೆಚ್ಚಿನ ಪ್ರಮಾಣದಲ್ಲಿ ಹೊಗೆ ಸೂಸುತ್ತಿವೆ.

ADVERTISEMENT

‘ಅನೇಕ ಬಸ್‌ಗಳಿಗೆ ಸಕಾಲದಲ್ಲಿ ಸರ್ವಿಸ್‌ ಮಾಡುವುದಿಲ್ಲ. ಬಸ್ ದುರಸ್ತಿಯಲ್ಲಿದ್ದರೂ ಮಾರ್ಗಕ್ಕೆ ಹೋಗಿ ಎಂದು ಚಾಲಕರ ಮೇಲೆ ಒತ್ತಡ ಹೇರಲಾಗುತ್ತದೆ. ಎಷ್ಟೋ ಬಸ್‌ಗಳಿಗೆ ಬ್ರೇಕ್ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇಂಜಿನ್ ಆಯಿಲ್ ಬದಲಾಯಿಸಿ ಹಲವು ದಿನಗಳೇ ಆಗಿದೆ. ಬಹಳಷ್ಟು ಬಸ್‌ಗಳಲ್ಲಿ ಹೆಚ್ಚುವರಿ (ಸ್ಟೆಪ್ನಿ) ಟೈರ್ ಕೂಡ ಇರುವುದಿಲ್ಲ. ಪಂಕ್ಚರ್‌ ಆದರೆ ಇಡೀ ದಿನ ನಿಂತಲ್ಲೇ ನಿಲ್ಲಬೇಕಾದ ಸ್ಥಿತಿ ಇದೆ. ಸಕಾಲದಲ್ಲಿ ಆಯಿಲ್ ಬವದಲಾಯಿಸದ ಕಾರಣ ವಾಹನ ದಟ್ಟ ಹೊಗೆ ಸೂಸುತ್ತದೆ’ ಎಂದು ಸಿಬ್ಬಂದಿಯೊಬ್ಬರು ಹೇಳಿದರು.

ಖಾಸಗಿ ಬಸ್ ಹಾಗೂ ಲಾರಿಗಳು ಈ ರೀತಿ ಹೊಗೆ ಸೂಸುತ್ತಾ ಓಡಾಡಿದರೆ ಪೊಲೀಸ್ ಹಾಗೂ ಸಾರಿಗೆ ಅಧಿಕಾರಿಗಳು ರಸ್ತೆ ಮಧ್ಯೆ ಹಿಡಿದು ಸಾವಿರಾರು ರೂಪಾಯಿ ದಂಡ ವಿಧಿಸುವ ಜೊತೆಗೆ ವಾಹನ ಜಪ್ತಿ ಮಾಡುತ್ತಾರೆ. ಸರ್ಕಾರಿ ವಾಹನಗಳ ಮೇಲೆ ಕ್ರಮ ಏಕಿಲ್ಲ ಎಂದು ಸಾರ್ವಜನಿಕರು ‍ಪ್ರಶ್ನಿಸದ್ದಾರೆ.

ಸರ್ಕಾರದ ಎಷ್ಟೊ ಲಘು ಹಾಗೂ ಭಾರಿ ವಾಹನಗಳು ವಾಹನ ವಿಮೆ ಇಲ್ಲದೆ ಓಡಾಡುತ್ತಿರುವ ನಿದರ್ಶನಗಳಿವೆ. ಕೆಲ ವಾಹನಗಳು ಫಿಟ್ನೆಸ್ ಕಳೆದುಕೊಂಡು ಓಡಾಡುತ್ತಿವೆ. ಎಲ್ಲ ವಾಹನಗಳಿಗೆ ಎಚ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲು ಸರ್ಕಾರ ಆದೇಶ ಹೊರಡಿಸಿದೆ. ಆದರೆ ಬಹಳಷ್ಟು ಸರ್ಕಾರದ ವಾಹನಗಳಿಗೆ ಈ ನಿಯಮ ಪಾಲನೆಯಾಗಿಲ್ಲ ಎಂದೂ ಸ್ಥಳೀಯರು ದೂರಿದ್ದಾರೆ.

ಪಟ್ಟಣ ಸೇರಿದಂತೆ ತಾಲ್ಲೂಕಿನ ಹಲವೆಡೆ ಅಧಿಕಾರಿಗಳು ವಾಹನಗಳನ್ನು ತಡೆದು ಪರೀಕ್ಷಿಸುತ್ತಾರೆ. ಹೊಗೆ ತಪಾಸಣೆ ಮಾಡಿಸದ ವಾಹನಗಳಿಗೆ ದಂಡ ಹಾಕುತ್ತಾರೆ. ಆದರೆ ಸರ್ಕಾರಿ ಬಸ್‌ಗಳು ನಿತ್ಯ ಹೊಗೆ ಸೂಸುತ್ತಲೇ ಓಡಾಡುತ್ತಿದ್ದರೂ ಕ್ರಮವಹಿಸಲ್ಲ ಏಕೆ?
ಸಿ.ಡಿ.ಪ್ರಭಾಕರ ಶಿಕ್ಷಕ
ಸರ್ಕಾರಿ ಬಸ್‌ಗಳನ್ನು ಸಕಾಲದಲ್ಲಿ ಸರ್ವಿಸ್‌ ಮಾಡದ ಕಾರಣ ಹೆಚ್ಚು ಹೊಗೆ ಸೂಸುವ ಹಂತಕ್ಕೆ ತಲುಪುತ್ತವೆ. ಸಂಬಂಧಪಟ್ಟ ಅಧಿಕಾರಿಗಳ ನಿರ್ಲಕ್ಷವೇ ಇದಕ್ಕೆ ಕಾರಣ. ಕಾನೂನು ಎಲ್ಲರಿಗೂ ಒಂದೆ. ಆದರೆ ಸರ್ಕಾರಿ ವಾಹನಗಳಲ್ಲಿ ನಿಯಮ ಪಾಲನೆಯಾಗುತ್ತಿಲ್ಲ.
ಭೀಮರಾಜು ಗ್ರಾ.ಪಂ.ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.