ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ
ತುಮಕೂರು: ಮುಂದಿನ ಚುನಾವಣೆಯಲ್ಲಿ ತುಮಕೂರಿನಿಂದ ಸ್ಪರ್ಧಿಸುವುದಿಲ್ಲ. ಬೇರೆ ಕ್ಷೇತ್ರಕ್ಕೆ ಹೋಗುವ ಚಿಂತನೆ ನಡೆಸಿದ್ದೇನೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
'ಪಕ್ಷದ ವರಿಷ್ಠರು ದಿಢೀರನೆ ನನ್ನನ್ನು ತುಮಕೂರು ಕ್ಷೇತ್ರಕ್ಕೆ ಕಳುಹಿಸಿಕೊಟ್ಟರು. ಅಲ್ಲಿ 50 ವರ್ಷಗಳಿಂದ ಆಗಬೇಕಾಗಿದ್ದ ಕೆಲಸಗಳನ್ನೆಲ್ಲಾ ಮಾಡುವುದಕ್ಕೆ ಕೇವಲ ಒಂದು ವರ್ಷದಲ್ಲಿ ಚಾಲನೆ ಕೊಟ್ಟಿದ್ದೇನೆ. ಅಲ್ಲಿ ಸಾವಿರಾರು ಕೋಟಿ ರೂಪಾಯಿ ಮೊತ್ತದಲ್ಲಿ 23ಕ್ಕೂ ಹೆಚ್ಚು ಕೆಳಸೇತುವೆ ಹಾಗೂ ಮೇಲ್ಸೇತುವೆ ಕಾಮಗಾರಿಗಳು ನಡೆಯುತ್ತಿವೆ. ರಾಯದುರ್ಗ–ತುಮಕೂರು, ತುಮಕೂರು–ದಾವಣಗೆರೆ ಮಾರ್ಗದ ನಿರ್ಮಾಣ ಕಾರ್ಯ ಒಂದು ಹಂತಕ್ಕೆ ಬಂದಿದೆ. ತುಮಕೂರಿಗೆ ಬೈಪಾಸ್ ಕೂಡ ಆಗುತ್ತಿದ್ದು, ಕೆಲಸವೂ ನಡೆದಿದೆ' ಎಂದಿದ್ದಾರೆ.
'ಶಿರಾದಿಂದ–ಬಡುವನಹಳ್ಳಿ–ಬೈರನಹಳ್ಳಿ– ಚಿಕ್ಕಬಳ್ಳಾಪುರ ಮಾರ್ಗವಾಗಿ ತುಮಕೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೊಂದು ರಾಷ್ಟ್ರೀಯ ಹೆದ್ದಾರಿ ಸೃಷ್ಟಿಸಲು ಕೆಲಸ ಆರಂಭಿಸಿದ್ದೇನೆ. ಐದು ವರ್ಷಗಳಲ್ಲಿ ಎಲ್ಲವನ್ನೂ ಪೂರೈಸುವುದರಿಂದ, ಮುಂದಿನ ಚುನಾವಣೆಯಲ್ಲಿ ನಾನು ಅಲ್ಲಿ ಸ್ಪರ್ಧಿಸುವುದಿಲ್ಲ. ಮತ್ತೆಲ್ಲಾದರೂ ಹೋಗೋಣ ಎಂಬ ಚಿಂತನೆ ನಡೆಸಿದ್ದೇನೆ. ಹಾಸನ–ತಿಪಟೂರು–ಚಿಕ್ಕನಾಯಕನಹಳ್ಳಿ ಮಾರ್ಗದ ಕಾಮಗಾರಿ 50 ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ₹ 4,800 ಕೋಟಿ ಮೊತ್ತದ ಕಾಮಗಾರಿಗೆ ಸಮೀಕ್ಷೆ, ಟೆಂಡರ್ ಆಗಿದ್ದು, ಕೆಲಸ ಶುರು ಮಾಡಲಿದ್ದೇವೆ. 50 ವರ್ಷದಲ್ಲಾಗಬೇಕಿದ್ದ ಕೆಲಸ ಒಮ್ಮೆಲೇ ಮಾಡಿರುವ ಹೆಮ್ಮೆಯಿಂದ, ಮತ್ತೆ ಅಲ್ಲಿ ಕಣಕ್ಕಿಳಿಯುವುದಿಲ್ಲ' ಎಂದು ಹೇಳಿದ್ದೇನೆ.
'ನಮ್ಮ ನಾಯಕರು ಏನು ಹೇಳುತ್ತಾರೆಯೋ, ಎಲ್ಲಿ ಸ್ಪರ್ಧಿಸು ಎನ್ನುತ್ತಾರೆಯೋ ಹಾಗೆ ಮಾಡುತ್ತೇನೆ' ಎಂದು ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.